



ಅಯೋಧ್ಯೆ: ಅಯೋಧ್ಯೆಯ ಐತಿಹಾಸಿಕ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಇಂದು ಪ್ರಧಾನಿ ನರೇಂದ್ರ ಮೋದಿ ಬೆಳ್ಳಿ ಇಟ್ಟಿಗೆ ಇರಿಸುವ ಮೂಲಕ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ್ದಾರೆ.
ಸಮಸ್ತ ದೇಶದ ಪ್ರತಿನಿಧಿಯಾಗಿ, ನರೇಂದ್ರ ಮೋದಿ ಹೆಸರಿನ ನಾನು ದೇಶದ ಪ್ರತಿನಿಧಿಯಾಗಿ ಭೂಮಿಪೂಜೆ ಮಾಡುತ್ತೇನೆ ಎಂದು ಮೋದಿ ಸಂಕಲ್ಪ ಮಾಡಿದರು.
ನಂತರ ಮಾತನಾಡಿದ ಅವರು ”ದೇಶಕ್ಕೆ ಇದು ಭಾವನಾತ್ಮಕ ಕ್ಷಣ, ಪ್ರತಿ ಹೃದಯವು ಪ್ರಕಾಶಿಸಿದೆ” ಎಂದು ಹೇಳಿದ್ದಾರೆ.
‘ಈ ಸಂದರ್ಭದಲ್ಲಿ ದೇಶದ ಪ್ರತಿ ಹೃದಯವು ಪ್ರಕಾಶಿಸುತ್ತಿದ್ದು ಇದು ದೇಶಕ್ಕೆ ಭಾವನಾತ್ಮಕ ಕ್ಷಣ. ಬಹು ಕಾಲದಿಂದ ಕಾಯುತ್ತಿದ್ದ ದಿನ ಇಂದು ಮುಕ್ತಾಯ ಕಂಡಿದೆ. ರಾಮ ಜನ್ಮ ಭೂಮಿಯಾದ ಅಯೋಧ್ಯೆಯಲ್ಲಿ ನಮ್ಮ ರಾಮ ಲಲ್ಲಾನಿಗೆ ಭವ್ಯ ರಾಮ ಮಂದಿರವು ನಿರ್ಮಾಣವಾಗುತ್ತದೆ” ಎಂದರು. ಈ ರಾಮ ಮಂದಿರ ನಿರ್ಮಾಣದಿಂದಾಗಿ ಬರೀ ಇತಿಹಾಸ ನಿರ್ಮಾಣವಾಗುವುದಿಲ್ಲ ಬದಲಾಗಿ ಇತಿಹಾಸ ಪುನಾರಾವರ್ತನೆಯಾಗುತ್ತದೆ. ಭಗವಂತ ರಾಮನಿಗೆ ಬುಡಕಟ್ಟು ಜನಾಂಗ, ಮೀನುಗಾರರು ಸಹಾಯ ಮಾಡಿದ್ದಂತೆ, ಭಗವಂತ ಕೃಷ್ಣನಿಗೆ ಮಕ್ಕಳು ಗೋವರ್ಧನ ಪರ್ವತ ಎತ್ತಲು ಸಹಾಯ ಮಾಡಿದ್ದಂತೆ, ನಮ್ಮೆಲ್ಲರ ಸಹಾಯದಿಂದ ರಾಮ ಮಂದಿರ ನಿರ್ಮಾಣ ಕಾರ್ಯ ಸಂಪೂರ್ಣವಾಗುತ್ತದೆ” ಎಂದು ಹೇಳಿದ್ದಾರೆ.
ಇನ್ನು ಅಯೋಧ್ಯೆ ರಾಮ ಮಂದಿರದ ಕುರಿತು, ದೇವಾಲಯದ ಮುಖ್ಯ ವಾಸ್ತುಶಿಲ್ಪಿ ಸಿ.ಸೊಂಪುರ ಅವರ ಪುತ್ರ ಹಾಗೂ ವಾಸ್ತುಶಿಲ್ಪಿ ನಿಖಿಲ್ ಸೊಂಪುರ ಅವರು, ಸುಮಾರು 161 ಅಡಿ ಎತ್ತರದ ಭವ್ಯ ರಾಮ ಮಂದಿರದ ನಿರ್ಮಾಣ ಕಾಮಗಾರಿಯು ಸುಮಾರು 3 ರಿಂದ 3.5 ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಭೂ ವ್ಯಾಜ್ಯ ಪ್ರಕರಣದಲ್ಲಿ ನವೆಂಬರ್ನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ದೇಗುಲದ ಮೂಲ ಯೋಜನೆಯನ್ನು ಬದಲಿಸಿ ಹೊಸ ಯೋಜನೆ ಸಿದ್ಧಪಡಿಸಲಾಗಿದೆ. ”ಈ ಮೊದಲು ಸುಮಾರು 141 ಅಡಿ ಎತ್ತರದ ರಾಮಮಂದಿರ ನಿರ್ಮಾಣಕ್ಕೆ ನಿರ್ಧರಿಸಲಾಗಿದ್ದು, ಇತ್ತೀಚೆಗೆ ಇದನ್ನು 20 ಅಡಿ ಹೆಚ್ಚಳ ಮಾಡಿ 161 ಅಡಿ ಎತ್ತರದ ಮಂದಿರ ನಿರ್ಮಿಸಲಾಗುವುದು” ಎಂದು ತಿಳಿಸಿದ್ದಾರೆ. ”ಹಾಗೆಯೇ ರಾಮಮಂದಿರಕ್ಕೆ ಬರುವ ಭಕ್ತಾಧಿಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇರುವ ಹಿನ್ನೆಲೆ ಎತ್ತರವನ್ನು ಹೆಚ್ಚಿಸಲಾಗಿದೆ” ಎಂದಿದ್ದಾರೆ.






