ಬಂಟ್ವಾಳ: ರಾತ್ರಿಯಿಂದ ನಿರಂತರವಾಗಿ ಸುರಿಯುವ ಮಳೆಗೆ ಗುಡ್ಡ ಜರಿದು ನಿರ್ಮಾಣ ಹಂತದಲ್ಲಿರುವ ಸರಕಾರಿ ಸ್ವಾಮ್ಯದ ಕಟ್ಟಡದ ಪಿಲ್ಲರ್ ಗಳು ಮಣ್ಣಿನೊಳಗೆ ಸಿಲುಕಿರುವ ಘಟನೆ ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲಾಯಿ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಅಪಾಯಕಾರಿ ಗುಡ್ಡದ ಕೆಳಗೆ ಹಾಸ್ಟೆಲ್ ನಿರ್ಮಾಣವಾಗುತ್ತಿದ್ದು, ಇದು ಅವೈಜ್ಞಾನಿಕ ಎಂದು ಸ್ಥಳೀಯರ ಆರೋಪದ ಮಧ್ಯೆಯೂ ಕಟ್ಟಡದ ಕಾಮಗಾರಿ ಮುಂದುವರಿದಿತ್ತು.


ಅಮ್ಮುಂಜೆ ಗ್ರಾಮದ ಬೆಂಜನಪದವುನಲ್ಲಿ ನಿರ್ಮಾಣವಾಗುತ್ತಿರುವ ಅಲ್ಪಸಂಖ್ಯಾತರ ಇಲಾಖೆಯ ಹಾಸ್ಟೆಲ್ ಕಟ್ಟಡ ಕಾಮಗಾರಿ ಅಪಾಯಕಾರಿ ಗುಡ್ಡದ ಪಕ್ಕದಲ್ಲಿರುವ ಹಿನ್ನೆಲೆಯಲ್ಲಿ ಕಾರಣ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಲೋಕೋಪಯೋಗಿ ಇಲಾಖೆ ತಿಳಿಸಿದ್ದು, ಆದರೆ ಕಾಮಗಾರಿ ಮಾತ್ರ ನಡೆಯುತ್ತಿದೆ ಎಂದು ಆರೋಪಿಸಿ ಬೆಂಜನಪದವು ಕದಂಬ ಮನೆ ನಿವಾಸಿ ಜಿ.ಶಂಕರ ಶೆಟ್ಟಿ ಅವರು ಬಂಟ್ವಾಳ ಶಾಸಕರು ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.


ದೂರನ್ನು ಲೆಕ್ಕಿಸದೆ ನಡೆದ ಹಾಸ್ಟೆಲ್ ನಿರ್ಮಾಣದ ಕಾಮಗಾರಿಯು ಇದೀಗ ಗುಡ್ಡ ಜರಿದು ಪಿಲ್ಲರ್ ಮಣ್ಣಿನೊಳಗೆ ಹೂತುಹೋಗಿ ಸರಕಾರದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ಶಂಕರ್ ಶೆಟ್ಟಿ ಆರೋಪ ಮಾಡಿದ್ದಾರೆ.
ಎರಡು ಬಾರಿ ಗುಡ್ಡ ಜರಿತ:
ಈ ಕಾಮಗಾರಿ ಅವೈಜ್ಞಾನಿಕ ಮತ್ತು ಅಪಾಯಕಾರಿಯಾಗಿದೆ ಎಂದು ಸ್ಥಳೀಯ ರು ದೂರು ನೀಡಿದ್ದರು ಕೂಡಾ ಇಲಾಖೆಯ ಸ್ಪಂದನೆ ಸರಿಯಾದ ರೀತಿಯಲ್ಲಿ ಇರದಿದ್ದ ಕಾರಣ ಕಾಮಗಾರಿ ಮುಂದುವರಿದಿತ್ತು.
ಈ ಕಾಮಗಾರಿಯ ಮಧ್ಯೆ ಎರಡು ಬಾರಿ ಗುಡ್ಡ ಜರಿದು ಪಿಲ್ಲರ್ ಗಳು ಮಣ್ಣಿನ ಒಳಗೆ ಸಿಲುಕಿಕೊಂಡು ಸಾಕಷ್ಟು ಸರಕಾರಕ್ಕೆ ನಷ್ಟ ವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.

ವಾರಗಳ ಹಿಂದೆ ವರದಿ ಪ್ರಕಟ:

ಮಡಿಕೇರಿ ಹಾಗೂ ಮಂಗಳೂರಿನ ಗುರುಪುರ ಗುಡ್ಡ ಜರಿದ ಪ್ರಕರಣ ಕಣ್ಣಿನಿಂದ ಮಾಸುವ ಮೊದಲು ಬೆಂಜನಪದವಿನಲ್ಲಿಯೂ ಇಂತಹ ಘಟನೆ ನಡೆಯಲು ಅಧಿಕಾರಿಗಳು ಪರೋಕ್ಷವಾಗಿ ಬೆಂಬಲ ನೀಡುತ್ತಾರೆ ಯೇ ಎಂಬ ಸಂಶಯಗಳು ವ್ಯಕ್ತವಾಗುತ್ತಿದೆ ಎಂದು ಕಳೆದ ವಾರವಷ್ಟೇ ನಾವು ವರದಿ ಮಾಡಿದ್ಧೇವು , ವರದಿ ಪ್ರಕಟವಾದ ಬೆನ್ನಲ್ಲೇ ಮಳೆಗೆ ಗುಡ್ಡ ಜರಿದು ನಾಲ್ಕು ಪಿಲ್ಲರ್ ಗಳು ಮಣ್ಣಿನೊಳಗೆ ಸಿಲುಕಿರುವುದು ದುರಂತ ವೇ ಸರಿ!

ಶಂಕರ್ ಶೆಟ್ಟಿ ಆರೋಪ
ಅವೈಜ್ಞಾನಿಕ , ಅಪಾಯಕಾರಿ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯಿರುವ ಜಾಗದಲ್ಲಿ ಹಾಸ್ಟೆಲ್ ನಿರ್ಮಾಣ ದ ಹಿಂದೆ ಸ್ಥಾಪಿತ ಹಿತಾಸಕ್ತಿ ಗಳ ಕೈವಾಡ ವಿದೆ ಎಂದು ನಿವೃತ್ತ ಪಾಂಶುಪಾಲ ಶಂಕರ್ ಶೆಟ್ಟಿ ಆರೋಪ ಮಾಡಿದ್ದಾರೆ.

ಅಲ್ಪಸಂಖ್ಯಾತರ ಇಲಾಖೆಯ ಹಾಸ್ಟೆಲ್ ಕಾಮಗಾರಿಯು ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ತಾನು ಲೋಕೋಪಯೋಗಿ ಇಲಾಖೆಗೆ ಮಾಡಿದ ಮನವಿಯಂತೆ ಗುಡ್ಡವನ್ನು ಅಗೆದ ಕಾರಣ ೧೦ ಮೀ. ಎತ್ತರದ ಗುಡ್ಡ ಕುಸಿಯುವ ಭೀತಿಯಲ್ಲಿದೆ ಎಂದು ಲೋಕೋಪಯೋಗಿ ಇಲಾಖೆಯು ಪತ್ರ ನೀಡಿದೆ.


ಬಂಟ್ವಾಳ ಲೋಕೋಪಯೋಗಿ ಇಲಾಖೆಯ ಬಂಟ್ವಾಳ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರು ಅವರು ಪರಿಶೀಲನೆ ನಡೆಸಿ ಗುಡ್ಡ ಕುಸಿಯುವ ಸ್ಥಿತಿಯಲ್ಲಿರುವ ಕುರಿತು ಮಂಗಳೂರು ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ವರದಿ ನೀಡಿದ್ದರು.
ಅದರಂತೆ ಅವರು, ಅಲ್ಪಸಂಖ್ಯಾತರ ಇಲಾಖೆಗೆ ಕೇಳಿದಾಗ ಕಾಮಗಾರಿ ಸ್ಥಗಿತಗೊಂಡಿರುವ ಮಾಹಿತಿ ನೀಡಿತ್ತು. ಆದರೂ ಪ್ರಸ್ತುತ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಪರಿಶೀಲನೆ ನಡೆಸುಂತೆ ಅವರು ಶಾಸಕರು ಹಾಗೂ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಮಧ್ಯೆ ಮಳೆಗೆ ಗುಡ್ಡ ಜರಿದು ಕಾಮಗಾರಿಗೆ ಹಾನಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here