ಬಹಳ ಹೊತ್ತು
ಒರಗಿದ ಮೇಲೂ
ಅನಿಸತೊಡಗಿತು
ಇನ್ನು ನಿದ್ದೆ ಬಾರದು!
ಇಡೀ ಇರುಳು
ಕಂಗಳಲ್ಲೇ ಕಳೆಯಿತು
ವಿರಮಿಸುವ ರೆಪ್ಪೆಗಳಿಗೆ
ದಾರಿಯೇ ತೋರದು!

ಮೆದುಳಿನಗ್ರ ಭಾಗವು
ಉರಿದುರಿದು ಕೆಂಡವಾಗಿ
ಉಗುಳತೊಡಗಿತು
ಕಂಗಳಿಂದ ಲಾವಾರಸ!
ಎಷ್ಟು ಒರೆಸಿದರೂ
ಅಶ್ರುವಿನದದೇ ಹಟ
ಇಂಗದೆಯೇ ಹರಿವುದು
ತಾನಾಗಿ ಲಾಲಾರಸ!

ಒಣಗುವುದ ಮರೆತು
ಹೊರಹೊಮ್ಮುತಿದೆ
ಸಿಡಿಗಡಲ ಸುನಾಮಿಯ
ಭಯಾನಕ ತೆರೆಯಂತೆ!
ಬದಲಿಸಿದರೂ ತನ್ನ ಪಥ
ಮತ್ತದೇ ವಿಚಿತ್ರ ಆಟ
ಬದಲಾಗುವುದು ಸರ್ರನೆ
ದಪ್ಪನೆಯ ಗೆರೆಯಂತೆ!

ಗಲ್ಲದ ಮೇಲೆ ಬರೆದ
ಈ ಅನುಪಮ ಲಿಪಿ
ಅದೆಷ್ಟು ಖಚಿತ, ಪವಿತ್ರ
ಪ್ರಾಂಜಲ ಪಾವನ!
ಗದ್ದ ದಾಟಿದ ಮೇಲೂ
ಅದೇ ವೇಗ ಆವೇಗ
ಎದೆ ಕಣಿವೆಯಲಿಳಿದು
ತೆವಳುವುದೇ ಜೀವನ!

ಇಡೀ ರಾತ್ರಿಯೂ ಸಾಲದು
ಈ ನರ ಜನುಮಕೆ
ಕಂಬನಿಯೊಡಲ ಒಳ
ಮರ್ಮವ ಅರಿಯಲು!
ಅಳುವುದೊಂದೇ ದಾರಿ
ಇಲ್ಲ ಸುಖದ ರಹದಾರಿ
ಮೈಮನದಿ ಎಗ್ಗಿಲ್ಲದೇ
ನುಗ್ಗುತಿದೆ ತನ್ನಲೇ ಬೆರೆಯಲು!

ನೀ.ಶ್ರೀಶೈಲ ಹುಲ್ಲೂರು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here