ಧರ್ಮಸ್ಥಳ: ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ನಾಳೆ (ಆಗಸ್ಟ್ 5) ನೆರವೇರಲಿರುವುದು ಭಾರತೀಯರೆಲ್ಲರಿಗೂ ಶುಭ ಸುದ್ದಿ. ಶ್ರೀರಾಮ ಭಗವಂತನ ಅವತಾರವೆಂದು ಭಾರತೀಯರ ನಂಬಿಕೆ, ಶ್ರದ್ಧೆ. ಆತ ಭೂಮಿಯಲ್ಲಿ ಅವತರಿಸಿದ ಬಳಿಕ ತನ್ನ ಸದ್ಗುಣಗಳಿಂದ ಆದರ್ಶಮೂರ್ತಿ ಎನಿಸಿದ. ಸಹಸ್ರಾರು ವರ್ಷಗಳಿಂದ ಮರ್ಯಾದ ಪುರುಷೋತ್ತಮನೆನಿಸಿ ತನ್ನ ವ್ಯಕ್ತಿತ್ವ, ದೃಢ ನಿರ್ಧಾರಗಳಿಂದಾಗಿ ಜನಮಾನಸದಲ್ಲಿ ನೆಲೆಯಾದ. ತನ್ನ ಆದರ್ಶಗಳಿಂದ ವಿಶ್ವವ್ಯಾಪಿಯಾದ.

ಆಧುನಿಕ ಜಗತ್ತಿನ ಭೌತಿಕ ಪ್ರಗತಿಯ ಮಧ್ಯೆಯೂ ರಮಾನಂದಸಾಗರರ ’ರಾಮಾಯಣ’ ದೂರದರ್ಶನದಲ್ಲಿ ಪ್ರಸಾರವಾದಾಗ ಜನರು ಈ ರಾಮಕತೆಯಿಂದ, ರಾಮನ ಆದರ್ಶಗಳಿಂದ ಆಕರ್ಷಿತವಾಗಿರುವುದನ್ನು ಕಂಡರೆ ಶ್ರೀರಾಮ ಸ್ಮರಣೆ ಇನ್ನೂ ಸಹಸ್ರ ವರ್ಷಗಳವರೆಗೆ ಈ ನೆಲದಲ್ಲಿ ಉಳಿಯುತ್ತದೆ ಮತ್ತು ಬೆಳೆಯುತ್ತದೆ ಎಂಬುದು ಸತ್ಯ.

ರಾಮರಾಜ್ಯದ ಕಲ್ಪನೆಗೆ ಕೇಂದ್ರವಾಗಿರುವ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವುದು ಅತೀ ಅಗತ್ಯ. ಈ ಶಿಲಾನ್ಯಾಸದ ಶುಭ ಮುಹೂರ್ತದಲ್ಲಿ ಪ್ರಾರಂಭವಾಗಿರುವ ಮಂದಿರ ನಿರ್ಮಾಣ ನಿರ್ವಿಘ್ನವಾಗಿ ನೆರವೇರಲೆಂದು ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ.

ಕೆಲವೇ ತಿಂಗಳ ಹಿಂದೆ ಅಯೋಧ್ಯೆಗೆ ಹೋಗಿ ಪವಿತ್ರ ಭೂ ಸ್ಪರ್ಶ ಮಾಡಿ ಹಿರಿಯ ಸಂತರಿಗೆ ಗೌರವ ಸಲ್ಲಿಸಿ ಬಂದಿದ್ದೇನೆ. ಈ ಸಾಧನೆಗೆ ಸಂಕಲ್ಪ ಮಾಡಿದ ತ್ಯಾಗ ಮತ್ತು ಬಲಿದಾನ ಮಾಡಿದ ಎಲ್ಲಾ ಶ್ರದ್ಧಾಳುಗಳಿಗೂ ಅಭಿನಂದನೆಗಳು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸಂದೇಶ ನೀಡಿದ್ದಾರೆ.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here