ಬಂಟ್ವಾಳ: ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಸಾಧನೆ ಮಾಡುವ ವಿದ್ಯಾರ್ಥಿಗಳ ಬಗ್ಗೆ ನಾವು ಕೇಳುತ್ತೇವೆ. ಆದರೆ ವಿದ್ಯಾರ್ಥಿಗಳ ಸಾಧನೆಗೆ ಬೆನ್ನೆಲುಬಾಗಿ ಹಗಲು ರಾತ್ರಿ ಎನ್ನದೆ ಪರಿಶ್ರಮ ಪಡುವ ಶಿಕ್ಷಕರ ಬಗ್ಗೆ ಹೆಚ್ಚಿನವರಿಗೆ ಅರಿವೇ ಇರುವುದಿಲ್ಲ. ಮೂರು ದಶಕದಷ್ಟು ಕಾಲ ತಾವು ಬೋಧಿಸುವ ವಿಷಯದಲ್ಲಿ ಒಂದೇ ಒಂದು ವಿದ್ಯಾರ್ಥಿ ಅನುತ್ತೀರ್ಣ ಆಗದಂತೆ ಎಚ್ಚರ ವಹಿಸಿದ ಇಬ್ಬರು ಉಪನ್ಯಾಸಕರ ಯಶೋಗಾಥೆ ಇಲ್ಲಿದೆ.

ಬಿ.ಅಹ್ಮದ್ ಹಾಜಿ ತುಂಬೆ ಇವರ ಸಾರಥ್ಯದ ಮುಹಿಯುದ್ದೀನ್ ಎಜ್ಯುಕೇಶನಲ್ ಟ್ರಸ್ಟ್ ಇದರ ಅಧೀನದ ತುಂಬೆ ಪದವಿ ಪೂರ್ವ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕ ವಿ.ಸುಬ್ರಹ್ಮಣ್ಯ ಭಟ್ ಮತ್ತು ಲೆಕ್ಕಶಾಸ್ತ್ರ ಮತ್ತು ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಕವಿತಾ ಎಂಬಿಬ್ಬರ ಸಾಧನೆ ಶಾಲಾ‌ ಆಡಳಿತ ಮಂಡಳಿ, ಪ್ರಾಂಶುಪಾಲ, ವಿದ್ಯಾರ್ಥಿಗಳು, ಪೋಷಕರಿಂದ‌ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ ಈ ಉಪನ್ಯಾಸಕರ ಸಾಧನೆ ಕಾಲೇಜಿನ ಘನತೆಯನ್ನೂ ಹೆಚ್ಚಿಸಿದೆ.

1992ರಲ್ಲಿ ತುಂಬೆ ಪದವಿ ಪೂರ್ವ ಕಾಲೇಜು ಆರಂಭಗೊಂಡಿದೆ. ಅಂದಿನಿಂದ ಇಂದಿನವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ‌ ಸಮಾಜಶಾಸ್ತ್ರ (Sociology), ಲೆಕ್ಕಶಾಸ್ತ್ರ (Accountancy), ವಾಣಿಜ್ಯಶಾಸ್ತ್ರ (Business studies)ದಲ್ಲಿ ಈ ಕಾಲೇಜಿನ ಒಬ್ಬನೇ ಒಬ್ಬ ವಿದ್ಯಾರ್ಥಿ ಅನುತ್ತೀರ್ಣಗೊಂಡಿಲ್ಲ. ಇಪ್ಪತ್ತೇಳು ವರ್ಷಗಳಲ್ಲಿ ಒಬ್ಬ ವಿದ್ಯಾರ್ಥಿಯೂ ಅನುತ್ತೀರ್ಣ ಆಗದಿರಲು ಈ ಉಪನ್ಯಾಸಕರ ಮಾದರಿ ಬೋಧನಾ ಶೈಲಿಯೇ ಕಾರಣವಾಗಿದೆ.

ಮಕ್ಕಳಿಗೆ ಪಾಠ ಬೋಧಿಸುವ ಮೊದಲು ಆ ಪಾಠದ ಬಗ್ಗೆ ನಾವು ಅಧ್ಯಾಯನ ಮಾಡಬೇಕು. ತರಗತಿಯ ಮೇಲೆ ನಿಗಾವಹಿಸುವ ಜೊತೆಗೆ ತರಗತಿಯಲ್ಲಿ ಇರುವ ಪ್ರತೀ ವಿದ್ಯಾರ್ಥಿಗಳ ಬಗ್ಗೆ ವೈಯುಕ್ತಿಕವಾಗಿ ನಿಗಾ ವಹಿಸಬೇಕು. ಯಾವ ವಿದ್ಯಾರ್ಥಿಗೂ ನೀನು ದಡ್ಡ, ನಿನ್ನಿಂದ ಅಸಾಧ್ಯ ಎನ್ನುವ ಪ್ರಮಾಣ ಪತ್ರ ಕೊಡಬಾರದು. ನಿನ್ನಿಂದ ಸಾಧ್ಯ ಎಂದು ಪ್ರೋತ್ಸಾಹಿಸಿದರೆ ಕಲಿಕೆಯಲ್ಲಿ ಎಷ್ಟೇ ಹಿಂದುಳಿದ ವಿದ್ಯಾರ್ಥಿಯೂ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುತ್ತಾರೆ ಎನ್ನುವುದು ಈ ಉಪನ್ಯಾಸಕರ ಅಭಿಪ್ರಾಯ.

“ನವೆಂಬರ್‌ ಡಿಸೆಂಬರ್ ತಿಂಗಳ ಒಳಗೆ ಎಲ್ಲಾ ಪಾಠಗಳನ್ನು ಮುಗಿಸುತ್ತೇವೆ. ಬಳಿಕ ಎಲ್ಲಾ ಪಾಠವನ್ನು ಮತ್ತೊಮ್ಮೆ ಪುನರಾವರ್ತಿಸುತ್ತೇವೆ. ಆ ಬಳಿಕ ಮೂರು ತಿಂಗಳು ಮೂರು ಪೂರ್ವ ಸಿದ್ಧತಾ ಪರೀಕ್ಷೆಗಳನ್ನೂ ಅದರ ಮಧ್ಯೆದಲ್ಲಿ ಕಿರು ಪರೀಕ್ಷೆಗಳನ್ನು ಮಾಡುತ್ತೇವೆ. ಕಲಿಕೆಯಲ್ಲಿ ಮುಂದಿರುವ ವಿದ್ಯಾರ್ಥಿಗಳನ್ನು ಮತ್ತಷ್ಟು ಉತ್ತಮವಾಗಿ ಕಲಿಯಲು ಪ್ರೋತ್ಸಾಹಿಸಿದರೆ ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳ ಬಗ್ಗೆ ವೈಯಕ್ತಿಕ ನಿಗಾ ವಹಿಸಿ ಕಲಿಕೆಯಲ್ಲಿ ಮುಂದೆ ಬರುವಂತೆ ಕಾಳಜಿ ವಹಿಸುತ್ತೇವೆ” ಎನ್ನುವುದು ಈ ಉಪನ್ಯಾಸಕರ ಸಾಧನೆಯ ಹಿಂದಿನ ಗುಟ್ಟು.

“ಕಲಿಕೆಯಲ್ಲಿ ಸ್ವಲ್ಪ ಹಿಂದುಳಿದ ಕಾರಣಕ್ಕೆ ಆ ವಿದ್ಯಾರ್ಥಿಗಳು ದಡ್ಡರೆಂದು ಅವರನ್ನು ಗಣನೆಗೆ ತೆಗೆಯದೆ ಮತ್ತಷ್ಟು ದೂರ ಮಾಡುವುದರಲ್ಲಿ ಅರ್ಥವಿಲ್ಲ. ಅವರ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಪ್ರೋತ್ಸಾಹಿಸಬೇಕು.‌ ಕಲಿಯುವುದರಲ್ಲಿ ಮುಂದಿರುವ ವಿದ್ಯಾರ್ಥಿಗಳು ಉತ್ತೀರ್ಣರಾಗುವುದು ಸಾಧನೆ ಅಲ್ಲ. ಕಲಿಯುವುದರಲ್ಲಿ ಹಿಂದಿರುವ ವಿದ್ಯಾರ್ಥಿಗಳನ್ನು ಉತ್ತೀರ್ಣರಾಗುವಂತೆ ಮಾಡುವುದು ಸಾಧನೆ. ಅದಕ್ಕೆ ಸಂಯಮ ಬೇಕು. ವಿದ್ಯಾರ್ಥಿಗಳ ಹೆತ್ತವರನ್ನು ಕರೆಸಿ ಅವರೊಂದಿಗೆ ಚರ್ಚಿಸಬೇಕು. ಹೆಚ್ಚಿನ ವಿದ್ಯಾರ್ಥಿಗಳು ಅವರ ಭವಿಷ್ಯದ ಬಗ್ಗೆ ಚಿಂತಿಸುವುದೇ ಇಲ್ಲ. ಚಿಂತಿಸುವ ವಯಸ್ಸು ಅವರದ್ದಾಗಿ ಇರುವುದಿಲ್ಲ. ಎಲ್ಲವನ್ನೂ ತಮಾಷೆಯಾಗಿ, ಮನರಂಜನೆಯಾಗಿ ನೋಡುತ್ತಾರೆ.‌ ಅಂಥಹ ವಿದ್ಯಾರ್ಥಿಗಳನ್ನು‌ ಪ್ರೀತಿ, ನಯವಾದ ಮಾತುಗಳಿಂದ ಮೊದಲು ವಿಶ್ವಾಸಕ್ಕೆ ತೆಗೆಯಬೇಕು. ಬಳಿಕ ಅವರಿಗೆ ಅವರ ಭವಿಷ್ಯದ ಬಗ್ಗೆ, ಗುರಿಯ ಬಗ್ಗೆ ವಿವರಿಸಬೇಕು. ಹೀಗೆ ಮಾಡಿದಾಗ ಕಲಿಕೆಯಲ್ಲಿ ಎಷ್ಟು ಹಿಂದಿದ ವಿದ್ಯಾರ್ಥಿಯೂ ಕೊನೆಗೆ ಉತ್ತಮ ಅಂಕ ಪಡೆದು ಉತ್ತೀರ್ಣರಾದ ಹಲವಾರು ನಿರ್ದೇಶನಗಳು ನಮ್ಮಲ್ಲಿ ಇವೆ” ಎಂದು ಉಪನ್ಯಾಸಕ ವಿ.ಸುಬ್ರಹ್ಮಣ್ಯ ಭಟ್ ಹೇಳುತ್ತಾರೆ.

ಇದು ತಂತ್ರಜ್ಞಾನದ ಯುಗ. ತಂತ್ರಜ್ಞಾನವನ್ನು ಸದುಪಯೋಗ ಪಡಿಸಿಕೊಂಡರೆ ಕಲಿಯಲೂ, ಕಲಿಸಲೂ ಹೆಚ್ಚಿನ ಸಹಕಾರಿ ಆಗುತ್ತದೆ. ಅಂದಿನ ಪಾಠವನ್ನು ಅಂದೇ ಮನೆಯಲ್ಲಿ ಅಭ್ಯಾಸ ಮಾಡುವುದು ಕಲಿಕೆಯ ಉತ್ತಮ ವಿಧಾನ. ಇದಕ್ಕಾಗಿ ನಾವು ನಮ್ಮ ಮೊಬೈಲ್ ಫೋನ್ ನಂಬರ್ ಮಕ್ಕಳಿಗೆ ನೀಡುತ್ತೇವೆ. ಮನೆಯಲ್ಲಿ ಅಭ್ಯಾಸ ಮಾಡುವಾಗ ಏನಾದರೂ ಸಂಶಯ ಇದ್ದರೆ ಕೂಡಲೇ ಕರೆ ಮಾಡಿ ನಿವಾರಿಸಬಹುದು. ಯಾವ ರಾತ್ರಿ ಕರೆ ಮಾಡಿದರೂ ಸ್ವೀಕರಿಸಿ ಮಕ್ಕಳಿಗೆ ನೆರವಾಗುತ್ತೇವೆ. ಇಂಥದ್ದೇ ಸಮಯದಲ್ಲಿ ಕರೆ ಮಾಡಬೇಕು ಇಂಥ ಸಮಯದಲ್ಲಿ ಕರೆ ಮಾಡಬಾರದು ಎಂಬ ನಿಬಂಧನೆಗಳು ಇಲ್ಲ.‌ ಹಾಗಾಗಿ ಮಕ್ಕಳು ಅವರಿಗೆ ಅಗತ್ಯ ಇದ್ದ ಸಂದರ್ಭದಲ್ಲಿ ನಿರ್ಭೀತಿಯಿಂದ ಕರೆ ಮಾಡಿ ಪಠ್ಯದ ಬಗ್ಗೆ ಇರುವ ಸಂಶಯ ನಿವಾರಿಸುತ್ತಾರೆ” ಎಂದು ಹೇಳುತ್ತಾರೆ ಉಪನ್ಯಾಸಕಿ ಕವಿತ ಅವರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here