ವಿಟ್ಲ:  ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಮಂದಿರ ನಿರ್ಮಾಣಕ್ಕೆ ಮುಹೂರ್ತ ನಿಗದಿಯಾಗಿರುವುದು, ರಾಮಭಕ್ತರ ಅರ್ಥಾತ್ ಪ್ರಜ್ಞಾವಂತ ಪ್ರಜೆಗಳ ಕನಸು ನನಸಾಗುವ ಸಮಯ ಒದಗಿಬಂದಿರುವುದು ಸಂತಸದ ವಿಚಾರ. ಭಾರತೀಯ ಪರಂಪರೆಯಲ್ಲಿ ರಾಮಾಯಣ-ಮಹಾಭಾರತ ಸಂಸ್ಕೃತಿಯ ಕಣ್ಣುಗಳಿದ್ದಂತೆ. ’ರಾಮ’ ಎನ್ನುವ ಎರಡಕ್ಷರವೇ ಅದ್ಭುತವಾದುದು. ಪರಿಶುದ್ಧವಾದ ಆಕಾಶ, ಅಗ್ನಿ, ವಾಯು ತತ್ತ್ವಗಳ ಚಿಂತನೆಯು ಅಡಗಿರುವುದಲ್ಲದೆ ಪಂಚಭೂತಾತ್ಮಗಳ ಸರ್ವಸ್ವವೂ ಇದರಲ್ಲಿದೆ. ಸುಲಲಿತವಾಗಿ ’ರಾಮ’ ಎನ್ನಲು ಅನುಕೂಲವಾದುದು. ’ಆ ಮಂತ್ರ ಈ ಮಂತ್ರ ಜಪಿಸಿ ನೀ ಕೆಡಬೇಡ, ರಾಮ ಮಂತ್ರವ ಜಪಿಸೋ…’ ಎಂದು ದಾಸರು ಕೊಂಡಾಡಿದ್ದಾರೆ. ಸಾಕ್ಷಾತ್ ಶಿವನೇ ತನ್ನ ಭಾಮೆ ಶಿವೆಗೆ ರಾಮ ಮಂತ್ರವನ್ನು ಬೋಧಿಸಿದನು. ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸವೆಂದರೆ ಧರ್ಮದ ಪುನರುತ್ಥಾನಕ್ಕೆ ನಾಂದಿಯೇ ಸರಿ. ತತ್ಸಂಬಂಧ ತಾವೆಲ್ಲರೂ ಮನೆ-ಮನಗಳಲ್ಲಿ ಶ್ರೀರಾಮಜ್ಯೋತಿಯನ್ನು ಬೆಳಗಿಸೋಣ. ಸತ್ಸಂಕಲ್ಪವನ್ನು ಮಾಡೋಣ. ಶೀಘ್ರವಾಗಿ ರಾಮ ಮಂದಿರ ನಿರ್ಮಾಣಗೊಂಡು ವಿಶ್ವಕ್ಕೆ ಮಾದರಿಯಾಗಲಿ.

ಪ್ರಧಾನಮಂತ್ರಿ ಮೋದಿಜಿಯವರ ಮೂಲಕ ಸುಮುಹೂರ್ತದಲ್ಲಿ ಶಿಲಾನ್ಯಾಸ ನಡೆಯುವುದು ಅರ್ಥಪೂರ್ಣವಾಗಿದೆ. ರಾಮ ಪ್ರೇಮವೆಂದರೆ ಅದು ರಾಷ್ಟ್ರ ಪ್ರೇಮವೇ ಸರಿ. ರಾಮತತ್ತ್ವದಲ್ಲಿ ರಾಷ್ಟ್ರೀಯತೆಯನ್ನು ಬೆಳಗುವ ಶಕ್ತಿಯಿದೆ. ಅಧ್ಯಾತ್ಮದ ಅಂದವಿದೆ. ನಾವೆಲ್ಲರೂ ಮಂದಿರ ನಿರ್ಮಾಣಕ್ಕೆ ಕೈಲಾದ ಸೇವೆಯನ್ನು ಆತ್ಮಾರ್ಥವಾಗಿ ಸಲ್ಲಿಸೋಣ. ಆತ್ಮಜ್ಞಾನಕ್ಕೆ ಇನ್ನೊಂದು ಹೆಸರಾದ ಆಂಜನೇಯನ ಅನುಗ್ರಹ ಜೊತೆಗಿರುವಾಗ ಎಲ್ಲವೂ ನಿರ್ವಿಘ್ನವಾಗಿ, ಸಾಂಗವಾಗಿ ನಡೆಯಲೆಂದು ಹಾರೈಸುತ್ತೇವೆ ಎಂದು ಒಡಿಯೂರು ಶ್ರೀ ಹೇಳಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here