ಬಂಟ್ವಾಳ: ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರಿಗೆ ಸಮಗ್ರ ಕೋವಿಡ್ ಪರಿಹಾರಕ್ಕೆ ಆಗ್ರಹಿಸಿ ಹಾಗೂ ಕಲ್ಯಾಣ ಮಂಡಳಿಯು ಕೋವಿಡ್ ಪರಿಹಾರದ ಲೆಕ್ಕ ನೀಡಲು ಒತ್ತಾಯಿಸಿ, ಕಲ್ಯಾಣ ಮಂಡಳಿಗಳನ್ನು ವಿಲೀನಗೊಳಿಸುವ ಕೇಂದ್ರ ಸರಕಾರದ ನೀತಿ ಖಂಡಿಸಿ, ಕೋವಿಡ್ ಪರಿಹಾರಕ್ಕೆ ಅರ್ಜಿ ಹಾಕಲು ಬಾಕಿ ಇರುವ ಕಾರ್ಮಿಕರಿಗೆ ಅರ್ಜಿ ಹಾಕಲು ಅವಕಾಶ ನೀಡುವಂತೆ ಒತ್ತಾಯಿಸಿ ಇಂದು ಬಿ.ಸಿ.ರೋಡ್ ನ ಕಾರ್ಮಿಕ ನಿರೀಕ್ಷಕರ ಕಛೇರಿ ಮುಂದೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಖರ ಫೆಡರೇಶನ್ (ಸಿಐಟಿಯು) ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ಸಂಘಟನೆಯ ತಾಲೂಕು ಕಾರ್ಯದರ್ಶಿ ರಾಮಣ್ಣ ವಿಟ್ಲ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ರಾಜ್ಯ ಸರಕಾರವು ಕಲ್ಯಾಣ ಮಂಡಳಿಯಿಂದ ಕಟ್ಟಡ ಕಾರ್ಮಿಕರಿಗೆ ಐದು ಸಾವಿರ ರೂಪಾಯಿಯಂತೆ ಪ್ರತೀ ನೋಂದಾಯಿತ ಕಾರ್ಮಿಕರಿಗೆ ಪರಿಹಾರವನ್ನು ಘೋಷಣೆ ಮಾಡಿದ್ದು, ಆದರೆ ಈ ಹಣವು ಕೇವಲ ಬೆರಳೆಣಿಕೆಯ ಕಾರ್ಮಿಕರಿಗೆ ಮಾತ್ರ ಸಿಕ್ಕಿದ್ದು ಉಳಿದ ಕಾರ್ಮಿಕರಿಗೆ ಸಿಕ್ಕಿಲ್ಲ ಎಂದು ಆರೋಪಿಸಿದರು. ಸರಕಾರವು ಕಲ್ಯಾಣ ಮಂಡಳಿಯ ಹಣವನ್ನು ವಲಸೆ ಕಾರ್ಮಿಕರಿಗೆ ಪರಿಹಾರ ನೀಡುವ ಮೂಲಕ ಕಟ್ಟಡ ಕಾರ್ಮಿಕರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು. ಸರಕಾರವು ಜನರ ಧ್ವsನಿಯನ್ನು ಹತ್ತಿಕ್ಕಲು ಕೊರೋನಾ ದ ಹೆಸರಿನಲ್ಲಿ ಕಡಿವಾಣ ಹಾಕುತಿದೆ ಎಂದು ಆರೋಪಿಸಿದರು. ಕೂಡಲೇ ಕಾರ್ಮಿಕ ಅಧಿಕಾರಿಗಳು ಸಮಸ್ಯೆಗಳನ್ನು ಪರಿಹರಿಸದ್ದಿದ್ದರೆ ಎಲ್ಲಾ ಕಟ್ಟಡ ಕಾರ್ಮಿಕರನ್ನು ಒಟ್ಟು ಸೇರಿಸಿ ಕಾರ್ಮಿಕ ಅಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು. ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರಕ್ಕೆ ಬಂಟ್ವಾಳ ಕಾರ್ಮಿಕ ನಿರೀಕ್ಷಕರ ಮುಖಾಂತರ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯ ಆರಂಭದಲ್ಲಿ ನ್ಯಾಯವಾದಿ ಮಹಮ್ಮದ್ ಗಝಾಲಿ ಸ್ವಾಗತಿಸಿದರು. ಪ್ರತಿಭಟನೆಯ ನೇತೃತ್ವವನ್ನು ಮುಖಂಡರಾದ ಉದಯಕುಮಾರ್ ಬಂಟ್ವಾಳ, ಸುರೇಂದ್ರ ಕೋಟ್ಯಾನ್, ಸಾಮಾಜಿಕ ಕಾರ್ಯಕರ್ತರಾದ ರಾಜಾ ಚೆಂಡ್ತಿಮಾರ್, ಮಹಮ್ಮದ್ ಹನೀಫ್ , ದಿನೇಶ್ ಆಚಾರಿ ಮಾಣಿ, ಲಿಯಾಕತ್ ಖಾನ್ ವಹಿಸಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here