ರಕ್ಷಾಬಂಧನ ಅನ್ನುವುದು ಒಂದು ಉತ್ಸವವಾಗಿ ಸಾಂಸ್ಕೃತಿಕ ಆವರಣವನ್ನು ಮೈಗೂಡಿಸಿಕೊಂಡು ಎಲ್ಲರ ಮನೆ ಮನೆಗಳನ್ನು ಒಗ್ಗೂಡಿಸುವ ವಿಶೇಷತೆಯನ್ನು ಹೊಂದಿರುವುದರಿಂದಾಗಿ ಅದು ನಮಗೆ ಮುಖ್ಯವಾಗುತ್ತದೆ. ಎಲ್ಲವನ್ನೂ ಎಲ್ಲರನ್ನೂ ಭಾವನಾತ್ಮಕವಾಗಿ ಬೆಸೆಯುವ ಮತ್ತು ವ್ಯಾವಹಾರಿಕವಾಗಿಯೂ ಒಮ್ಮನಸ್ಸಿನಿಂದ ತೊಡಗಿಕೊಳ್ಳುವ ವಾತಾವರಣವನ್ನು ನಿರ್ಮಾಣ ಮಾಡುವ ಶಕ್ತಿ ರಕ್ಷಾಬಂಧನಕ್ಕೆ ಇದೆ ಅನ್ನುವುದು ಆಶ್ವರ್ಯವಾದರೂ ಸತ್ಯ. ಕೇವಲ ವ್ಯಕ್ತಿಗತ ಚಿಂತನೆಯಲ್ಲಿ ಮಾತ್ರ ಸೀಮಿತಗೊಳ್ಳದೆ ಆ ಚಿಂತನೆಯ ಮೂಲಕ ಒಟ್ಟು ಸಾಮಾಜಿಕ ಗ್ರಹಿಕೆಯ ನೆಲೆಯಲ್ಲೂ ಬದಲಾವಣೆಯನ್ನು ತರುವ ಉತ್ಸವ ಅನ್ನುವ ಸಾಂಕೇತಿಕತೆಯನ್ನೂ ಇಲ್ಲಿ ಗ್ರಹಿಸಬಹುದಾಗಿದೆ.
ಪರಸ್ಪರ ಸಹೋದರ ಸಹೋದರಿಯರ ಮಧ್ಯೆ ರಕ್ಷಣೆಯ ಭರವಸೆಯ ವಿನಿಮಯ ಇಲ್ಲಿನ ಬಹುಮುಖ್ಯ ಬಂಧವಾಗಿದ್ದರೂ ಇದುವೇ ವಿಸ್ತಾರಗೊಂಡು ಒಟ್ಟು ಭಾರತೀಯ ಸಮಾಜವನ್ನು ಯಾವುದೇ ಜಾತಿ ಮತ ಧರ್ಮ ಲಿಂಗಭೇದಗಳಿಲ್ಲದೆ ಸಹೋದರ ಸಹೋದರಿಯರು ಅನ್ನುವ ಈ ಮಣ್ಣಿನ ಮೂಲ ಸಿದ್ಧಾಂತದೊಂದಿಗೆ ಬಂಧಿಸುವ/ಒಗ್ಗೂಡಿಸುವ ಶಕ್ತಿಯ ಅನಾವರಣವೇ ಇಲ್ಲಿನ ಮುಖ್ಯ ಉದ್ದೇಶ.

ಅಂದು ಚಿಕಾಗೋ ನಗರದ ಮೂಲೆ ಮೂಲೆಗಳಲ್ಲಿ ಮಾರ್ದನಿಸಿದ ವಿವೇಕವಾಣಿಯ ಸಾರ ಈ ಮಣ್ಣಿನಲ್ಲಿ ಮಿಳಿತವಾಗಿರುವ ಮಾನವ ಸಂಬಂಧಗಳ ಒಟ್ಟು ಧ್ವನಿ, ಅದುವೇ ಸಹೋದರತ್ವ. ಇಂದು ವಿದೇಶೀಯರಿಗೆ ಭಾರತವೇನಾದರೂ ಆದರ್ಶಪ್ರಾಯವಾಗಿ ಕಂಡಿದ್ದರೆ, ಶಾಂತಿ ನೆಮ್ಮದಿಗಳ ತಾಣವಾಗಿ ಗುರುತಿಸಿದ್ದರೆ ಅದಕ್ಕೆ ರಕ್ಷಾಬಂಧನವೇ ಮೊದಲಾದ ಉತ್ಸವಗಳು ಕಟ್ಟಿಕೊಡುವ ಇಲ್ಲಿನ ಜೀವನ ಮೌಲ್ಯ ಹಾಗೂ ಜೀವನ ಶೈಲಿ ಮುಖ್ಯ ಕಾರಣವಾಗುತ್ತದೆ ಅನ್ನುವುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ.
ನಮ್ಮ ರಕ್ಷಣೆಯ ಹೊಣೆ ನಮ್ಮದೇ, ಅದಕ್ಕೆ ಬೇರೆಯವರನ್ನು ಆಶ್ರಯಿಸುವುದು ತಾತ್ಕಾಲಿಕ ಪರಿಹಾರವನ್ನಷ್ಟೇ ನೀಡಬಹುದು. ಆತ್ಮನಿರ್ಭರತ್ವ ಇಲ್ಲಿನ ಮಣ್ಣಿನ ಗುಣ, ಅದು ಸ್ವಾಭಿಮಾನದ ಸಂಕೇತವೂ ಹೌದು. ಆದ ಕಾರಣ ನಮ್ಮೊಳಗಿನ ಪರಸ್ಪರ ರಕ್ಷಣಾಬಂಧ ರಕ್ಷಾಬಂಧನವಾಗಿ ಸ್ವಾವಲಂಬಿ ಬದುಕಿನ ದಾರಿ ತೆರೆದುಕೊಳ್ಳುತ್ತದೆ. ಭಾರತದಲ್ಲಿನ ಹಬ್ಬಗಳೇ ಹಾಗೆ, ಯಾವತ್ತೂ ಒಂದು ಮೌಲ್ಯವನ್ನು ಗರ್ಭೀಕರಿಸಿಕೊಂಡು ಅದನ್ನು ಸಾರ್ವತ್ರೀಕರಿಸುವ ಮತ್ತು ಮನೆಮನಗಳನ್ನ ಒಗ್ಗೂಡಿಸುವ ಸಾಮರ್ಥ್ಯ ಅದರದ್ದಾಗಿರುತ್ತದೆ.
ಪ್ರೀತಿಯ ಬಂಧ ಇರವಿಗಾಗಿ, ಇರವಿನ ಅರಿವಿಗಾಗಿ, ಪರಸ್ಪರ ರಕ್ಷಣೆಗಾಗಿ.

✍️ರಾಜಮಣಿ ರಾಮಕುಂಜ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here