ವಿಟ್ಲ: ದೇಶದ ಭವಿಷ್ಯದಲ್ಲಿ ಆರೋಗ್ಯಪೂರ್ಣ ಸಮಾಜವನ್ನು ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮ ಮೇಲಿದ್ದು, ಮಕ್ಕಳು ಕೇವಲ ನಮ್ಮ ಆಸ್ತಿ ಮಾತ್ರವಾಗಿರದೇ ದೇಶದ ಆಸ್ತಿ ಎಂಬ ಸತ್ಯವನ್ನು ಹೆತ್ತವರು ಚಿಂತನೆ ಮಾಡಬೇಕು. ಭಯಮುಕ್ತರಾಗಿ ಪ್ರತೀ ಕ್ಷಣವೂ ಆರೋಗ್ಯದ ಬಗ್ಗೆ ನಿಗಾ ವಹಿಸಿದಾಗ ಕೊರೊನಾದಂತಹ ರೋಗಗಳಿಂದಲೂ ನಮ್ಮನ್ನು ರಕ್ಷಿಸಿಕೊಳ್ಳ ಬಹುದು ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.
ಅವರು ಗುರುವಾರ ಶ್ರೀಧಾಮದಲ್ಲಿ 48 ದಿನಗಳ ಲಕ್ಷ್ಮೀಪೂಜೆಯ ಅಂಗವಾಗಿ ನಡೆಯುತ್ತಿದ್ದ ಬಾಲಭೋಜನ ಸಮಾಪನ ಕಾರ್‍ಯಕ್ರಮ ಉದ್ಘಾಟಿಸಿ ಸಂದೇಶ ನೀಡಿದರು. ಧಾರ್ಮಿಕ ವ್ರತಾಚರಣೆಗಳು ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗಿದ್ದು, ದೇಶದ ಭವಿಷ್ಯವನ್ನು ಉಳಿಸುವ ನಿಟ್ಟಿನಲ್ಲಿ ಒಟ್ಟಾಗಿ ಚಿಂತನೆ ನಡೆಸಬೇಕಾದ ಅವಶ್ಯಕತೆ ಇದೆ. ಕೃಷಿ ಬದುಕನ್ನು ಪರಿಚರಿಸುವ ಜತೆಗೆ ಮಕ್ಕಳಲ್ಲಿ ಬಾಂಧವ್ಯವನ್ನು ಬೆಸೆಯುವ ಅಗತ್ಯವಿದೆ. ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವಾದಾಗ ದುಶ್ಚಟದಿಂದ ದೂರವಾಗಿಸಲು ಸಾಧ್ಯ ಎಂದು ತಿಳಿಸಿದರು.
ಕ್ಷೇತ್ರದ ವ್ಯವಸ್ಥಾಪಕ ವಿಠಲ ಶೆಟ್ಟಿ ಸುಣ್ಣಂಬಳ, ಶ್ರೀಧಾಮ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿ.ಶೆಟ್ಟಿ, ಕಾರ್ಯದರ್ಶಿ ಗೀತಾ ಪುರುಷೋತ್ತಮ್, ರಾಜೇಶ್ ಕೆ.ಪಿ. ಉಪಸ್ಥಿತರಿದ್ದರು. ಶ್ರೀ ಕ್ಷೇತ್ರದಲ್ಲಿ ಶ್ರೀದತ್ತಯಾಗ ಸಂಪನ್ನಗೊಂಡಿತು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here