ನವದೆಹಲಿ: ಕೊವಿಡ್-19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಲಾಕ್ ಡೌನ್ ಘೋಷಿಸಿದ್ದ ಕೇಂದ್ರ ಸರ್ಕಾರ ಇದೀಗ ಲಾಕ್ ಡೌನ್ ಹಿಂತೆಗೆದು, ಮೂರನೇ ಹಂತದ ಅನ್ ಲಾಕ್ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. 2 ನೇ ಹಂತದ ಅನ್ ಲಾಕ್ ಪ್ರಕ್ರಿಯೆ ಈ ತಿಂಗಳಲ್ಲಿ ಕೊನೆಗೊಳಲಿದ್ದು, ಮುಂದಿನ ಹಂತದ ಮೂರನೇ ಅನ್ ಲಾಕ್ ನಲ್ಲಿ ಇನ್ನಷ್ಟು ಸಡಿಲಗೊಂಡಿದೆ. ಆಗಸ್ಟ್‌ 1ರಿಂದ ಇವು ಜಾರಿಗೆ ಬರಲಿವೆ.
ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಈ ಹಿಂದೆ ಜಾರಿಗೊಳಿಸಿದ್ದ ‘ರಾತ್ರಿ ಕರ್ಫ್ಯೂ’ ರದ್ದುಪಡಿಸಲಾಗಿದೆ. ಕಂಟೈನ್‌ಮೆಂಟ್‌ ವಲಯವನ್ನು ಬಿಟ್ಟು ಉಳಿದೆಡೆ ಆಗಸ್ಟ್‌ 5ರಿಂದ ಜಿಮ್‌ ಹಾಗೂ ಯೋಗ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಇದಕ್ಕಾಗಿ ಕೇಂದ್ರ ಆರೋಗ್ಯ ಸಚಿವಾಲಯವು ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಜನರು ಗುಂಪು ಸೇರುವುದರ ಮೇಲಿದ್ದ ನಿರ್ಬಂಧ ಮುಂದುವರಿಸಲಾಗಿದೆ. ಹೀಗಾಗಿ ಮೆಟ್ರೊ ರೈಲು ಸೇವೆ, ಚಿತ್ರಮಂದಿರ, ಈಜುಕೊಳಗಳು, ಆಡಿಟೋರಿಯಂ ಹಾಗೂ ಬಾರ್‌ಗಳನ್ನು ತೆರೆಯಲು ಅನುಮತಿ ಕೊಟ್ಟಿಲ್ಲ. ‘ವಂದೇ ಭಾರತ್‌ ಮಿಷನ್‌ ಅಡಿ ಯಲ್ಲಿ ಅಂತರರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಒಪ್ಪಿಗೆ ನೀಡಲಾಗಿದೆ. ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಹೇಳಲಾಗಿದೆ. ಎಲ್ಲೆಡೆ ಸೋಂಕು ಹೆಚ್ಚುತ್ತಲೇ ಇರುವುದರಿಂದ ಆಗಸ್ಟ್‌ ಅಂತ್ಯದವರೆಗೂ ಶಾಲಾ, ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ರಾಜ್ಯಗಳ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ.
‘ಕಂಟೈನ್‌ಮೆಂಟ್‌ ವಲಯಗಳಲ್ಲಿ ಆಗಸ್ಟ್‌ 31ರವರೆಗೂ ಲಾಕ್‌ಡೌನ್‌ ಮುಂದುವರಿಯಲಿದೆ. ಪರಿಸ್ಥಿತಿಯನ್ನು ಅವಲೋಕಿಸಿ ಇನ್ನಷ್ಟು ಕಠಿಣ ಲಾಕ್‌ಡೌನ್‌ ಜಾರಿಗೊಳಿಸುವ ಅಥವಾ ತೆರವುಗೊಳಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ. ಕ್ರೀಡಾ ಚಟುವಟಿಕೆಗಳು, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಭೆ, ಸಮಾರಂಭಗಳ ಮೇಲಿನ ನಿರ್ಬಂಧ ಮುಂದುವರಿಯಲಿದೆ’ ಎಂದು ಗೃಹ ಸಚಿವಾಲಯ ಬಿಡುಗಡೆಗೊಳಿಸಿದ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಆಗಸ್ಟ್‌ 15ರಂದು ದೇಶದೆಲ್ಲೆಡೆ ಸ್ವಾತಂತ್ರ್ಯ ದಿನವನ್ನು ಆಚರಿಸಲು ಒಪ್ಪಿಗೆ ನೀಡಲಾಗಿದೆ. ಈ ವೇಳೆ ಅಂತರ ಕಾಪಾಡಿಕೊಳ್ಳುವುದು, ಮುಖಗವಸು ಧರಿಸುವುದು ಸೇರಿದಂತೆ ಇತರ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here