ಮಂಗಳೂರು: ಕರಾವಳಿಯಲ್ಲಿ ಸೆ.1ರಿಂದ ಮೀನುಗಾರಿಕೆ ಆರಂಭಿಸಲು ನಿನ್ನೆ ನಡೆದ ಮೀನುಗಾರರ ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ತೀರ್ಮಾನಿಸಲಾಯಿತು
ಈ ತಿಂಗಳ ಅಂತ್ಯಕ್ಕೆ ಎಂದರೆ ಜು.31 ಕ್ಕೆ ಮೀನುಗಾರಿಕೆಯ ನಿಷೇಧದ ಅವಧಿ ಮುಗಿದು, ಆಗಸ್ಟ್ 1ರಿಂದ ಪ್ರಾರಂಭವಾಗಬೇಕಿತ್ತು. ಕೊರೊನಾ ಸಂಕಷ್ಟದ ಕಾರಣದಿಂದ ಒಂದು ತಿಂಗಳು ನಿಷೇಧವನ್ನು ಮುಂದೂಡಬೇಕಾಗುತ್ತದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಆಗಸ್ಟ್ 1 ರಂದು ಮೀನುಗಾರಿಕೆ ಚಟುವಟಿಕೆಯನ್ನು ಪ್ರಾರಂಭಿಸುವುದು ಕಷ್ಟ ಎಂದು ಮೀನುಗಾರರ ಮುಖಂಡರು ತಿಳಿಸಿದ್ದರಿಂದ ಇನ್ನೂ ಒಂದು ತಿಂಗಳ ಕಾಲ ಮೀನುಗಾರಿಕೆ ಚಟುವಟಿಕೆಯನ್ನು ಮುಂದೂಡಲಾಗುತ್ತದೆ ಎಂದು ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ನಿತಿನ್ ಕುಮಾರ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 1,200 ದೋಣಿಗಳು ಬಂದರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಶೇ.75 ರಷ್ಟು ಕಾರ್ಮಿಕರು ಆಂಧ್ರಪ್ರದೇಶ, ಒಡಿಶಾ, ತಮಿಳುನಾಡು ಮತ್ತು ಇತರ ರಾಜ್ಯಗಳಿಂದ ಮಂಗಳೂರಿಗೆ ಬರುತ್ತಾರೆ. ಸುರಕ್ಷಿತವಾದ ಮೀನುಗಾರಿಕೆ ನಡೆಸುವ ನಿಟ್ಟಿನಲ್ಲಿ ಅಗತ್ಯವಾದ ಮಾರ್ಗಸೂಚಿಯನ್ನು ರೂಪಿಸಬೇಕಾಗಿದೆ ಎಂದರು. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚೆ ಮಾಡಲಾಗುವುದು. ಅಲ್ಲದೇ, ಧಕ್ಕೆಗೆ ಬೋಟ್‌ಗಳಲ್ಲಿ ತರುವ ಮೀನಿನ ನಿರ್ವಹಣೆ ಸೇರಿದಂತೆ ಸಾಗಣೆ ಹಾಗೂ ಮಾರಾಟದ ಬಗ್ಗೆಯೂ ಯೋಜನೆ ರೂಪಿಸಬೇಕಾಗಿದೆ ಎಂದು ತಿಳಿಸಿದರು. ಮೀನು ವಹಿವಾಟು ಪ್ರಾರಂಭವಾದರೆ, ಸಾಮಾಜಿಕ ಅಂತರ, ಹಾಗೂ ಜನದಟ್ಟಣೆಯನ್ನು ನಿಯಂತ್ರಿಸುವುದು ಸವಾಲಾಗಲಿದೆ. ಕೊರೊನಾ ಸಂಕಷ್ಟದಿಂದಾಗಿ ಭಾರಿ ನಷ್ಟ ಅನುಭವಿಸುವ ಆತಂಕವೂ ಸೃಷ್ಠಿಯಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಟ್ರಾಲ್‌‌‌ ಬೋಟ್‌‌‌, ಪರ್ಸಿನ್‌‌‌ ಬೋಟ್‌‌, ಮೀನು ಮಾರಾಟಗಾರರು, ಮೀನು ರಫ್ತು ಕಂಪೆನಿಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here