Wednesday, October 25, 2023

ಕೋವಿಡಾಯಣ-8

Must read

 

ಶೈಕ್ಷಣಿಕ ಕ್ಷೇತ್ರದಂತೆ ಕೋವಿಡ್‌ಗೆ ತತ್ತರಿಸಿದ ಇನ್ನೊಂದು ಕ್ಷೇತ್ರವೆಂದರೆ ಅದು ಉದ್ಯಮ ಕ್ಷೇತ್ರ. ಉದ್ಯಮದಲ್ಲೂ ಹೋಟೆಲು ಉದ್ಯಮ ಮತ್ತು ಅದರ ಸಹವರ್ತಿ ಉದ್ಯಮಗಳಾದ ಐಸ್‌ಕ್ರೀಂ ಪಾರ್ಲರ್, ಟೀ ಸ್ಟಾಲ್, ಕೇಂಟೀನ್ ಮುಂತಾದುವುಗಳೆಲ್ಲವೂ ನೆಲಕಚ್ಚಿದುವು. ಹೋಟೆಲು ಉದ್ಯಮಿಗಳು ಶ್ರೀಮಂತರು, ಅವರಿಗೆಂದೂ ಆರ್ಥಿಕ ಕಷ್ಟ ಬಾರದು ಎಂದು ಊಹಿಸಿದರೆ ಅದು ತಪ್ಪಾದೀತು. ಹೋಟೆಲು ಮಾಲಕರಲ್ಲಿ ಶೇಕಡಾ ತೊಂಭತ್ತ ಒಂಭತ್ತೂ ಭಾಗದಷ್ಟು ಮಂದಿ ಬ್ಯಾಂಕುಗಳಿಗೆ ಕೋಟ್ಯಂತರ ರೂಪಾಯಿಗಳ ಸಾಲಗಾರರೆಂಬುದು ವಾಸ್ತವ. ಆ ಸಾಲದ ಮಾಸಿಕ ಕಂತುಗಳು, ತಿಂಗಳ ಬಡ್ಡಿಯ ಮೊಬಲಗು ಇವು ಉದ್ಯಮದ ಲಾಭದಿಂದಲೇ ಸಂದಾಯಗೊಳ್ಳುತ್ತಿರುತ್ತದೆ. ಕೆಲವು ಹೋಟೆಲ್ ಉದ್ಯಮಿಗಳು, ಕೇವಲ ಉದ್ಯಮದ ಮಾಲಕರಾಗಿದ್ದು ಕಟ್ಟಡ, ಪೀಠೋಪಕರಣಗಳು, ಪಾತ್ರೆ ಪರಡಿಗಳಿಗೆ ಪ್ರತೀ ತಿಂಗಳು ಬಾಡಿಗೆಯನ್ನೂ ಕಟ್ಟುತ್ತಿರುತ್ತಾರೆ. ಹೋಟೆಲಿನ ವಿದ್ಯುತ್ ಬಿಲ್, ದೂರವಾಣಿ ಬಿಲ್, ನೀರಿನ ಬಿಲ್ ಇತ್ಯಾದಿಗಳನ್ನು ಉದ್ಯಮ ಚಾಲನೆಯಲ್ಲಿಲ್ಲದಿದ್ದರೂ ನಿರಂತರ ಮತ್ತು ಕರಾರುವಾಕ್ಕಾಗಿ ಪಾವತಿಸುತ್ತಾ ಇರಲೇ ಬೇಕು. ಇಷ್ಟೆಲ್ಲ ಆರ್ಥಿಕ ವ್ಯವಸ್ಥೆಯನ್ನು ಸರಿದೂಗಿಸಲು ತಲೆ ಬಿಸಿ ಮಾಡುವ ಉದ್ಯಮಿಗಳು ಕೆಲಸಗಾರರಿಗೆ ವೇತನವನ್ನು ಪಾವತಿಸುವುದಾದರೂ ಹೇಗೆ? ಎಲ್ಲಿಂದ?
ಹೊಟೆಲುಗಳಲ್ಲಿ, ಪಾರ್ಲರ್‌ಗಳಲ್ಲಿ ಆಥವಾ ಕ್ಯಾಂಟೀನ್‌ಗಳಲ್ಲಿ ದುಡಿಯುವವರಲ್ಲಿ ಬಹುತೇಕರು ಅನ್ಯ ಕೆಲಸಗಳ ಕುಶಲಿಗಳಲ್ಲ. ಬೀಗಮುದ್ರೆಯ ಸಂದರ್ಭದಲ್ಲಿ ಯಾರೂ ಯಾವುದೇ ಉದ್ಯೋಗಮಾಡುವಂತಿರಲಿಲ್ಲ. ಬೀಗಮುದ್ರೆ ಸಡಿಲಗೊಂಡರೂ ಹೋಟೆಲುಗಳಿಗೆ ಗ್ರಾಹಕರ ಸಂಖ್ಯೆ ಭಾರೀ ಇಳಿಕೆಯಾದುದರಿಂದ ಅವರಿಗೆ ಉದ್ಯಮವನ್ನು ಮುಂದುವರಿಸಲು ಬಹಳ ಕಷ್ಟವಾಗಿ, ಹೋಟೆಲು ಕಾರ್ಮಿಕರು ಮಾಲಕರ ಕರೆಗೆ ಬಕ ಪಕ್ಷಿಯಂತೆ ಕಾದೂ ಕಾದೂ ಸುಸ್ತಾದರು. ಒಂದೆಡೆ ಹೊಟ್ಟೆಗೆ ಹಿಟ್ಟಿಲ್ಲ, ಇನ್ನೊಂದೆಡೆ ಕೈಗೆ ಕೆಲಸವೂ ಇಲ್ಲ.
ಹೋಟೆಲುದ್ಯಮದಲ್ಲಾದ ಕಂಪನವು ಸಮಾಜಕ್ಕೂ ಆಘಾತಕಾರಿಯಾಗಿದೆ, ಭಾರೀ ಶ್ರೀಮಂತರೆನಿಸಿದ ಹೋಟೆಲು ಮಾಲಕರು ಸಮಾಜದ ಅನೇಕ ಅಗತ್ಯಗಳನ್ನು ಪೂರೈಸಲು ನೆರವು ನೀಡುತ್ತಿದ್ದರೆಂಬುದು ಸತ್ಯ. ಬಡವರಿಗೆ ಮನೆ ಕಟ್ಟಲು, ಮದುವೆ ಮಾಡಿಸಲು, ಮಕ್ಕಳ ವಿದ್ಯಾಭ್ಯಾಸ ಹೀಗೆ ಹಲವಾರು ರೀತಿಯಲ್ಲಿ ಹೋಟೆಲುದ್ಯಮಿಗಳು ಸಮಾಜದ ಆಧಾರ ಸ್ಥಂಭವಾಗಿದ್ದರು. ಶಾಲೆಗಳು, ದೇವಾಲಯ, ಮಂದಿರ, ಮಸೀದಿ, ಚರ್ಚುಗಳ ದುರಸ್ತಿಗೆ ಅವರಿಂದ ಧನಸಹಾಯ ಬರುತ್ತಿತ್ತು. ಹೊಸ ನಿರ್ಮಣಗಳಿಗೂ ಕೈ ಹಾಕಿದ ಎಷ್ಟೋ ಹೋಟೆಲು ಉದ್ಯಮಿಗಳಿದ್ದಾರೆ. ಆವರ ವ್ಯವಹಾರದ ನಷ್ಟ ಸಮಾಜಕ್ಕೂ ಆದ ನಷ್ಟವಲ್ಲವೇ?
ಉದ್ಯಮಿಗಳು ಮಾತ್ರವಲ್ಲದೆ ಹೋಟೆಲಿನಲ್ಲಿ ಮೇನೇಜರ್, ಎಕೌಂಟೆಂಟ್, ಸುಪರ್‌ವೈಸರ್ ಮುಂತಾದ ಉನ್ನತ ಸ್ಥಾನದಲ್ಲಿ ದುಡಿಯುತ್ತಿದ್ದವರೂ ತಮ್ಮ ಊರನ್ನು ಮರೆಯದೆ ಹೆಚ್ಚಿನ ಅಗತ್ಯಗಳಲ್ಲಿ ನೆರವಾಗಿದ್ದಾರೆ. ಅವರಿಗೆ ಉಂಟಾದ ದಿಕ್ಕು ಕಾಣದ ಪರಿಸ್ಥಿತಿಯ ಕಾರಣದಿಂದ ಊರುಗಳೂ ಸಮಸ್ಯೆಗಳಿಗೊಳಗಾದುವು. ಊರಿನಲ್ಲಾಗುವ ದೈವನೇಮಗಳಿಗೆ, ಜಾತ್ರೋತ್ಸವಗಳಿಗೆ, ವಾರ್ಷಿಕೋತ್ಸವಗಳಿಗೆ, ಕಂಬಳ ಕಬಡ್ಡಿ ಕ್ರಿಕೆಟ್ ಮುಂತಾದ ಕ್ರೀಡೆಗಳಿಗೆ, ಬ್ರಹಕಲಶೋತ್ಸವ, ನಾಗವನ ಪ್ರತಿಷ್ಠೆ ಮತ್ತು ನಾಗಾರಾಧನೆಗಳಿಗೆ ಹೊಟೆಲು ಉದ್ಯಮಗಳಿಂದ ಹರಿದು ಬರುವ ಹಣದ ನೆರವು ಕುಂಠಿತವಾದರೆ ಅದರ ಹೊರೆ ಊರವರಿಗೆ ಅಲ್ಲವೇ?
ಮಗ ಮುಂಬಯಿ ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದಾನೆ, ಪ್ರತೀ ತಿಂಗಳು ಕೈ ತುಂಬ ಕಳುಹಿಸುತ್ತಾನೆ ಎಂದು ಕಾಯುವ ವೃದ್ಧ ತಂದೆ ತಾಯಿಗಳು ಅಥವಾ ಕುಟುಂಬದವರು ಆಕಾಶದತ್ತ ಮುಖ ಮಾಡಿಕೊಂಡು ಕೈ ಚೆಲ್ಲ ಬೇಕಾಗಿ ಬರುವಂತಾಗಲು ಕೋವಿಡ್೧೯ ಕಾರಣ. ಹೋಟೆಲು ಉದ್ಯಮಕ್ಕಾದ ಹೊಡೆತ ಶ್ರೀಸಾಮಾನ್ಯರನೇಕರಿಗೆ ಬಲಭೀಮನ ಗಧಾ ಪ್ರಹಾರದಂತೆಯೇ ತಾಳಲಸದಳವಾದುದು. ಮನೆಕಟ್ಟಲು ಹೊರಟ ಅನೇಕರ ಮನೆಯ ಕಾಮಗಾರಿ ಅರ್ಧಕ್ಕೆ ನಿಂತು ಬಿಟ್ಟಿದೆ. ನಿಗದಿಯಾಗಿದ್ದ ಅನೇಕ ವಿವಾಹ ಸಂಬಂಧಗಳು ಕಳಚಿ ಹೋಗಿವೆ. ಹೆತ್ತವರ ಸಂಪಾದನೆಗಾದ ಹೊಡೆತದ ಕಹಿ ಬೇನೆಯು ಕಲಿಯುವ ವಿದ್ಯಾರ್ಥಿಗಳ ಕಲಿಕೆಗೂ ಕೆಂಪು ಗೆರೆಯನ್ನು ಹಾಕಿದೆ. ಅಸಂಖ್ಯ ಕುಟುಂಬಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ಕುಟುಂಬದ ಸದಸ್ಯರ ಚಿಕಿತ್ಸಾ ಬಿಲ್ ಪಾವತಿಗೆ ಮನೆಯ ಯಜಮಾನನಿಗೆ ಅಡಚಣೆಯನ್ನುಂಟು ಮಾಡಿದೆ.

— ಮುಂದುವರಿಯುವುದು

ರಮೇಶ ಎಂ. ಬಾಯಾರು ಎಂ.ಎ, ಬಿಎಡ್,
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರು
’ನಂದನ’ ಕೇಪು- 574243

 

More articles

Latest article