ಬಂಟ್ವಾಳ: ಬಂಟ್ವಾಳ – ಬೈಪಾಸ್ ರಾಜ್ಯ ಹೆದ್ದಾರಿ ಕಾಮಗಾರಿಗಾಗಿ ಉಳ್ಳಾಲ ರಾಜ್ಯ ಹೆದ್ದಾರಿಯ ದುರ್ಬಳಕೆ ಮಾಡಲಾಗುತ್ತಿದೆ, ಜೊತೆಗೆ ವಾಹನ ಸವಾರರು ಸಾವು ನೋವಿನ ನಡುವೆ ಸಂಚಾರ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪ ವ್ಯಕ್ತಪಡಿಸಿದ್ದಾರೆ.
ಇದು ಉಳ್ಳಾಲ – ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆ.
ಇದನ್ನು ಕೇಳುವವರಿಲ್ಲದೆ ರಸ್ತೆಯ ಸ್ಥಿತಿ ಅದೋಗತಿಯಾಗಿದೆ.
ಕಳೆದ ಕೆಲವು ತಿಂಗಳಿನಿಂದ ಈ ರಸ್ತೆಯಲ್ಲಿ ವಾಹನ ಸವಾರರು ಬಿದ್ದು ಗಾಯಗೊಂಡು ಆಸ್ಪತ್ರೆಗೆ ಸೇರಿದವರು ಅನೇಕ ಮಂದಿ.
ಆದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ತುಟಿಪಿಟಿಕ್ ಎನ್ನಲ್ಲ ಯಾಕೆ ಎಂಬುದರ ಬಗ್ಗೆ ಸಂಶಯ ವ್ಯಕ್ತವಾಗಿದೆ.
ಇದು ಉಳ್ಳಾಲ – ಮೆಲ್ಕಾರ್ ರಸ್ತೆಯ ಮಧ್ಯೆ ಮಾರ್ನಬೈಲು ಗುಳಿಗನ ಗುಡಿಯ ಮುಂಭಾಗದಲ್ಲಿ ನಡೆಯುವ ಕಾಂಕ್ರೀಟ್ ಮಿಕ್ಸಿಂಗ್ ಕೇಂದ್ರದಿಂದ ಜನರಿಗೆ ಅಗುವ ತೊಂದರೆ.

ಬಿ.ಸಿ. ರೋಡಿನಿಂದ ಬೈಪಾಸ್ ವರೆಗೆ ನಡೆಯುವ ಕಾಂಕ್ರೀಟ್ ಕಾಮಗಾರಿಗಾಗಿ ಮಿಕ್ಸಿಂಗ್ ಕೆಲಸಗಳು ಈ ಜಾಗದಲ್ಲಿ ನಡೆಯುತ್ತದೆ. ಗುತ್ತಿಗೆ ವಹಿಸಿದ ಖಾಸಗಿ ಕಂಪೆನಿ ಇಲ್ಲಿ ಮಿಕ್ಸಿಂಗ್ ಮಾಡಿ ಬಳಿಕ ಇಲ್ಲಿಂದ ಘನಗಾತ್ರದ ವಾಹನಗಳ ಮೂಲಕ ಕಾಮಗಾರಿ ನಡೆಯುವ ಜಾಗಕ್ಕೆ ಸಾಗಿಸಲಾಗುತ್ತದೆ.
ಹಾಗೆ ಸಾಗಿಸುವ ವೇಳೆ ಘನಗಾತ್ರದ ವಾಹನದ ಚಕ್ರದ ಮೂಲಕ ರಾಜ್ಯ ಹೆದ್ದಾರಿಗೆ ಮಣ್ಣು ಬಂದು ರಸ್ತೆಯೆಲ್ಲಾ ಕೆಸರು ತುಂಬಿಕೊಂಡು ವಾಹನ ಸಂಚಾರಕ್ಕೆ ತೊಡಕಾಗುತ್ತಿರುವುದಲ್ಲದೆ, ವಾಹನ ಸವಾರರು ಕೆಸರು ಮಿಶ್ರಿತ ರಸ್ತೆಯಲ್ಲಿ ಜಾರಿ ಬಿದ್ದು ಗಾಯಗೊಂಡು ಪ್ರತಿನಿತ್ಯ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

ಒಂದು ಕಡೆ ರಸ್ತೆ ಅಭಿವೃದ್ಧಿ, ಇನ್ನೊಂದು ಕಡೆ ರಸ್ತೆಯನ್ನು ದುರುಪಯೋಗ ಪಡಿಸಿಕೊಳ್ಳುವ ಕ್ರಮ ಸರಿಯಲ್ಲ ಎಂಬ ಮಾತುಗಳು ಸ್ಥಳೀಯರದ್ದು. ಕಾಮಗಾರಿಗಾಗಿ ಇವರು ಆರಿಸಿಕೊಂಡ ಜಾಗದಲ್ಲಿ ಸರಿಯಾದ ವ್ಯವಸ್ಥೆ ಮಾಡಿದ ಬಳಿಕವೇ ಕಾರ್ಯರಂಭ ಮಾಡಬೇಕಿತ್ತು ಅಥವಾ ಸ್ಥಳೀಯರಿಗೆ ಮತ್ತು ವಾಹನ ಸವಾರರಿಗೆ ತೊಂದರೆಯಾಗದ ರೀತಿಯಲ್ಲಿ ಇವರು ಕೆಲಸ ಮಾಡಿದರೆ ಉತ್ತಮ ಎಂಬುದು ಇವರ ಮಾತು.


ಸ್ಥಳೀಯ ಗ್ರಾ.ಪಂ. ಅಧಿಕಾರಿ ಶಾಮೀಲು
ಈ ಕಾಮಗಾರಿ ಆರಂಭ ಮಾಡುವ ವೇಳೆ ಸ್ಥಳೀಯ ಗ್ರಾಮ ಪಂಚಾಯತ್ ಎನ್.ಒ.ಸಿ.ನೀಡಿದೆ. ಆದರೆ ಎನ್.ಒ.ಸಿ. ನೀಡುವ ವೇಳೆ ರಾಜ್ಯ ಹೆದ್ದಾರಿಗೆ ಯಾವುದೇ ಅಪಾಯವಾಗದಂತೆ ಮತ್ತು ಸಾರ್ವಜನಿಕರಿಗೆ ಅನ್ಯಾಯವಾಗದಂತೆ ಕಾಮಗಾರಿ ನಡೆಸಲು ಇವರಿಗೆ ಅನುಮತಿ ನೀಡುವುದು ಗ್ರಾಮ ಪಂಚಾಯತ್ ಜವಬ್ದಾರಿ. ಆದರೆ ಇಲ್ಲಿ ಇಷ್ಟು ಸಮಸ್ಯೆಯಾದರೂ ಗ್ರಾಮ ಪಂಚಾಯತ್ ಆಧಿಕಾರಿ ಮಾತ್ರ ಮೌನವಾಗಿ ಇದ್ದಾರೆ ಯಾಕೆ ಎಂಬ ಪ್ರಶ್ನೆ ಸಾರ್ವಜನಿಕರದ್ದು. ಅಲ್ಲದೆ ಅವರು ಈ ಕಂಪೆನಿ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರೊಬ್ಬರು ಆರೋಪ ವ್ಯಕ್ತಪಡಿಸಿದ್ದಾರೆ.


ಗಮನ ಹರಿಸಿ: 
ಸಾರ್ವಜನಿಕರಿಗೆ ಹಾಗೂ ರಾಜ್ಯ ಹೆದ್ದಾರಿಗೆ ತೊಂದರೆಯಾದರೂ ಅಧಿಕಾರಿಗಳು ಮೌನವಾಗಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಇಲ್ಲಿನ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಸಮಸ್ಯೆಗೆ ಸ್ಪಂದಿಸಿ ಎಂಬ ಮನವಿ ವಾಹನ ಸವಾರರದ್ದು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here