ಎಲ್ಲಾ ಉದ್ಯೋಗವು ಅವರವರಿಗೆ ಇಷ್ಟವೇ. ಎಲ್ಲರೂ ಹೇಳುತ್ತಾರೆ ಗಡಿ ಕಾಯುವ ಯೋಧರು ಗುಡಿಯೊಳಗಿನ ದೇವರು! ವೈದ್ಯರು ಜೀವವುಳಿಸುವ ದೇವರು! ಶುಶ್ರೂಷಕಿಯರು ಆರೈಕೆಯ ದೇವತೆಯರು! ಅನಿವಾರ್ಯ ಕಾಲದಲ್ಲಿ ಒದಗಿ ಬರುವವರೇ ದೇವರು ಕಳಿಸಿದ ಸೇವಾದೂತರು! ಸತ್ಯ!! ಅದಿರಲಿ ಇಲ್ಲಿ ನಾನು ಹೇಳ ಹೊರಟಿರುವುದು ಆಂಬ್ಯುಲೆನ್ಸ್ ಚಾಲಕ ವ್ರತ್ತಿಯ ಸಹೋದರರ ಕರ್ತವ್ಯದ ಬಗ್ಗೆ..!
ಹೌದು… ಜೀವವನ್ನು ಮುಡಿಪಾಗಿಟ್ಟು ರಾತ್ರೆ ಹಗಲು ದುಡಿಯುವ, ಕರುಣೆ ಇದ್ದರೂ ಅದನ್ನು ಗೌಪ್ಯವಾಗಿರಿಸಿ ಜೀವನೋಪಾಯಕ್ಕಾಗಿ ದುಡಿಯುವ, ಮಾನವೀಯತೆ ಇದ್ದರೂ ತನ್ನ ಕರ್ತವ್ಯವೆಂದು ದುಡಿಯುವ, ನೋವು ಆಕ್ರಂಧಣ ಗಾಬರಿಯ ನಡುವೆ ಆಂಬ್ಯುಲೆನ್ಸ್ ನ ಒಳಗೆ ಎಲ್ಲರೂ ಬದುಕಬೇಕು ಎಂಬ ತುಡಿತದೊಂದಿಗೆ ಕ್ಲಚ್ ಆ್ಯಕ್ಸಿಲೇಟರ್ ಬ್ರೇಕ್ ಗಳಿಗೆ ತನ್ನ ಕಾಲಪಾದ ಸ್ಪರ್ಶಿಸುತ್ತಾ, ಸೈರನ್ ಮೊಳಗಿಸುತ್ತಾ, ವೇಗ ಹೆಚ್ಚಿಸಿ ಸಾಗುವ ಆಂಬ್ಯುಲೆನ್ಸ್ ಚಾಲಕನಿಗೂ ಕಷ್ಟ ನೋವುಗಳಿವೆ.‌ಮನೆಯಲ್ಲಿ ಅವನನ್ನು ಕಾಯುವ ಜೀವಗಳಿವೆ.
ಬದುಕು ಬಂಡಿಯ ಸಾಗಿಸಲು ಇವನು ತುರ್ತು ಚಿಕಿತ್ಸಾ ವಾಹನವನ್ನು ವೇಗದಲ್ಲಿ ಓಡಿಸಲೇ ಬೇಕು. ಸೈರನ್ ಮೊಳಗಿದರೆ ಮಾತ್ರ ಆ ವಾಹನದ ಒಳಗಿರುವ ಜೀವಕ್ಕೆ ಪುನರ್ಜನ್ಮ ಸಾಧ್ಯ ಈ ಮೂಲಕ‌ ಆ ಚಾಲಕನ ಬದುಕಿನ ದಾರಿಯ ಸೈರನ್ ಸದ್ದು ಮಾಡಬಹುದು. ಅದಕ್ಕಾಗಿ ಆತನ ಮುಂಜಾನೆಯ ಪ್ರಾರ್ಥನೆಯೇ ದೇವರೇ…ಇಂದೂ ನನ್ನ ಆಂಬ್ಯುಲೆನ್ಸ್ ಗೆ ತುರ್ತು ಚಿಕಿತ್ಸೆಗೆ ಸಾಗಿಸಲು ಸೀರಿಯಸ್ ಕೇಸ್ ಬರಲಿ, ಇಂದಾದರೂ ಒಂದೆರಡು ಹೆಣಗಳನ್ನು ಸಾಗಿಸಲು ನನ್ನ ಈ ವಾಹನಕ್ಕೆ ಬರಲಿ…!
ಎಂಥಾ ವಿಪರ್ಯಾಸ!? ಎಲ್ಲರೂ ದೇವರಲ್ಲಿ ಆರೋಗ್ಯ ಕೊಡು, ಸರ್ಜರಿಯಿಂದ ರಕ್ಷಿಸು, ಖಾಯಿಲೆಯಿಂದ ಪಾರುಮಾಡು ಎಂದು ಬೇಡಿದರೆ ಇವರದ್ದು ತದ್ವಿರುದ್ಧ. ಇದು ಅನಿವಾರ್ಯ, ಬದುಕಲ್ಲಿ ವ್ರತ್ತಿಗಳ ದುಡಿತದ ವಿಸ್ಮಯ.
ಆದರೆ ಇಂತಹ ಸವಾಲಿನ ಉದ್ಯೋಗವನ್ನು ಆಯ್ಕೆ ಮಾಡಿದ ಆಂಬ್ಯುಲೆನ್ಸ್ ಚಾಲಕರ ನಿರ್ಧಾರವನ್ನು ಮೆಚ್ಚಲೇಬೇಕು. ರೋಗಿಯನ್ನಾಗಲಿ, ಹೆಣವನ್ನಾಗಲಿ, 3 ಗಂಟೆಯ ಒಳಗೆ ಮಂಗಳೂರಿನಿಂದ ಬೆಂಗಳೂರಿಗೆ ಸಾಗಿಸುವ ಪುಟ್ಟ ಹ್ರದಯವನ್ನಾಗಲಿ ತನ್ನ ಮನೆ ಪತ್ನಿ ಮಕ್ಕಳನ್ನು ಮರೆತು ಎಕ್ಸಿಲೇಟರ್ ಮೇಲೆ ಬಾರದೆ, ಬ್ರೇಕ್ ಕೆಳಗೆ ತಳ್ಳದೆ ವೇಗದಲ್ಲಿ ಕರ್ತವ್ಯ ನಿರ್ವಹಿಸುವ ಆಂಬ್ಯುಲೆನ್ಸ್ ಚಾಲಕರೂ ಯೋಧರಲ್ಲವೇ!? ಅದರ ಒಳಗೆ ಜೀವದ ಸುತ್ತ ಕುಳಿತಿರುವ ಜೀವಗಳಿಗೆ ದೇವರಲ್ಲವೇ?.
ಏಕಾಗ್ರತೆಯೇ ಆ ಚಾಲಕನಿಗೆ ಶಕ್ತಿ..! ವ್ರತ್ತಿಯ ಮೇಲಿನ ಭಕ್ತಿಯೇ ಅವನಿಗೆ ರಕ್ಷಣೆ..! ವೇಗದ ಈ ಪಯಣದಲ್ಲಿ ಒಂದು ಕ್ಷಣ ಆತ ಮನ ಬದಲಾಯಿಸಿ ಭಾವನಾತ್ಮಕನಾದರೆ ಆ್ಯಂಬ್ಯುಲೆನ್ಸ್ ಮಸಣ ವಾಸಿಯಾಗಬಹುದು. ಧೈರ್ಯವೇ ಇಲ್ಲಿ ಶ್ರೀರಕ್ಷೆ..!
ಬೊಬ್ಬೆ ಆಕ್ರಂಧನಗಳೊಂದಿಗೆ ಮನೆಯಂಗಳಕ್ಕೆ ಹೆಣ ಹೊತ್ತು ಬರುವ ಆ್ಯಂಬುಲೆನ್ಸ್. ಇಲ್ಲಿ ಆ ಚಾಲಕನ ತಾಳ್ಮೆಯ ಕಾರ್ಯ ತತ್ಪರತೆ, ಅವಸರ ಮಾಡದೆ ತನ್ನ ಇತಿ ಮಿತಿಯ ಕೆಲಸ ನಿರ್ವಹಿಸಿ ಕಳೆ ಬರಹ ಒಪ್ಪಿಸಿ ಆ ಕುಟುಂಬದ ಒರ್ವ ವ್ಯಕ್ತಿಯಾಗಿ ಕರುಣಾವಂತನಾಗುತ್ತಾನೆ. ಅವರೊಂದಿಗೆ ತಾನೂ ಅತ್ತು ಭಾವನಾಜೀವಿಯಾದರೆ ಅವನ ವ್ರತ್ತಿ ಜೀವನದಲ್ಲಿ ಕಣ್ಣೀರ ಧಾರೆ ಹರಿ ಹರಿದು ಕಣ್ಣೀರೆ ಬರಿದಾಗುತಿತ್ತು. ಅಲ್ಲಿ ಅವನದ್ದು ಗಂಭೀರ ಪಾತ್ರವೇ.
ಇಂತಹ ಗಂಡಿಗೆಯ ಗುಂಡಿಗೆಯ ಆಂಬ್ಯುಲೆನ್ಸ್ ಚಾಲಕ‌ ಒಂದು ಕೆಲಸ ಮುಗಿಸಿ ಮೊಬೈಲ್ ಕರೆಯ ಕಡೆಗೆ ವಾಹನ ತಿರುಗಿಸುತ್ತಾನೆ, ಚಕ್ರ ಉರುಳುತ್ತದೆ.. ಜೀವನ ಸಾಗುತ್ತದೆ, ಆ್ಯಂಬುಲೆನ್ಸ್ ನಲ್ಲಿಯೇ ಹೆರಿಗೆಯಾಗುತ್ತದೆ ಅಲ್ಲಿಯೂ ಅವನ ಕಾರ್ಯಕ್ಷಮತೆ ಅವನನ್ನು ಇನ್ನೂ ಧ್ರಡಗೊಳಿಸುತ್ತದೆ.
ಆ್ಯಂಬುಲೆನ್ಸ್ ಚಾಲಕನ ಕಾರ್ಯ ದಕ್ಷತೆ ಮತ್ತು ಮಾನಸಿಕ ಒತ್ತಡವನ್ನು ಅರಿಯ ಬೇಕಾದರೆ ಒಮ್ಮೆಯಾದರೂ ರೋಗಿಯಾಗದೆ, ಹೆಣವಾಗದೆ ಆ್ಯಂಬುಲೆನ್ಸ್ ಹತ್ತಬೇಕು.! ನರಳುವ ಜೀವವ ಉಳಿಸಲು ಹ್ರದಯದ ಮಿಡಿತಕ್ಕಿಂತ ವೇಗವಾಗಿ ತಿರುಗುವ ಆ್ಯಂಬುಲೆನ್ಸ್ ಚಕ್ರ,! ಜೀವವನ್ನು ಉಳಿಸ ಬೇಕೆಂದು ಶಕ್ತಿ ಹಾಕಿ ಆ್ಯಕ್ಸೀಲೇಟರ್ ಮೆಟ್ಟಿ ಓಡಿಸುವ ಚಾಲಕನ ಧೈರ್ಯ! ನಿರಾಸೆಯಿಂದ ಸೈರನ್ ಆಪ್ ಮಾಡಬೇಕಾಗಿ ಬಂದಾಗ ಅವನ ನೋವಿನ ಮುಖ.! ನನ್ನ ವೇಗದ ಚಾಲನೆಯಿಂದ ಒಂದು ಜೀವಕ್ಕೆ ಪುನರ್ಜನ್ಮ ಸಿಕ್ಕಿತು ಎಂದಾಗ ಸ್ಟೇರಿಂಗ್ ಮೇಲೆ ತಲೆ ಇಟ್ಟು ಶರಣಾಗಿ ಅವನ ಕಣ್ಣಿಂದ ಇಳಿಯುವ ಆನಂದ ಭಾಷ್ಪ.!
ಅಯ್ಯೋ… ಇದುವೇ ಸ್ವಾಮೀ ಜೀವನ, ಎಷ್ಟು ಮೆರೆದರೂ…. ಎಷ್ಟು ಕೂಡಿಟ್ಟರೂ… ಆ್ಯಂಬುಲೆನ್ಸ್ ಯಾತ್ರೆ ಕೈ ಗೊಂಡಾಗ ಜೀವನದ ಮಹತ್ವ ತಿಳಿಯುತ್ತದೆ. ಜೀವನ್ಮರಣದ ಎಡೆಯಲ್ಲಿ ಯಾರಿಗೋ ಬೇಕಾಗಿ ತನ್ನ ಜೀವವನ್ನು ಲೆಕ್ಕಿಸದೆ ರಾತ್ರಿ ಹಗಲೆನ್ನದೆ ದುಡಿದು, ಅಳುವ ರೋಧಿಸುವವರ ಸಮಾಧಾನಿಸುವ ಆ ಚಾಲಕ ನಾಯಕನಲ್ಲವೇ..?
ದಯವಿಟ್ಟು ಆ್ಯಂಬುಲೆನ್ಸ್ ಸೈರನ್ ಗೆ ಜಾಗ್ರತರಾಗಿ.. ಅದರ ಚಾಲಕನ ಒತ್ತಡವನ್ನು ಅರ್ಥೈಸಿ, ಅದರೊಳಗಿನ ತುರ್ತು ಚಿಕಿತ್ಸೆಯ ಜೀವ ಅಥವಾ ಪಾರ್ಥಿವ ಶರೀರದ ಬಂಧುಗಳ ನೋವನ್ನು ತಿಳಿಯಿರಿ, ಹೆಚ್ಚಾಗಿ ಆ ಚಾಲಕನ ಕರ್ತವ್ಯಕ್ಕೆ ಸಹಕರಿಸಿ, ವೇಗ ಹೆಚ್ಚಿಸಲು ಅನುಕೂಲವಾಗುವಂತೆ ದಾರಿ ಬಿಟ್ಟು ಕೊಡಿ.
✍️ ಬರಹ : ಎಚ್ಕೆ ನಯನಾಡು

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here