



ಮಂಗಳೂರು: ವಿದೇಶದಿಂದ ಮಂಗಳೂರಿಗೆ ಮರಳುವ ಪ್ರಯಾಣಿಕರ ಕ್ವಾರಂಟೈನ್ಗೆ ಸಂಬಂಧಿಸಿ ಜಿಲ್ಲಾ ಆರೋಗ್ಯ ಅಧಿಕಾರಿ ಇಂದು ಸ್ಪಷ್ಟೀಕರಣ ನೀಡಿದ್ದು, ವಿದೇಶದಿಂದ ಮರಳಿದವರಿಗೆ ಏಳು ದಿನಗಳ ಹೋಟೆಲ್ ಕ್ಯಾರೆಂಟೈನ್ ಕಡ್ಡಾಯವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ವಿದೇಶದಿಂದ ಮರಳಿದವರ ಕ್ವಾರಂಟೈನ್ ಕಾರ್ಯವಿಧಾನಗಳ ಬಗ್ಗೆ ಕೆಲವೊಂದು ಗೊಂದಲಗಳು ಸೃಷ್ಟಿಯಾಗಿದ್ದವು. ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಸರ್ಕಾರ ಕ್ವಾರಂಟೈನ್ ಮಾಡಲ್ಲ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿ ಹೇಳಿಕೆಯನ್ನು ಜಿಲ್ಲಾ ಮಾಹಿತಿ ಇಲಾಖೆ ಬಿಡುಗಡೆ ಮಾಡಿದ್ದು, ಅದರಲ್ಲಿ ವಿದೇಶದಿಂದ ಆಗಮಿಸುವ ಜನರ ಕ್ವಾರಂಟೈನ್ಗೆ ಸಂಬಂಧಿಸಿ ಸಾಮಾಜಿಕ ಮಾಧ್ಯಮ ಮತ್ತು ಮಾಧ್ಯಮಗಳಲ್ಲಿ ಅವಾಸ್ತವಿಕ ಮಾಹಿತಿ ಬರುತ್ತಿದೆ. ಈ ಬಗ್ಗೆ ತಿಳಿಸುವುದೇನೆಂದರೆ, ವಿದೇಶಗಳಿಂದ ಬಂದವರು ಕಡ್ಡಾಯವಾಗಿ 14 ದಿನ ಕ್ವಾರೆಂಟೈನ್ ಇರಬೇಕಾಗುತ್ತದೆ. ಇದರಲ್ಲಿ 7 ದಿನಗಳ ಕಾಲ ಸಾಂಸ್ಥಿಕ ಕ್ವಾರೆಂಟೈನ್ ನಲ್ಲಿ (ಲಾಡ್ಜ್) ಇರಲೇಬೇಕು. ಈ ಅವಧಿಯಲ್ಲಿ ಅವರ ಗಂಟಲದ್ರವ ಪರೀಕ್ಷೆ ನಡೆಸಿ, ನೆಗೆಟಿವ್ ಬಂದರೆ 7 ನೇ ದಿನದ ನಂತರ ಹೋಂ ಕ್ವಾರೆಂಟೈನ್ ಗೆ ಕಳುಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಹಾಗೆಯೇ ವಿದೇಶದಿಂದ ಬಂದವರಲ್ಲಿ 10 ವರ್ಷದೊಳಗಿನ ಮಕ್ಕಳು, 60 ವರ್ಷದ ಮೇಲಿನವರು, ಗರ್ಭಿಣಿಯರು, ಬೇರೆ ಖಾಯಿಲೆಗಳಿಂದ ಬಳಲುತ್ತಿರುವವರನ್ನು ಸಾಂಸ್ಥಿಕ ಕ್ವಾರೆಂಟೈನ್ (ಲಾಡ್ಜ್) ಗೆ ಕಳುಹಿಸಿದ ಮರುದಿನವೇ ಅವರ ಗಂಟಲದ್ರವ ಮಾದರಿ ಸಂಗ್ರಹಿಸಲಾಗುತ್ತದೆ. ನಂತರ ಲ್ಯಾಬ್ ವರದಿ ನೆಗೆಟಿವ್ ಬಂದರೆ ಮಾತ್ರ ಅವರನ್ನು 14 ದಿನಗಳ ಹೋಂ ಕ್ವಾರೆಂಟೈನ್ ಗೆ ಕಳುಹಿಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.






