ಬೆಂಗಳೂರು: ರಾಜ್ಯದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಯಲ್ಲಿ ಜುಲೈ 31ರಂದು ಹಾಗೂ ಇತರ ಜಿಲ್ಲೆಗಳಲ್ಲಿ ಆಗಸ್ಟ್‌ 1ರಂದು ಬಕ್ರೀದ್‌ ಹಬ್ಬದ ಆಚರಣೆ ನಡೆಯಲಿದ್ದು, ಆ ದಿನ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸುವುದಕ್ಕೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿದೆ.

ಈ ಬಗ್ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್‌ ಮತ್ತು ವಕ್ಫ್‌ ಇಲಾಖೆ ಕಾರ್ಯದರ್ಶಿ ಎ.ಬಿ. ಇಬ್ರಾಹಿಂ ಅವರು ಆದೇಶ ಹೊರಡಿಸಿದ್ದು, ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸುವಂತಿಲ್ಲ. ಮಸೀದಿಗಳಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಹಾಗೂ ಮಾರ್ಗಸೂಚಿ ಪಾಲಿಸಿ ಗರಿಷ್ಠ 50 ಜನರು ಮಾತ್ರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಬಹುದಾಗಿದೆ. ಹೆಚ್ಚು ಜನರು ಇದ್ದಲ್ಲಿ ಮೂರು ತಂಡಗಳಾಗಿ ವಿಭಾಗ ಮಾಡಿ ಪ್ರಾರ್ಥನೆ ಸಲ್ಲಿಸಬಹುದು. ಆದರೆ ಮಸೀದಿ ಹೊರತು ಪಡಿಸಿ ಬೇರೆ ಯಾವ ಪ್ರದೇಶದಲ್ಲಿಯೂ ಸಾಮೂಹಿಕ ಪ್ರಾರ್ಥನೆ ಆಯೋಜನೆ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ.

ಈ ಕುರಿತಾಗಿ ಸರ್ಕಾರ ಕೆಲವೊಂದು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಮಸೀದಿಗೆ ಬರುವವರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕಾಗಿದೆ. 60 ವರ್ಷ ದಾಟಿದವರು ಮತ್ತು 10 ವರ್ಷ ಒಳಗಿನ ಮಕ್ಕಳು ಮನೆಯಲ್ಲೇ ಪ್ರಾರ್ಥಿಸಬೇಕು. ಅವರಿಗೆ ಮಸೀದಿಗೆ ಬರಲು ಅವಕಾಶವಿಲ್ಲ. ಪ್ರಾರ್ಥನೆ ಸಂದರ್ಭ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಬೇಕು. ಮಸೀದಿ ಪ್ರವೇಶಕ್ಕೂ ಮೊದಲು ದೇಹದ ಉಷ್ಣಾಂಶ ತಪಾಸಣೆ ಮಾಡಿ, ಕೈಗಳನ್ನು ಸಾಬೂನು ಅಥವಾ ಸ್ಯಾನಿಟೈಝರ್‌ ಮೂಲಕ ಕಡ್ಡಾಯವಾಗಿ ಸ್ವಚ್ಛಗೊಳಿಸಬೇಕು. ಹಾಗೆಯೇ ಮಸೀದಿಯಲ್ಲಿ ಧಾರ್ಮಿಕ ಗ್ರಂಥಗಳನ್ನು ಮುಟ್ಟುವಂತಿಲ್ಲ. ಹಸ್ತ ಲಾಘವ ಮತ್ತು ಆಲಿಂಗನವನ್ನು ಕೂಡಾ ಮಾಡುವಂತಿಲ್ಲ. ಹಾಗೆಯೇ ಯಾವುದೇ ಅಪರಿಚಿತರು ಬಂದಲ್ಲಿ ಅವರ ಮೇಲೆ ನಿಗಾ ವಹಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here