ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 25ರಂದು ನಡೆಯುವ ನಾಗರಪಂಚಮಿ ಹಬ್ಬ ಮತ್ತು ಮುಂದೆ ಬರಲಿರುವ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ವರಮಹಾಲಕ್ಷ್ಮಿ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಣೆ ಮಾಡುವಂತಿಲ್ಲ ಎಂದು ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೊರೋನಾ ಸೋಂಕು ಇನ್ನೂ ಕೂಡ ಸಂಪೂರ್ಣ ಹತೋಟೆಗೆ ಬಂದಿಲ್ಲ. ಹೀಗಾಗಿ ಸಾರ್ವಜನಿಕರು ಪಾಲ್ಗೊಂಡು ಧಾರ್ಮಿಕ ಆಚರಣೆ ಮತ್ತು ಕಾರ್ಯಕ್ರಮಗಳನ್ನು ಆಚರಿಸಲು ಅವಕಾಶ ನೀಡಿದಲ್ಲಿ ಸಾರ್ವಜನಿಕರು ಒಂದೆಡೆ ಸೇರಿ ಸೋಂಕು ಹರಡುವಿಕೆ ಹೆಚ್ಚುವ ಸಂಭವವಿದೆ. ಆದ್ಧರಿಂದ ಮುಂಬರುವ ನಾಗರ ಪಂಚಮಿ ದಿನದಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ನಾಗಾರಾಧನೆ ನಡೆಯುವ ದೇವಸ್ಥಾನಗಳಲ್ಲಿ ಕೇವಲ ಅರ್ಚಕರು ಮತ್ತು ದೇವಾಲಯದ ಸಿಬ್ಬಂದಿಗಳು ಮಾತ್ರ ಸಾಂಪ್ರದಾಯಿಕ ಪೂಜೆಗಳನ್ನು ಸಾಂಕೇತಿಕವಾಗಿ ಮಾಡಿ ಅಂದು ಸಾರ್ವಜನಿಕರಿಗೆ ಹಾಗೂ ಭಕ್ತಾಧಿಗಳಿಗೆ ದೇವಳದ ಆವರಣಕ್ಕೆ ನಿಷೇಧವನ್ನು ಹೇರಲು ಹಾಗೂ ನಾಗಬನಗಳಲ್ಲಿಯೂ ಸಹ ಅರ್ಚಕರು ಮಾತ್ರ ಸಾಂಪ್ರದಾಯಿಕ ಪೂಜೆಗಳನ್ನು ಸಾಂಕೇತಿಕವಾಗಿ ಮಾಡಲು ಹಾಗೂ ಸಾರ್ವಜನಿಕರು ಸೇರದಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಇನ್ನುಳಿದ ಹಬ್ಬಗಳನ್ನು ಧಾರ್ಮಿಕ ಸ್ಥಳಗಳಲ್ಲಿ ಸಾರ್ವಜನಿಕರು ಭಾಗವಹಿಸುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪಾ, ಧಾರ್ಮಿಕ ಧತ್ತಿ ಸಹಾಯಕ ಆಯುಕ್ತ ವೆಂಕಟೇಶ್, ಧಾರ್ಮಿಕ ಪರಿಷತ್ ರಾಜ್ಯ ಸದಸ್ಯರಾದ ಸೂರ್ಯ ನಾರಾಯಣ ಭಟ್, ಕಶೆಕೋಡಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here