


ಮಂಗಳೂರು: ದ.ಕ. ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಕೊರೊನಾಗೆ ಉಚಿತ ಚಿಕಿತ್ಸೆ ಪಡೆಯಲು ಜನರಿಗೆ ಸುಲಭವಾಗುವ ಸಲುವಾಗಿ ಜಿಲ್ಲೆಯ 9 ಆಸ್ಪತ್ರೆಗಳಲ್ಲಿ ಆರೋಗ್ಯ ಮಿತ್ರ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ಎಪಿಎಲ್ ಅಥವಾ ಬಿಪಿಎಲ್ ಆಗಲಿ ಯಾವುದೇ ಪಡಿತರ ಚೀಟಿ ಹೊಂದಿದ್ದರೂ ಕೂಡಾ ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಎಲ್ಲರೂ ಕೊರೊನಾಗೆ ಉಚಿತ ಚಿಕಿತ್ಸೆ ಪಡೆಯಬಹುದು ಎಂದು ತಿಳಿಸಿದ್ದರು.
ಆದರೆ ಆ ಬಳಿಕ ಕೂಡಾ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಹಲವು ದೂರುಗಳು ಕೇಳಿ ಬಂದ ಕಾರಣದಿಂದಾಗಿ ಜಿಲ್ಲೆಯ 8 ಮೆಡಿಕಲ್ ಕಾಲೇಜು ಮತ್ತು ಒಂದು ಆಸ್ಪತ್ರೆ ಸೇರಿದಂತೆ 9 ಆಸ್ಪತ್ರೆಗಳಲ್ಲಿ ಪ್ರತಿ ಆಸ್ಪತ್ರೆಯಲ್ಲಿ ಇಬ್ಬರು ಆರೋಗ್ಯ ಮಿತ್ರರನ್ನು ನೇಮಕ ಮಾಡಲಾಗಿದೆ. ಆಸ್ಪತ್ರೆಗಳಲ್ಲಿ ನೇಮಿಸಲಾಗಿರುವ ಈ ಆರೋಗ್ಯ ಮಿತ್ರರು ಸರಕಾರದ ಪ್ರತಿನಿಧಿಗಳಾಗಿ ಉಚಿತ ಚಿಕಿತ್ಸೆ ಪಡೆಯಲು ಜನರಿಗೆ ನೆರವಾಗಲಿದ್ದಾರೆ.
ಇನ್ನು ಕೊರೊನಾ ಸೋಂಕು ಲಕ್ಷಣಗಳು ಇರುವ ರೋಗಿಗಳು ವೆನ್ಲಾಕ್ ಆಸ್ಪತ್ರೆಯಿಂದ ಶಿಫಾರಸು ಪತ್ರ ಪಡೆದು ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕು. ಒಂದು ವೇಳೆ ತುರ್ತು ಸಂದರ್ಭವಾಗಿದ್ದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ರೋಗಿಯ ಕಾಯಿಲೆಗೆ ಸಂಬಂಧಿಸಿ ಆಸ್ಪತ್ರೆಯವರು ವೆನ್ಲಾಕ್ಗೆ ರಿಕ್ವೆಸ್ಟ್ ಲೆಟರ್ ಕಳುಹಿಸಲಿದ್ದು, ಅದಕ್ಕೆ ಅಧಿಕಾರಿಗಳು ಅನುಮತಿ ನೀಡುತ್ತಾರೆ. ಈ ಪ್ರಕ್ರಿಯೆಗೆ ಜನರು ಆರೋಗ್ಯ ಮಿತ್ರರ ಸಹಾಯವನ್ನು ಪಡೆಯಬಹುದಾಗಿದ್ದು ಅವರನ್ನು ಸಂಪರ್ಕಿಸಲು ಮೊಬೈಲ್ ಸಂಖ್ಯೆಯನ್ನು ನೀಡಲಾಗಿದೆ.
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ 9737007132, ಶ್ರೀನಿವಾಸ್ ವೈದ್ಯಕೀಯ ವಿಜ್ಞಾನ ಸಂಸ್ಥೆ, 9901244712, ಇಂಡಿಯಾನಾ ಆಸ್ಪತ್ರೆ ಮತ್ತು ಹೃದಯ ಸಂಸ್ಥೆ 9845403347, ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ 9900095182, ಯೇನಪೋಯಾ ಮೆಡಿಕಲ್ ಕಾಲೇಜು ಆಸ್ಪತ್ರೆ 99017309949, ಎ.ಜೆ. ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ 9449937129, ಕೆವಿಜಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ 9480013503, ಜ| ಕೆ.ಎಸ್. ಹೆಗ್ಡೆ ಚಾರಿಟೆಬಲ್ ಆಸ್ಪತ್ರೆ 9740083240, ಕೆಎಂಸಿ ಆಸ್ಪತ್ರೆ ಅತ್ತಾವರ 9972388991 ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.





