


ಬೆಳ್ತಂಗಡಿ: ತಾಲೂಕಿನ ಕುವೆಟ್ಟು ಗ್ರಾಮದ ಮದ್ದಡ್ಕಕ್ಕೆ ಒಂದು ರಾಷ್ಟ್ರೀಕೃತ ಬ್ಯಾಂಕ್,ಎ.ಟಿ.ಎಂ. ಹಾಗೂ ಸರಕಾರಿ ಆಸ್ಪತ್ರೆಯ ಬೇಡಿಕೆ ಇದೆ. ಕುವೆಟ್ಟು ಮೊದಲು ತಾ.ಪಂ. ಕ್ಷೇತ್ರವಾಗಿದ್ದು, ಈಗ ಜಿ.ಪಂ. ಕ್ಷೇತ್ರವಾಗಿದೆ. ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಕುವೆಟ್ಟು ಜಿ.ಪಂ. ಕ್ಷೇತ್ರದ ಸದಸ್ಯೆ ಮಮತಾ ಶೆಟ್ಟಿ.
ಕುವೆಟ್ಟು ಶಾಲೆಯಲ್ಲಿ ಕಲಿತ ಮದ್ದಡ್ಕದ ಪ್ರತಿಷ್ಠಿತ ಕೇದೆ ಮನೆತನದ 3 ಮಂದಿ ವಿವಿಧ ರಾಜಕೀಯ ಪಕ್ಷಗಳಿಂದ ಗೆದ್ದು ಸುಮಾರು 40 ವರ್ಷಗಳ ಕಾಲ ಬೆಳ್ತಂಗಡಿಯ ಶಾಸಕರಾದ ಹಿರಿಮೆ, ಗೌರವ, ಹೆಮ್ಮೆ, ಮದ್ದಡ್ಕಕ್ಕಿದೆ. ಮದ್ದಡ್ಕದ ಅಭಿವೃದಿಯಲ್ಲಿ ಈ ಮೂರು ಮಂದಿ ಶಾಸಕರ ಗಣನೀಯ ನಿಸ್ವಾರ್ಥ ಸೇವೆಯನ್ನು ಸ್ಮರಿಸಲೇಬೇಕಾಗಿದೆ. ಪ್ರಸ್ತುತ ಹರೀಶ್ ಪೂಂಜಾ ಅವರ ಶಾಸಕತ್ವ ಹಾಗೂ ಕುವೆಟ್ಟು ಪಂಚಾಯತ್ ಆಡಳಿತದ ಉತ್ತಮ ಆಡಳಿತವನ್ನು ಕೂಡಾ ಮದ್ದಡ್ಕದ ನಾಗರಿಕರು ಅಭಿನಂದಿಸಲೇಬೇಕು.
ಮದ್ದಡ್ಕ ಇಷ್ಟೆಲ್ಲಾ ಅಭಿವೃದಿಯಾಗಿದ್ದರೂ ಕೂಡ ಕೆಲವೊಂದು ಬೆರಳೆಣಿಕೆಯ ಮೂಲಭೂತ ಸಮಸ್ಯೆಗಳು ಕುವೆಟ್ಟು ಗ್ರಾಮದ ಮದ್ದಡ್ಕ ನಾಗರಿಕರಲ್ಲಿ ಕಾಡುತ್ತಿದೆ.
ಅದೇನೆಂದರೆ..ಮದ್ದಡ್ಕ ಕೇಂದ್ರೀಕರಿಸಿ ಒಂದೇ ಒಂದು ಖಾಸಗಿ ಬ್ಯಾಂಕ್ ಗಳು ಹಾಗೂ ಎ.ಟಿ.ಎಂ., ಸರಕಾರಿ ಆಸ್ಪತ್ರೆ ಇಲ್ಲದಿರುವುದು ಮದ್ದಡ್ಕದ ಜನರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
ಮದ್ದಡ್ಕ ಕೇಂದ್ರೀಕರಿಸಿ ಒಂದೇ ಒಂದು ಖಾಸಗಿ ಬ್ಯಾಂಕ್ ಗಳು ಇಲ್ಲದಿರುವುದು:
ಈ ಗ್ರಾಮಕ್ಕೊಳಪಟ್ಟ ಹಲವು ಮಂದಿ ಉದ್ಯೋಗವನ್ನರಸಿ ವಿದೇಶಗಳಲ್ಲಿ, ದೇಶದ ವಿವಿಧ ರಾಜ್ಯಗಳಲ್ಲಿ ಉದ್ಯೋಗದಲ್ಲಿದ್ದಾರೆ. ಅವರು ತಮ್ಮ ಮನೆಯವರಿಗೆ ತಾವು ದುಡಿದ ಹಣವನ್ನು ಕಳುಹಿಸಲು ದೂರದ ಬೆಳ್ತಂಗಡಿ, ಗುರುವಾಯನಕೆರೆಯ ಖಾಸಗಿ ಬ್ಯಾಂಕ್ ಗಳನ್ನು ಆಶ್ರಯಿಸಿದ್ದಾರೆ. ಬೆಳ್ತಂಗಡಿಯ ಖಾಸಗಿ ಬ್ಯಾಂಕ್ ಗಳಲ್ಲಿ ಮೊದಲೇ ಉದ್ದದ ಸರತಿಯ ಸಾಲು ಇರುತ್ತದೆ. ತಮ್ಮ ಮಕ್ಕಳು ಕಳುಹಿಸಿದ ದುಡಿಮೆಯ ಹಣವನ್ನು ಪಡೆಯಲು ಹಿರಿಯ ಜೀವಗಳು ತುಂಬಾ ಕಷ್ಟಪಡುತ್ತಾರೆ. ಅದೇ ರೀತಿ ಮದ್ದಡ್ಕ ಆಸುಪಾಸಿನ ಬಡವರು ಕೂಲಿ ಕಾರ್ಮಿಕರು ಬೀಡಿ ಕಾರ್ಮಿಕ ಮಹಿಳೆಯರು ಸ್ವಸಹಾಯ ಸಂಘದ ಸಾಲ ಮರುಪಾವತಿಸಲು ವಾರಕ್ಕೊಂದು ದಿನ ರಜೆ ಮಾಡಿ ಬೆಳ್ತಂಗಡಿಗೆ ಹೋಗಬೇಕಾದ ಅನಿವಾರ್ಯತೆ ಇದೆ.
ಮದ್ದಡ್ಕದಲ್ಲಿ ಸಹಕಾರ ಬ್ಯಾಂಕ್ ಮಾತ್ರ ಇದ್ದು ಯಾವುದೇ ಖಾಸಗಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳು ಇಲ್ಲದಿರುವುದೇ ಇದಕ್ಕೆಲ್ಲಾ ಕಾರಣ.
ಎ.ಟಿ.ಎಂ. ಸಮಸ್ಯೆ: ಈ ಅತ್ಯಾಧುನಿಕ ಯುಗದಲ್ಲಿ… ಅದೂ ಕೂಡಾ ಇಷ್ಟೊಂದು ಜನಸಂಖ್ಯೆ ಇರುವ ಹಾಗೂ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಮದ್ದಡ್ಕದಲ್ಲಿ ಒಂದು ATM ಮೆಷಿನ್ ಇಲ್ಲವೆಂಬುದು ಅಲ್ಲಿನ ಜನರ ಅಳಲು.
ಅಲ್ಲಿನ ಇನ್ನೊಂದು ಸಮಸ್ಯೆ ಎಂದರೆ ಸರಕಾರಿ ಆಸ್ಪತ್ರೆ ಇಲ್ಲದಿರುವುದು.
ರೋಗ ರುಜಿನಗಳಿಂದ ಕಷ್ಟ ಪಡುವ ರೋಗಿಗಳು ಪ್ರಾಯಸ್ತರು, ಗರ್ಭಿಣಿಯರು ದೂರದ ಬೆಳ್ತಂಗಡಿ, ಪುಂಜಾಲಕಟ್ಟೆ ಅಥವಾ ಸುತ್ತಿ ಬಳಸಿ ಕನ್ನಡಿಕಟ್ಟೆ ಸರಕಾರಿ ಆಸ್ಪತ್ರೆಗೆ ಹೋಗುವ ಅನಿವಾರ್ಯತೆ ಇದೆ. ಮದ್ದಡ್ಕದಲ್ಲೇ ಒಂದು ಸರಕಾರಿ ಆಸ್ಪತ್ರೆ ಮದ್ದಡ್ಕ ನಾಗರಿಕರ ಸದ್ಯದ ಅವಶ್ಯಕತೆಯಾಗಿದೆ.
ಆದ್ದರಿಂದ ಶಾಸಕರು, ಜಿ.ಪಂ., ತಾ.ಪಂ., ಕುವೆಟ್ಟು ಪಂಚಾಯತ್ ಆಡಳಿತ ಹಾಗೂ ಮದ್ದಡ್ಕ ನಾಡಿನ ಹೆಮ್ಮೆ ಹಾಗೂ ಅಭಿಮಾನವಾದ ಮಾಜಿ ಶಾಸಕ ಬಂಗೇರ ಸಹೋದರರೆಲ್ಲ ಒಂದಾಗಿ ಪಕ್ಷ ಭೇದ, ಜಾತಿ ಭೇದ ಮರೆತು ಮದ್ದಡ್ಕದ ಸಮಸ್ಯೆಗಳನ್ನು ಪರಿಹರಿಸಿಕೊಡಬೇಕಾಗಿ ಕುವೆಟ್ಟು ಗ್ರಾಮಸ್ಥರ, ಮದ್ದಡ್ಕ ನಾಗರಿಕರ ಪರವಾಗಿ ರಿಯಾಜ್, ಪೊಮ್ಮಾಜೆ, ಮುಂಡ್ಕೂರು ಅವರು ಕೇಳಿಕೊಂಡಿದ್ದಾರೆ.






