ಬಂಟ್ವಾಳ ಕಾಂಕ್ರೀಟ್ ಕಾಮಗಾರಿಯ ಹಿನ್ನೆಲೆಯಲ್ಲಿ ಕಳೆದ 22 ದಿನಗಳಿಂದ ಸಂಚಾರ ನಿಷೇಧಿಸಲ್ಪಟ್ಟಿದ್ದ ಬಿ.ಸಿ.ರೋಡು-ಜಕ್ರಿಬೆಟ್ಟು ಹೆದ್ದಾರಿಯು ಜು.19ರಿಂದ ಸಂಚಾರಕ್ಕೆ ಮುಕ್ತಗೊಂಡಿದೆ. ಚುತುಷ್ಪಥ ಹೆದ್ದಾರಿಯ ಒಂದು ಬದಿಯ 7 ಮೀ.ಕಾಂಕ್ರೀಟ್ ಕಾಮಗಾರಿ ಬಹುತೇಕ ಭಾಗಗಳಲ್ಲಿ ಪೂರ್ಣಗೊಂಡಿದ್ದು, ಹೀಗಾಗಿ ಪೂರ್ಣಗೊಂಡ ಭಾಗದಲ್ಲಿ ಹೆದ್ದಾರಿಯು ಸಂಚಾರಕ್ಕೆ ಲಭ್ಯವಾಗಲಿದೆ.

ಕಳೆದ ಕೆಲವು ದಿನಗಳ ಹಿಂದೆಯೇ ಹೆದ್ದಾರಿಯ ಒಂದು ಬದಿಯ ಕಾಂಕ್ರೀಟ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ, ಕ್ಯೂರಿಂಗ್ ಅವಧಿ ಬೇಕಿದ್ದ ಹಿನ್ನೆಲೆಯಲ್ಲಿ ರಾಷ್ಟೀಯ ಹೆದ್ದಾರಿ ಇಲಾಖೆಯು ಸಂಚಾರ ನಿಷೇಧಕ್ಕೆ ಆದೇಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿತ್ತು. ಹೀಗಾಗಿ ಜೂ. 26ರಿಂದ ಜು. 18ರ ವರೆಗೆ ಸಂಚಾರ ನಿಷೇಧಿಸಿ ಡಿ.ಸಿ. ಅವರು ಆದೇಶ ನೀಡಿದ್ದರು.

ಪ್ರಸ್ತುತ ಬಂಟ್ವಾಳ- ಬೈಪಾಸ್ ಸೇರಿದಂತೆ ಕೆಲವೊಂದು ಪ್ರದೇಶ ಹೊರತುಪಡಿಸಿ ಉಳಿದಂತೆ ಜಕ್ರಿಬೆಟ್ಟುನಿಂದ ಬಿ.ಸಿ.ರೋಡು- ಗಾಣದಪಡ್ಪುವರೆಗೆ ಒಂದು ಬದಿಯ ಕಾಮಗಾರಿ ಪೂರ್ಣಗೊಂಡಿದೆ. ಪ್ರಸ್ತುತ ಹೆದ್ದಾರಿಯ ಇನ್ನೊಂದು ಬದಿಯ ಕಾಂಕ್ರೀಟ್ ಕಾಮಗಾರಿ ಪ್ರಾರಂಭಗೊಂಡಿದ್ದರೂ, ಮಳೆಗಾಲದಲ್ಲಿ ಕಾಮಗಾರಿ ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಮಳೆಗಾಲ ಮುಗಿದ ಬಳಿಕ ಕಾಂಕ್ರೀಟ್ ಕಾಮಗಾರಿ ಪ್ರಾರಂಭಗೊಳ್ಳಲಿದೆ.

ಆದರೆ ಮಳೆಗಾಲದಲ್ಲಿ ಹೆದ್ದಾರಿ ಬದಿಯ ಚರಂಡಿಯ ಕಾಮಗಾರಿ ನಿರಂತರವಾಗಿ ನಡೆಯಲಿದೆ. ಪ್ರಸ್ತುತ ಒಂದು ವಾರಗಳ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ನಿಲ್ಲಿಸಲಾಗಿದ್ದು, ಲಾಕ್‌ಡೌನ್ ಮುಗಿದ ಬಳಿಕ ಚರಂಡಿಯ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಹೆದ್ದಾರಿ ಗುತ್ತಿಗೆ ಸಂಸ್ಥೆಯ ವ್ಯವಸ್ಥಾಪಕರು ತಿಳಿಸಿದ್ದಾರೆ.
ಕಳೆದ 20 ದಿನಗಳ ಸಂಚಾರ ನಿಷೇಧದ ಸಮಯದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸುಗಳು ಇದೇ ಹೆದ್ದಾರಿಯ ಮೂಲಕ ಸಾಗಿದ್ದವು. ಲಘು ವಾಹನಗಳಿಗೆ ಬಂಟ್ವಾಳ ಪೇಟೆಯ ಮೂಲಕ ಸಂಚಾರ ಅವಕಾಶ ನೀಡಲಾಗಿತ್ತು. ಉಳಿದಂತೆ ಮಂಗಳೂರು-ಗುರುವಾಯನಕೆರೆ ಮಧ್ಯೆ ಸಂಚರಿಸುವ ಘನ ವಾಹನಗಳಿಗೆ ಬಿ.ಸಿ.ರೋಡು-ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆಯ ಮೂಲಕ ಸಂಚರಿಸಲು ಸೂಚಿಸಲಾಗಿತ್ತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here