



ಬಂಟ್ವಾಳ: ಪುರಾಣ ಪ್ರಸಿದ್ಧ ಕಲ್ಲಡ್ಕ ಸಮೀಪದ ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆಯ ಪೂಜಾ ಕಾರ್ಯಕ್ರಮವು ಇಂದು ಕೇವಲ ಬೆರಳೆಣಿಕೆಯ ಭಕ್ತಾಧಿಗಳ ಸಮ್ಮುಖದಲ್ಲಿ ತೀರ್ಥಸ್ನಾನವಿಲ್ಲದೆ ಸರಳ ರೀತಿಯಲ್ಲಿ ನಡೆಯಿತು.
ಕೋವಿಡ್-19 ನಿಯಂತ್ರಣದ ದೃಷ್ಟಿಯಿಂದ ಆಟಿ ಅಮಾವ್ಯಾಸೆಯ ದಿನ ಭಕ್ತರಿಲ್ಲದೆ ಕ್ಷೇತ್ರಕ್ಕೆ ಸಂಬಂಧಪಟ್ಟ ಕೆಲವು ಮಂದಿ ಪಾಲ್ಗೊಂಡು ಆಟಿ ಅಮಾವಾಸ್ಯೆ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಯಿತು. ಕ್ಷೇತ್ರದ ಪ್ರಧಾನ ಅರ್ಚಕ ಪರಮೇಶ್ವರ ಮಯ್ಯ ಅವರು ಪೂಜೆ ನೆರವೇರಿಸಿದರು.
ಆಟಿ ಅಮಾವಾಸ್ಯೆಯ ದಿನ ಕ್ಷೇತ್ರದಲ್ಲಿ ತೀರ್ಥಸ್ನಾನ ವಿಶೇಷವಾಗಿದ್ದು, ಪ್ರತಿ ವರ್ಷ ಕ್ಷೇತ್ರದ ತೀರ್ಥ ಘಟ್ಟಗಳಲ್ಲಿ ತೀರ್ಥ ಸ್ನಾನ, ಅಡಿಕೆ-ವೀಳ್ಯದೆಲೆಯ ತರ್ಪಣ ಅರ್ಪಿಸುವುದು, ಹಗ್ಗದ ಹರಕೆ ವಿಶೇಷವಾಗಿರುತ್ತದೆ. ಆದರೆ ಈ ಬಾರಿ ಇದು ಯಾವುದೂ ಇಲ್ಲದೆ ಸರಳ ಪೂಜೆ ನಡೆಯಿತು.
ಆಡಳಿತ ಮೊಕ್ತೇಸರ ಡಾ| ಪ್ರಶಾಂತ್ ಮಾರ್ಲ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ| ಆತ್ಮರಂಜನ್ ರೈ, ಆಡಳಿತ ಸಮಿತಿಯ ಎಂ.ಎನ್.ಕುಮಾರ್, ಪ್ರತಿಭಾ ಎ.ರೈ, ಸುಂದರ ಬಂಗೇರ, ಜೀರ್ಣೋದ್ಧಾರ ಸಮಿತಿಯ ಸಂಘಟನಾ ಕಾರ್ಯದರ್ಶಿ ಶಂಕರ ಆಚಾರ್ಯ, ಮೆಲ್ಕಾರ್ ಯುವಸಂಗಮದ ಅಧ್ಯಕ್ಷ ಓಂಪ್ರಕಾಶ್, ಕ್ಷೇತ್ರದ ಮ್ಯಾನೇಜರ್ ಆನಂದ್, ಸತೀಶ್ ಪಿ.ಸಾಲ್ಯಾನ್ ಮೊದಲಾದವರು ಪಾಲ್ಗೊಂಡಿದ್ದರು.






