ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರದಿಂದ ಲಾಕ್ ಡೌನ್ ಮಾಡಲು ಆದೇಶಿಸಿದೆ. ಜಿಲ್ಲೆಯಲ್ಲಿ ಒಂದು ವಾರಗಳ ಕಾಲ ಲಾಕ್ ಡೌನ್ ಮಾಡಲು ಸಚಿವರೆಲ್ಲರೂ ಸೇರಿ ತೀಮಾರ್ನಿಸಿದ್ದಾರೆ. ಮುಂದಿನ ಗುರುವಾರದಿಂದ ಎಂದರೆ ಜು.16 ರಿಂದ ಒಂದು ವಾರಗಳ ಕಾಲ ಮುಂದಿನ ಬುಧವಾರ ತನಕ ಸಂಪೂರ್ಣ ಲಾಕ್ ಡೌನ್ ಆಗಲಿದೆ. ಇಂದಿನಿಂದ ಗುರುವಾರದ ವರೆಗೆ 3 ದಿನಗಳ ವರೆಗೆ ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿರುತ್ತದೆ ಎಂದು ದ.ಕ‌. ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಇಂದು 11 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರೊಂದಿಗೆ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅವರ ಸಹಿತ ಹಲವು ಅಧಿಕಾರಿಗಳು ಮತ್ತೊಂದು ಸುತ್ತಿನ ಚರ್ಚೆ ನಡೆಸಿ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವ ಕೋಟಾ ಸ್ಪಷ್ಟಪಡಿಸಿದ್ದಾರೆ.

“ನಮ್ಮ ಜಿಲ್ಲೆಯಲ್ಲಿ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಕೊರೊನಾ ನಿಯಂತ್ರಣಕ್ಕಾಗಿ ಒಂದಷ್ಟು ದಿನಗಳ ಕಾಲ ಮತ್ತೆ ಲಾಕ್ ಡೌನ್ ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದ್ದರಿಂದ ಜು.16 ರಿಂದ ಒಂದು ವಾರಗಳ ಕಾಲ ಕೊರೊನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಗೊಳಿಸಲಾಗುವುದು. ಈ ಹಿನ್ನಲೆಯಲ್ಲಿ ನಾನು ಜಿಲ್ಲೆಯ ಎಲ್ಲಾ ಜನರಲ್ಲಿ ವಿನಂತಿಸುತ್ತಿದ್ದು, ಇನ್ನು ಎರಡು ದಿನಗಳ ಕಾಲಾವಾಕಾಶ ಇರುವುದರಿಂದ  ವಾರಗಳಿಗೆ ಅಗತ್ಯವಿರುವ ದಿನಸಿ ಸಾಮಾಗ್ರಿ ಹಾಗೂ ಮೂಲಭೂತ ಅವಶ್ಯಕತೆಗಳನ್ನು ಖರೀದಿ ಮಾಡಿಟ್ಟುಕೊಳ್ಳಬೇಕು”  ಎಂದು ಸಚಿವ ಕೋಟಾ ಮನವಿ ಮಾಡಿದ್ದಾರೆ.

ಜಿಲ್ಲಾಡಳಿತ ನಿರ್ಧರಿತ ಲಾಕ್ ಡೌನ್ ನ ಕುರಿತ “ಮಾರ್ಗಸೂಚಿ ಮತ್ತು ನಿಯಮ”ಗಳನ್ನು ಜಿಲ್ಲಾಧಿಕಾರಿಗಳು ಪ್ರಕಟಿಸಲಿದ್ದು, ಜಿಲ್ಲೆಯ ಜನರು ಲಾಕ್ ಡೌನ್ ಹಾಗೂ ಕೊರೊನಾ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here