ಕೋವಿಡ್-19ರ ಆಘಾತಗಳಲ್ಲಿ ಸಾವುಗಳ ಸಂಖ್ಯೆ ಅಪಾರವೆನ್ನುವಂತಿಲ್ಲವಾದರೂ ಆ ಸಾವುಗಳಲ್ಲಿ ಬಹುತೇಕವೂ ಅನಿರೀಕ್ಷಿತ, ಅನಪೇಕ್ಷಿತ ಮತ್ತು ಅಸಹನೀಯವೆನ್ನುವುದು ಖಂಡಿತ. ಕೆಲವು ಸಾವುಗಳು ವೃದ್ಧರಾದ ತಂದೆ ತಾಯಿಗಳನ್ನು ಅನಾಥರನ್ನಾಗಿಸಿದ್ದರೆ ಇನ್ನು ಕೆಲವೆಡೆ ಸಂಪೂರ್ಣ ಕುಟುಂಬವೇ ಅನಾಥಗೊಂಡಿರುವುದೂ ಇದೆ. ಇನ್ನು ಕೆಲವು ನವದಂಪತಿಗಳ್ಲಿ ಒಬ್ಬರ ಸಾವಾಗಿ ಇನ್ನೊಬ್ಬರ ಜೀವಿತವು ಶೂನ್ಯಮುಖಿಯಾದುದೂ ಇದೆ. ಇಂತಹ ದುರ್ಘಟನೆಗಳು ನಮ್ಮ ಆಸುಪಾಸಿನಲ್ಲಿ ಬೆರಳೆಣಿಕೆಯಷ್ಟೇ ಆಗಿರುವುದಾದರೂ ರಾಷ್ಟ್ರವ್ಯಾಪಿಯಾಗಿ ಲೆಕ್ಕ ಹಾಕಿದಾಗ ಬಹಳಷ್ಟಿವೆ. ಕೆಲವು ಕುಟುಂಬಗಳ ಎಳೆ ಕಂದಮ್ಮಗಳು ಕೋವಿಡ್‌ಗೆ ಬಲಿಯಾಗಿ ಆಗಿರುವ ದುಃಖ ವಿವರಿಸಲಸದಳ.
ಕೋವಿಡ್ ರೋಗಾಣುವಿನ ಧಾಳಿಯ ಕಾರಣದಿಂದಾದ ಮರಣವಾದರೆ ಮೃತರನ್ನು ದಹಿಸುವ ಅಥವಾ ದಫನ ಮಾಡುವ ಹಕ್ಕು ಕುಟುಂಬದಿಂದ ಕೈ ತಪ್ಪಿರುವುದರಿಂದ ಅನೇಕರು ಭಾವನಾತ್ಮಕವಾಗಿಯೂ ಬಳಲಿದ್ದಾರೆ. ಸಾವು ಬಂದ ಕುಟುಂಬಗಳಲ್ಲಿ ಶೇಕಡಾ ತೊಂಭತೈದರಷ್ಟೂ ಮನೆಗಳು ಸೀಲ್‌ಡೌನ್‌ಗೊಳಗಾಗುವ ಸಾಧ್ಯತೆಗಳಿದ್ದು ಮೃತರ ಮರಣೋತ್ತರ ಕ್ರಿಯಾದಿಗಳನ್ನು ಜರಗಿಸಲೂ ಅವಕಾಶವೊದಗದೇ ಮಾನಸಿಕ ವೇದನೆಗೊಳಗಾದವರೂ ಇದ್ದಾರೆ.
ಮಂಗಳೂರಿನಲ್ಲಿ ಪ್ರತಿಷ್ಠಿತ ಮನೆಯ ವೃದ್ಧರೊಬ್ಬರು ಕೋವಿಡ್ ಕಾರಣದ ಲಾಕ್‌ಡೌನ್ ಅವಧಿಯಲ್ಲಿ ತನ್ನ ಸ್ವಂತ ಕಾರಿನಲ್ಲಿ ಹೋದಾಗ ಉಂಟಾದ ಸಂಘರ್ಷವು ಆ ಕುಟುಂಬದ ಮಾನಸಿಕ ವೇದನೆಗೆ ಕಾರಣವಾಯಿತು. ಆ ವಯೋ ವೃದ್ಧರಿಗೆ ಮರೆಗುಳಿ ಕಾಯಿಲೆಯಿದ್ದು, ಪೇಟೆಗೆ ಬಂದ ಅವರನ್ನು ಪೋಲೀಸರು ನಿಯಮ ಪಾಲನೆಯ ಉದ್ದೇಶದಿಂದ ತಡೆದರು. ಮಾತಿಗೆ ಮಾತು ಬೆಳೆದು ಸಂಘರ್ಷದ ವಾತವಾರಣ ಏರ್ಪಟ್ಟಿತು. ಅವರಿಗೆ ಮರೆವಿನ ಕಾಯಿಲೆಯಿದೆಯೆಂಬುದು ಪೋಲೀಸರಿಗೆ ತಿಳಿಯುವುದಾದರೂ ಹೇಗೆ?
ಮದುವೆಯಾದ ನವ ವಧು ಕೋವಿಡ್೧೯ರ ಎಡೆಯಲ್ಲಿ ಸಂಪ್ರದಾಯಕ್ಕೆ ಚ್ಯತಿಯಾಗಬಾರದೆಂದು ತವರಿಗೆ ಹೋಗಿ ಗಂಡನ ಮನೆಗೆ ಹಿಂತಿರುಗಲಾಗದೆ ಚಡಪಡಿಸಿದ ಅನೇಕ ಉದಾಹರಣೆಗಳಿವೆ. ಬೀಗಮುದ್ರೆಯ ಪೂರ್ವ ನಿರ್ಧರಿತ ಕಾರ್ಯಕ್ರಮಗಳಿಗಾಗಿ ಮುಂಗಡ ನೀಡಿದ ಹಾಲ್ ಬಾಡಿಗೆ, ಶಾಮಿಯಾನ ಬಾಡಿಗೆ, ಛಾಯಾಚಿತ್ರಗ್ರಾಹಕರಿಗೆ ನೀಡಿದ ಮುಂಗಡಗಳು ಕೈತಪ್ಪಿ ಹೋದ ಅದೆಷ್ಟೋ ಮನೆಗಳಿವೆ. ಮದುವೆಗೆಂದು ತಂದ ಬಟ್ಟೆಗಳು, ಕಾರ್ಯಕ್ರಮ ಮುಂದೂಡಿದ ಕಾರಣದಿಂದ, ಅಥವಾ ರದ್ದಾದ ಕಾರಣದಿಂದ ಪ್ಯಾಕಿಂಗ್ ಲಕೋಟೆಯಲ್ಲೇ ಉಳಿದು ಹೋಗಿವೆ. ಆಮಂತ್ರಣದ ಖರ್ಚು ವೆಚ್ಚಗಳು ಒಂದೆಡೆಯಾದರೆ, ಮುಂದೂಡಿತ ವಿಚಾರದ ಮಾಹಿತಿಯನ್ನು ಆಮಂತ್ರಿತರಿಗೆ ನೀಡಲು ತಲೆಕೆಡಿಸಬೇಕಾಗಿ ಬಂದ ದುರಂತ ಅನೇಕರಿಗೆ.
ದುರಸ್ತಿಗೆಂದು ಲಾಕ್‌ಡೌನ್ ನಿಕಟಪೂರ್ವದಲ್ಲಿ ನೀಡಿದ್ದ ಕಾರು, ಬೈಕು, ಟಿ.ವಿ, ಫ್ರಿಡ್ಜ್, ಕಂಪ್ಯೂಟರ್ ಮುಂತಾದುವು ದೀರ್ಘಕಾಲ ದುರಸ್ತಿಗೆ ಪಡೆದವರಲ್ಲೇ ಉಳಿದು ಅನೇಕರು ತೊಂದರೆಗೊಳಗಾಗಿದ್ದರೆ ಅದಕ್ಕೆ ಕೊರೋನಾ ಕಾರಣ. ತುರ್ತಾಗಿ ಪ್ಯಾಂಟ್ ಶರ್ಟ್ ಇರಲೆಂದೋ ಅಥವಾ ಯಾವುದೋ ಉದ್ದೇಶದಿಂದಲೋ ದರ್ಜಿಗೆ ನೀಡಿದ್ದ ಉಡುಪು ದರ್ಜಿಯ ಅಂಗಡಿಯಲ್ಲೇ ಉಳಿದು ಸಮಸ್ಯೆಯಾಗಿದ್ದರೆ ಅದಕ್ಕೂ ಕಾರಣ ಕೊರೊನಾ. ಕೊರೋನಾತಂಕದಿಂದ ಸೆಲೂನುಗಳು ಮುಚ್ಚಿ ಗಂಡಸರನೇಕರ ಮುಖದಲ್ಲಿ ಗಡ್ಡ ಬೆಳೆದು, ಮಾಸ್ಕ್ ಅವತರಿಸಿತು. ಯಾರಾದರೂ ಅಂತಹ ವ್ಯಕ್ತಿಗಳು ನಮ್ಮ ಮುಂದೆ ಪ್ರತ್ಯಕ್ಷರಾದಾಗ, ಯಾರೆಂದು ಗೊತ್ತಾಗಲಿಲ್ಲ! ಎಂದು ಆತ್ಮೀಯರಲ್ಲೇ ಹೇಳಿ ಅವರ ಮುಖ ಸಿಂಡರಿಸುವಂತಾದ ಆವಾಂತರಗಳೂ ಆಗಿವೆ. ಹೀಗೆ ಕೊರೊನಾದ ಆವಾಂತರಗಳ ಒಳ ಹೊಕ್ಕರೆ ನಗಬೇಕೋ? ಅಳಬೇಕೋ? ಎಂಬ ಸಂದಿಗ್ಧತೆ ನಮಗೆದುರಾಗುತ್ತದೆ. (..ಮುಂದುವರಿಯುವುದು)

ಲೇ: ರಮೇಶ ಎಂ. ಬಾಯಾರು ಎಂ.ಎ, ಬಿಎಡ್,
ನಿವೃತ್ತ ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕರು
’ನಂದನ’ ಕೇಪು

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here