


ಬಂಟ್ವಾಳ : ಮಳೆಯ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ತುಂಬಿ ಸುಗಮ ಸಂಚಾರ ಕಷ್ಟಕರವಾಗಿ ಇಡೀ ಗ್ರಾಮದ ಜನತೆ ತೊಂದರೆ ಅನುಭವಿಸುತ್ತಿರುವ ಘಟನೆ ಸರಪಾಡಿಯಲ್ಲಿ ಉದ್ಭವಿಸಿದೆ.
ಬಂಟ್ವಾಳ ತಾಲೂಕು ಸರಪಾಡಿ ಗ್ರಾಮದ ಪೂಪಾಡಿಕಟ್ಟೆ, ಪೆರ್ಲ ರಸ್ತೆಯಲ್ಲಿ ಎಸ್ಇಝಡ್ ಸಂಸ್ಥೆಯ ಕಚೇರಿ ಬಳಿ ಮಳೆ ನೀರು ಹರಿದು ಹೋಗದೆ ಶೇಖರಣೆಗೊಂಡಿದ್ದು, ಜನರಿಗೆ ಸಂಚಾರಕ್ಕೆ ಅಡಚಣೆಯಾಗುತ್ತಿದೆ.
ಈ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಬುಧವಾರ ಗ್ರಾ.ಪಂ. ಪಿಡಿಒ ಸ್ಥಳಕ್ಕಾಗಮಿಸಿ ಚರಂಡಿ ವ್ಯವಸ್ಥೆ ಕಲ್ಪಿಸಲು ಸೂಚಿಸಿದ್ದಾರೆ.
ಮಳೆಗಾಲದಲ್ಲಿ ಕಳೆದ ಕೆಲವು ವರ್ಷಗಳಿಂದ ಇಲ್ಲಿನ ಗ್ರಾಮದ ಜನರಿಗೆ ಸಮಸ್ಯೆ ಕಾಡುತ್ತಿದ್ದು, ಪರಿಹಾರಕ್ಕೆ ಸಂಬಂಧಿಸಿದವರಿಗೆ ಮನವಿ ಮಾಡಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದಿದ್ದಾರೆ.
ಪೆರ್ಲ, ಬೀಯಪಾದೆ, ಸರಪಾಡಿ ಭಾಗದ ಜನರು ಈ ರಸ್ತೆಯನ್ನೇ ಅವಲಂಬಿಸಿರುವುದರಿಂದ ದ್ವಿ ಚಕ್ರ ವಾಹನ ಸವಾರರಿಗೂ ಸಮಸ್ಯೆಯಾಗಿದೆ. ಕಳೆದ ಹಲವಾರು ವರ್ಷಗಳಿಂದ ಈ ಸಮಸ್ಯೆ ಇದ್ದು ಕಳೆದ ವರ್ಷ ಎಸ್ಇಝಡ್ ಸಂಸ್ಥೆಯ ಅನುದಾನದಲ್ಲಿ ಗ್ರಾ.ಪಂ. ಮೂಲಕ ರಸ್ತೆಗೆ ಜಲ್ಲಿ ಹಾಕಿ ಎತ್ತರಿಸಲಾಗಿತ್ತು. ಪ್ರಸ್ತುತ ಇಲ್ಲಿ ರಸ್ತೆ ಬದಿ ಖಾಸಗಿ ಸ್ಥಳದಲ್ಲಿ ತಡೆಗೋಡೆಗೆ ಮಣ್ಣು ಹಾಕಿರುವುದರಿಂದ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗುತ್ತಿಲ್ಲ.
ಸ್ಥಳೀಯ ಜನರು ಈ ಬಗ್ಗೆ ಗ್ರಾ.ಪಂ. ಪಿಡಿಒ ಅವರಿಗೆ ಮನವಿ ಸಲ್ಲಿಸಿದ್ದು, ಪಿಡಿಒ ಸಿಲ್ವಿಯಾ ಫೆರ್ನಾಂಡಿಸ್ ಅವರು ಸ್ಥಳಕ್ಕಾಗಮಿಸಿ ಪರಿಶೀಲಿಸಿ, ಬಂಟ್ವಾಳ ಪಂಚಾಯತ್ ರಾಜ್ ಅಭಿಯಂತರ ಕೃಷ್ಣ ಎಂ. ಅವರು ಚರಂಡಿ ವ್ಯವಸ್ಥೆಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಇಲ್ಲಿ ಚರಂಡಿ ನಿರ್ಮಿಸಲು 98 ಸಾವಿರ ರೂ. ಅನುದಾನ ಮೀಸಲಿರಿಸಿರುವುದಾಗಿ ಗ್ರಾ.ಪಂ. ತಿಳಿಸಿದೆ.







