


ಬಂಟ್ವಾಳ : ಹಳ್ಳಿಯಲ್ಲಿದ್ದವರೆಲ್ಲಾ ನಗರಕ್ಕೆ ಹೋಗಿ ಉದ್ಯೋಗ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದವರು. ಇನ್ನೂ ಕೆಲವರು ಸ್ವಂತ ಉದ್ಯೋಗ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಯುವಕರು. ಆದ್ರೆ ಈ ವರ್ಷ ಇಡೀ ಜಗತ್ತನ್ನೇ ಕಾಡಿದ ಮಹಾಮಾರಿ ಕೊರೋನಾದಿಂದ ಹಲವರ ಉದ್ಯೋಗಕ್ಕೆ ಕುತ್ತು ಬಂದಿದ್ದು, ಇನ್ನೊಂದಷ್ಟು ಜನರ ಉದ್ಯಮವೇ ನಷ್ಟಕ್ಕೆ ಸಿಲುಕಿದೆ. ಈ ಕೊರೋನಾ ಕಾರಣದಿಂದಾಗಿ ಅವರೆಲ್ಲಾ ಮತ್ತೆ ಕೃಷಿ ಬದುಕಿನತ್ತ ಮುಖ ಮಾಡಿದ್ದಾರೆ. ಈ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ.
ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ದೇವಸ್ಯ ಪಡೂರು ಗ್ರಾಮದ ನೂರ್ತಾಡಿ ಗುತ್ತಿನ ಮನೆಯಲ್ಲಿ ಹಲವಾರು ವರ್ಷಗಳಿಂದ ಇಲ್ಲಿನ ಹತ್ತಾರು ಕುಟುಂಬಗಳಿಗೆ ಕೃಷಿಯೇ ಜೀವನದ ಆಧಾರ. ಆದರೆ ಮನೆಯ ಮಕ್ಕಳು ಆಧುನಿಕತೆಗೆ ಮನಸೋತು ಕೃಷಿ ಬದುಕಿನತ್ತ ಒಲವು ತೋರಿಸದೇ ನಗರದಲ್ಲೆ ಜೀವನ ಸಾಗಿಸುತ್ತಿದ್ದರು. ರೈತರ ಮನೆಯಲ್ಲೇ ಹುಟ್ಟಿದರೂ ಉದ್ಯೋಗ, ಉದ್ಯಮ ಅಂತ ಹೋಗಿದ್ದರು. ಹೀಗಾಗಿ ಎಕರೆಗಟ್ಟಲೇ ಕೃಷಿ ಭೂಮಿಯಲ್ಲಿ ಆ ಊರಿನ ಹಿರಿಯರೇ ಇಂದಿಗೂ ಕೃಷಿ ಮಾಡಿಕೊಂಡು ಬರ್ತಿದ್ದಾರೆ.
ಆದರೆ ಈ ಸಲ ಕೃಷಿ ಗದ್ದೆಗಳಲ್ಲಿ ಮನೆಯ ಹಿರಿಯರ ಜೊತೆ ಯುವಕರ ದಂಡು ಕೂಡ ಇತ್ತು. ಗದ್ದೆಯನ್ನು ಹೂಳುತ್ತಾ, ಕೆಸರಿನಲ್ಲಿ ಕೃಷಿ ಕಾರ್ಯ ಮಾಡುತ್ತಾ ಹತ್ತಾರು ಯುವಕರ ತಂಡ ಅಕ್ಷರಶಃ ರೈತರಾಗಿ ಬದಲಾಗಿದ್ದರು. ಇದಕ್ಕೆಲ್ಲಾ ಕಾರಣವಾಗಿದ್ದು ಕೊರೋನಾ ವೈರಸ್ ಎಂಬ ಮಾರಕ ಸೋಂಕು. ಯುವಕರು ಕೃಷಿಯಿಂದ ವಿಮುಖರಾಗ್ತಿರೋ ಈ ಕಾಲದಲ್ಲಿ ನೂರ್ತಾಡಿಯ ಯುವಕರು ಮತ್ತೆ ಗದ್ದೆಗೆ ಇಳಿದ್ದಾರೆ. ಮನೆಯ ಹಿರಿಯರ ಜೊತೆ ಸೇರಿಕೊಂಡು ಕೃಷಿ ಕಾರ್ಯ ಮಾಡಿದ್ದಾರೆ. ಇಷ್ಟು ದಿನಗಳ ಕಾಲ ಬೇರೆ ಉದ್ಯೋಗ, ಸ್ವಂತ ಉದ್ಯಮ ಅಂತ ಹೋಗಿದ್ದ ಯುವಕರಲ್ಲಿ ಕೃಷಿಯತ್ತ ಒಲವು ಮೂಡಿದೆ.
ಈ ಯುವಕರಲ್ಲಿ ಹಲವರಲ್ಲಿ ಕೃಷಿ ಭೂಮಿಯಿದ್ದರೂ ಬದುಕು ಸಾಗಿಸೋಕೆ ಇತರೆ ಕೂಲಿ ಕೆಲಸ, ಕಟ್ಟಡ ಕಾಂಟ್ರಾಕ್ಟ್ ಸೇರಿದಂತೆ ಬೇರೆ ಬೇರೆ ಉದ್ಯೋಗಗಳನ್ನ ಮಾಡಿಕೊಂಡು ಇದ್ದವರು. ಊರಲ್ಲಿ ಕೃಷಿ ಭೂಮಿ ಇದ್ದರೂ ಕೂಡಾ ಅದರತ್ತ ಒಲವು ಕೊಂಚ ಕಡಿಮೆಯೇ ಇತ್ತು. ಪರಿಣಾಮ ಕೃಷಿ ಭೂಮಿಗಳಲ್ಲಿ ಸಂಪ್ರದಾಯದಂತೆ ಮನೆಯ ಹಿರಿಯರೇ ಕೆಲಸ ಮಾಡುತ್ತಿದ್ದರು. ಆದ್ರೆ ಸದ್ಯಕ್ಕೆ ನಗರದಲ್ಲಿ ಕೆಲಸವಿಲ್ಲ, ಕೆಲಸವಿದ್ದರೂ ನಗರಕ್ಕೆ ಹೋಗಿ ಕೆಲಸ ಮಾಡುವುದು ಸಾಧ್ಯವಿಲ್ಲ ಕೂಡ ಆತಂಕ. ಹೀಗಾಗಿ ಹಲವಾರು ದಿನಗಳಿಂದ ಮನೆಯಲ್ಲೇ ಇದ್ದ ಯುವಕರ ತಂಡ ಗದ್ದೆಗಿಳಿದು ಕೃಷಿ ಮಾಡಿದೆ. ಮನೆಯ ಹಿರಿಯರ ಮಾರ್ಗದರ್ಶನದಂತೆ ಕೋಣಗಳನ್ನು ಹಿಡಿದು ಎಕರೆಗಟ್ಟಲೇ ಗದ್ದೆಯನ್ನು ಹೂಳುವ ಕೆಲಸ ಮಾಡಿದ್ದೂ ಅಲ್ಲದೆ ಅದರ ಜೊತೆಗೆ ಪೈರು ನೆಟ್ಟು ಸಮೃದ್ದ ಕೃಷಿಗೆ ಮುನ್ನುಡಿ ಬರೆದಿದ್ದಾರೆ. ಈ ಮೂಲಕ ರೈತ ಕುಟುಂಬದವರಿಗೆ ಕೃಷಿಯೇ ಜೀವನಕ್ಕೆ ಆಧಾರ ಎಂದು ತೋರಿಸಿಕೊಟ್ಟಿದ್ದಾರೆ.





