ಆಷಾಢ ಮಾಸವೆಂದರೆ ವಿಶೇಷವಾದ ತಿಂಗಳು ಎಂದರ್ಥ. ಆಷಾಢ ಪೂರ್ಣಿಮೆಯು ವ್ಯಾಸ ಪೂರ್ಣಿಮೆಯೆಂದೇ ಪ್ರತೀತಿ. ಗುರುಗಳನ್ನು ಪೂಜಿಸುವ ಮಾಸವಿದು. ಅರ್ಥಾತ್ ಗುರು ಮಾಸವಿದು. ಅಧ್ಯಾತ್ಮ ಸಾಧಕರಿಗೆ ಪರಮಪವಿತ್ರವೂ ಹೌದು. ಅಜ್ಞಾನದ ಬದುಕಿಗೆ ಸುಜ್ಞಾನದ ಬೆಳಕನ್ನು ನೀಡಿ ಮುನ್ನಡೆಸುವ ಗುರುವಿನ ಅನಿವಾರ್ಯತೆ ಇದೆ. ಅದಕ್ಕಾಗಿಯೇ ಈ ದಿನದಲ್ಲಿ ಗುರುಪೂಜೆಗಳು ನಡೆಯುತ್ತದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಬೋಧಿಸಿದಂತೆ ಗುಣಗಳಿಗೆ ತಕ್ಕಂತೆ ಮನಸ್ಸನ್ನು ಎರಡು ವಿಭಾಗಗಳಾಗಿ ವಿಂಗಡಿಸಿದ್ದಾನೆ. ಸದ್ಗುಣಗಳನ್ನು ದೈವೀ ಸಂಪತ್ತು ಎಂದೂ, ದುರ್ಗುಣಗಳನ್ನು ಅಸುರೀ ಸಂಪತ್ತು ಎಂದು ಸೂಚಿಸಿದ್ದಾನೆ.
ನಾವೆಲ್ಲ ಸಾಧ್ಯವಾದಷ್ಟು ದೈವೀ ಸಂಪತ್ತುಗಳನ್ನು ಕ್ರೋಢೀಕರಿಸಬೇಕು. ನಿರ್ಭಯತೆ, ಅಂತಃಕರಣ ಶುದ್ಧಿ, ಜ್ಞಾನಯೋಗ ವ್ಯವಸ್ಥಿತಿ, ದಾನ, ದಮ, ಯಜ್ಞ, ಸ್ವಾಧ್ಯಾಯ, ತಪಸ್ಸು, ಸರಳತೆ ಇವೇ ಅತ್ಯಮೂಲ್ಯವಾದ ದೈವೀ ಸಂಪತ್ತುಗಳು. ಅದಕ್ಕಾಗಿಯೇ ಬದುಕು ಜಲ ಮಂಥನವಾಗದೆ ಮನಮಂಥನವಾಗಬೇಕು. ಹೇಗೆಂದರೆ ನೀರನ್ನು ಕಡೆದರೆ ಏನೂ ದೊರೆಯದು. ಮೊಸರನ್ನು ಕಡೆದರೆ ನವನೀತ ದೊರೆಯುವುದು. ಅದಕ್ಕಾಗಿ ಮನಸ್ಸಿನ ಶುದ್ಧೀಕರಣ ಮಾಡುವುದರಿಂದಲೇ ಬದುಕು ಉನ್ನತೀಕರಣಗೊಳ್ಳುವುದು.
ಈಗಾಗಲೇ ವಿಶ್ವವನ್ನೇ ಕಾಡುತ್ತಿರುವ ಮಹಾಮಾರಿಗೆ ನಿರ್ಭಯತೆಯೇ ಔಷಧಿ. ಆತ್ಮಜ್ಞಾನವನ್ನು ವೃದ್ಧಿಸಿಕೊಳ್ಳುವುದರಿಂದ ಭಯ ನಿವಾರಣೆಯಾಗಿ ಅಭಯದ ಕೃಪೆಯು ನಮ್ಮನ್ನು ಕಾಪಾಡುವುದು. ತಕ್ಕಂತೆ ತಿಳಿಸಿರುವ ಆಯ್ದ ಆಹಾರ, ಯೋಗಾಭ್ಯಾಸ ಇನ್ನಿತ್ಯಾದಿಗಳನ್ನು ಕ್ರಮಬದ್ಧವಾಗಿ ನಡೆಸಿಕೊಂಡು ಬಂದರೆ ಕೊರೋನಾದ ವಿರುದ್ಧ ಹೋರಾಡಬಹುದು. ನಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು.
ವೇದವ್ಯಾಸ ಭಗವಾನರು ಸಚ್ಚಾರಿತ್ರ್ಯವಂತರಾಗಿ ಬದುಕುವುದಕ್ಕೆ ದಾರಿಯನ್ನು ರೂಪಿಸಿದರು. ಈ ಶುಭದಿನದಂದು ನಾವೆಲ್ಲರೂ ಅವಶ್ಯವಾಗಿ ಸತ್ಸಂಕಲ್ಪವನ್ನು ಮಾಡಿಕೊಳ್ಳಬೇಕು. ದೈವೀ ಸಂಪತ್ತಿಗೆ ಒಡೆಯರಾಗೋಣ. ಈ ಸಂಧಿಗ್ದ ಪರಿಸ್ಥಿತಿಯಲ್ಲಿ ಮನೆ-ಮನಗಳಲ್ಲಿಯೇ ಗುರುಪೂಜೆಯನ್ನು ಮಾಡಿಕೊಂಡು ಧನ್ಯರಾಗೋಣ. ಭಾರತೀಯ ಪರಂಪರೆಯನ್ನು ಬೆಳಗೋಣ. ರಾಷ್ಟ್ರೀಯತೆಯನ್ನು ಮೆರೆಯೋಣ. ಅಧ್ಯಾತ್ಮದ ಮಾರ್ಗದಲ್ಲಿ ಸಾಗೋಣ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ದ ಶ್ರೀ ಗುರುದೇವಾನಂದ ಸ್ವಾಮಿಗಳವರು ಎಲ್ಲರಿಗೂ ಶುಭವಾಗಲಿ ಎಂದು ಕೋರಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here