



ಶತ್ರು ಇಲ್ಲದೆ
ಅಂದರೆ ಅಜಾತಶತ್ರು
ಆಗಿ ಬದುಕುವುದು ಹೇಗೆ..!?
ಮೊನ್ನೆ ಆ ದೇಶದ ಸೈನಿಕ
ಈ ದೇಶದ ಗಡಿರೇಖೆಯೊಳಗೆ
ತಪ್ಪಿ ಕಾಲಿಟ್ಟಿದ್ದ..
ಅವನ ಹಿಡಿದು
ಒಂದೆರಡು ಬಡಿದು
ವಿಚಾರಿಸಿ
ಆ ಮೇಲೆ ಆ ದೇಶದ
ಒತ್ತಡಕ್ಕೆ ಮಣಿದು
ಬಿಡಲಾಯಿತು..
ಆ ದೇಶ ಶತ್ರುದೇಶ
ಆದದ್ದೇ ಇಷ್ಟಕ್ಕೆಲ್ಲಾ ಕಾರಣ..
ಬಂದವನಿಗೂ,ಹಿಡಿದವನಿಗೂ
ಬಡಿದವನಿಗೂ,ವಿಚಾರಿಸಿದವನಿಗೂ
ಯಾವುದೇ ವೈರತ್ವ ಇಲ್ಲ..
ಅದರೂ ಇವನಿಗವನು
ಅವನಿಗಿವನು ಶತ್ರು..!
ಅಷ್ಟಕ್ಕೂ ಶತ್ರು ಎಂದರೆ ಯಾರು..
ತನ್ನನ್ನು ವಿರೋಧಿಸುವವನು..?
ತನಗೆ ದ್ರೋಹ ಬಗೆದವನು,
ನೋವು ನೀಡಿದವನು,
ಸಹ ಸ್ಪರ್ಧಿ,
ತನ್ನ ವಿರುದ್ಧ ಮನಸ್ಥಿತಿಯವನು.,
ತನ್ನ ವಿರೋಧ ಬಳಗದವನು..’
ತನ್ನ ಬಣ್ಣವನ್ನು ಕಳಚಿದವನು..!?
ಇವನು ನನ್ನ ಶತ್ರು
ಅಂದ ಮಾತ್ರಕ್ಕೆ
ಅವನು ಪ್ರಪಂಚಕ್ಕೆ ಕೆಟ್ಟವನೇ..
ನಾನು ಕೆಟ್ಟವನನ್ನು
ಮಾತ್ರ ನನ್ನ ಶತ್ರು ಎಂದು ಗುರುತಿಸುವುದೇ..
ಕರ್ಣ ದುರ್ಯೋಧನನ
ಜೊತೆ ನಿಂತದಕ್ಕೆ
ಅರ್ಜುನ ಶತ್ರುನಾದನೇ..
ಅಥವಾ
ಪ್ರತಿಸ್ಪರ್ಧಿ ಎಂದೇ..?
ಕಂಸನಿಗೆ ಕೃಷ್ಣ
ತನ್ನ ಸಾವಿಗೆ ಕಾರಣನಾಗುವ
ಭಯವೇ ಶತ್ರುತ್ವ ಹುಟ್ಟಿಸಿದ್ದೇ
ಅವರ ನಡುವಿನ
ಸಂಬಂಧವೇ ಮರೆಯಿತೇ..!
ನಿಜವಾದ ಶತ್ರು
ಹೊರಗಿರುವುದೇ
ಅಥವಾ ತನ್ನೊಳಗಿರುವುದೇ..!
✍ಯತೀಶ್ ಕಾಮಾಜೆ





