



ವಿಟ್ಲ: ವ್ಯಕ್ತಿತ್ವಕ್ಕೆ ಸದ್ಗುಣ ಅಳತೆಕೋಲು ಹೊರತು ಸಂಪತ್ತಲ್ಲ. ಮಹಾಮಾರಿಗಳನ್ನು ನಿಯಂತ್ರಣ ಮಾಡುವ ಶಕ್ತಿ ವಿಷ್ಣುಸಹಸ್ರನಾಮದಲ್ಲಿದೆ. ಪ್ರೊ.ವಿ.ಬಿ.ಅರ್ತಿಕಜೆ ಅವರು ಪದ್ಯಾನುವಾದ ಮಾಡಿ ಸಮಾಜಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಒಡಿಯೂರು ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಪ್ರೊ.ವಿ.ಬಿ.ಅರ್ತಿಕಜೆ ಅವರ 41ನೇ ಕೃತಿ ಶ್ರೀ ವಿಷ್ಣುಸಹಸ್ರ ನಾಮ ಪದ್ಯಾನುವಾದ ಪುಸ್ತಕ ಅನಾವರಣಗೊಳಿಸಿ, 79ನೇ ಜನ್ಮದಿನದ ಅಂಗವಾಗಿ ಪ್ರೊ.ವಿ.ಬಿ.ಅರ್ತಿಕಜೆ- ಭಾಗ್ಯಲಕ್ಷ್ಮೀ ದಂಪತಿಯನ್ನು ಸಮ್ಮಾನಿಸಿ ಆಶೀರ್ವಚನ ನೀಡಿದರು.
ಕೊರೊನಾ ಬಗ್ಗೆ ಪ್ರತಿಯೊಬ್ಬರೂ ಜಾಗ್ರತೆಯಿಂದ ಇರಬೇಕಾಗಿದೆ. ಕೊರೊನಾ ಜನರಲ್ಲಿ ಭಾರತೀ ಸಂಸ್ಕೃತಿಯನ್ನು ಆಚರಣೆಗೆ ತರುವಂತೆ ಮಾಡಿದೆ. ಸರಕಾರದ ನಿಯಮಗಳ ಪಾಲನೆ ಬಹಳಷ್ಟು ಅಗತ್ಯ. ಗ್ರಾಮೋತ್ಸವವನ್ನು ಜನರು ಇರುವಲ್ಲೇ ಆಚರಣೆ ಮಾಡುವ ಕಾರ್ಯವಾಗಲಿ. ಎಚ್ಚರದ ಬದುಕಿನಲ್ಲಿ ಸಾರ್ಥಕತೆ ಇದೆ ಎಂದರು.
ಸಾಧ್ವಿ ಶ್ರೀ ಮಾತಾನಂದಮಯೀ ಅವರು ದಿವ್ಯ ಸಾನಿಧ್ಯವಹಿಸಿದ್ದರು. ಪ್ರೊ.ವಿ.ಬಿ.ಅರ್ತಿಕಜೆ ಅವರು ಕೃತಿಯ ಬಗ್ಗೆ ವಿವರಿಸಿದರು. ಪತ್ರಕರ್ತ, ಅಂಕಣಕಾರ ನಾ. ಕಾರಂತ ಪೆರಾಜೆ ಅವರು ಮಾತನಾಡಿದರು. ಭಾಗ್ಯಲಕ್ಷ್ಮೀ ಉಪಸ್ಥಿತರಿದ್ದರು. ಯಶವಂತ ವಿಟ್ಲ ನಿರೂಪಿಸಿದರು. ಶ್ರೀ ಗುರುದೇವ ವಿದ್ಯಾ ಪೀಠದ ಸಂಚಾಲಕ ಸೇರಾಜೆ ಗಣಪತಿ ಭಟ್ ವಂದಿಸಿದರು.
ಭೇಟಿಗೆ ಅವಕಾಶವಿಲ್ಲ:
ಒಡಿಯೂರು ಶ್ರೀಗಳ ಭೇಟಿಯ ಅವಕಾಶವನ್ನು ಜುಲೈ ಅಂತ್ಯದವರೆಗೆ ಮುಂದೂಡಲಾಗಿದೆ. ಆಗಸ್ಟ್ ಬಳಿಕ ಸೂಕ್ತ ಮಾಹಿತಿ ನೀಡಲಾಗುವುದು ಎಂದು ಪ್ರಕಟಿಸಲಾಯಿತು.





