ಬಂಟ್ವಾಳ : ಅದೊಂದು ಭಾವನಾತ್ಮಕ ಸಂದರ್ಭ.. ಗ್ರಾಮಪಂಚಾಯತ್ ನ ಅವಧಿ ಮುಗಿಯುವ ಆ ಕ್ಷಣ‌ ಅಧ್ಯಕ್ಷರೂ ಸೇರಿದಂತೆ ಎಲ್ಲಾ ಸದಸ್ಯರೂ ಪಕ್ಷ ಬೇಧ ಮರೆತು ಒಂದಾಗಿ 5 ವರ್ಷಗಳ ಕಾರ್ಯವನ್ನು ಮೆಲುಕು ಹಾಕಿ ಸಂಭ್ರಮಿಸಿ ಸನ್ಮಾನಿಸಿದ ಅರ್ಥಪೂರ್ಣ ಸನ್ನಿವೇಶವದು.
ಹೌದು.. ಈ ಅಪರೂಪದ ಕಾರ್ಯಕ್ರಮ ನಡೆದದ್ದು ತಾಲೂಕಿನ ಅಮ್ಟಾಡಿ ಗ್ರಾಮಪಂಚಾಯತ್ ನಲ್ಲಿ. ಗ್ರಾಮಪಂಚಾಯತ್ ಅಧ್ಯಕ್ಷ ಹರೀಶ್ ಶೆಟ್ಟಿ ಪಡು ಅವರ ನೇತೃತ್ವದಲ್ಲಿ ಶನಿವಾರ ನಡೆದ ಈ ವಿದಾಯ ಕೂಟ ಹಲವು ವೈಶಿಷ್ಟ್ಯಗಳೊಂದಿಗೆ ಮಾದರಿಯಾಗಿ ಮೂಡಿಬಂದಿದೆ.

ಬಿಜೆಪಿ ಬೆಂಬಲಿತರ ವಶದಲ್ಲಿದ್ದ ಅಮ್ಟಾಡಿ ಗ್ರಾಮಪಂಚಾಯತ್ ನಲ್ಲಿ ಕಾಂಗ್ರೇಸ್ ಬೆಂಬಲಿತ ಸದಸ್ಯರೂ ಇದ್ದಾರೆ. ಆದರೆ ವಿದಾಯ ಕೂಟದ ಸಂದರ್ಭ ಎಲ್ಲಾ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಎಲ್ಲರೂ ಒಂದಾಗಿದ್ದು, ವಿಶೇಷ‌.

ಕ್ರಿಯಾಶೀಲರಾಗಿ ಅಧ್ಯಕ್ಷ ಅವಧಿಯನ್ನು ಪೂರೈಸಿದ ಹರೀಶ್ ಶೆಟ್ಟಿ ಪಡು ರವರು, ಕಳೆದ ಐದು ವರ್ಷಗಳಲ್ಲಿ ತನಗೆ ಸಹಕರಿಸಿದ ಎಲ್ಲಾ 19 ಸದಸ್ಯರನ್ನು, ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಹಿತ 14 ಮಂದಿ ಸಿಬ್ಬಂದಿಗಳನ್ನು, 16 ಮಂದಿ ಪಂಪ್ ಆಪರೇಟರ್ ಗಳನ್ನೂ ಸೇರಿದಂತೆ 51 ಮಂದಿಯನ್ನು ಸನ್ಮಾನಿಸಿದರು. ಇದೇ ಸಂದರ್ಭ ಮಾತನಾಡಿದ ಅವರು, ಕಳೆದ 5 ವರ್ಷಗಳಲ್ಲಿ ಎಲ್ಲಾ ಸದಸ್ಯರು, ಗ್ರಾಮಸ್ಥರು, ಅಧಿಕಾರಿ ವರ್ಗ ಹಾಗೂ ಶಾಸಕರ ವಿಶೇಷ ಸಹಕಾರದೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಎಲ್ಲರಿಗೂ ಕೃತಜ್ಞತೆ ಸಲ್ಲಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.


ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಯಶೋಧ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹಮ್ಮದ್ ಬಿ, ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಸಹಾಯಕ ಇಂಜಿನಿಯರ್ ಅಜಿತ್ ಕೆ.ಎನ್, ಅಮ್ಟಾಡಿ ಗ್ರಾಮಕರಣಿಕ ಶಶಿಕುಮಾರ್, ಕುರಿಯಾಳ ಗ್ರಾಮಕರಣಿಕ ಅಮೃತಾಂಶು, ಗ್ರಾ.ಪಂ.ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಮ್ಟಾಡಿ ಹಾಗೂ ಕುರಿಯಾಳ ಗ್ರಾಮಗಳ ವಿವಿಧ ಸಂಘಸಂಸ್ಥೆಗಳು ಗ್ರಾಪಂ. ಅಧ್ಯಕ್ಷ ಹರೀಶ್ ಶೆಟ್ಟಿಯವರನ್ನು ಸನ್ಮಾನಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here