



ವರುಣನ ಪನ್ನೀರ ಸಿಂಚನದಿ
ಮುಗ್ಧ ಮನಸುಗಳ
ಆಗಮನವಿಲ್ಲ…..
ಮಾವಿನೆಲೆಗಳ ತಳಿರು
ತೋರಣದ ಸಿಂಗಾರ
ಕಂಗೊಳಿಸಲಿಲ್ಲ…..
ಅಕ್ಷರ ದೇಗುಲದಿ ಕಿಲ ಕಿಲ
ನಗುವ ಮಗುವಿನ
ಕಲರವವಿಲ್ಲ….
ಆಟದ ಮೈದಾನ ನೆಟ್ಟು
ಬಾಲುಗಳಿಗೆ ಗುದ್ದಾಡಲು
ಜೊತೆಗಾರರಿಲ್ಲ……
ಮೂಕ ರೋದನದಿ
ಗೋಚರಿಸದ ಭಾವದಲೆಗಳ
ಹೊಯ್ದಾಟವಿಂದು…..
ಒಂಟಿತನದ ಒರತೆ ಇಂಗಿ
ಬಣ್ಣದ ಗಿರಿಗಿಟ್ಟುಗಳ
ತಿರುಗಾಟವೆಂದು…..?
ಒಡಲಾಳದಿ ಕಳೆದಿಹ
ಸಖ್ಯ ಸಂಬಂಧದ
ಬಂಧನವಿದೆ…..
ಋತುಮಾಸಗಳಲಿ ಮಾಸದ
ನಗುವಿನ ಇಂಪಾದ
ಸೆಳೆತವಿದೆ…..
ರೋಗಾಣುವಿನ ವಿಷಮತೆ
ಮೌನದ ನಿರಾಕಾರಕೆ
ತಳಹದಿಯಾಗದಿರಲಿ….
ಸುಖ ಸಮೃದ್ಧಿಯ ಅಮೃತ
ಮಾತಿನ ಆಕಾರಕೆ
ಅಡಿಪಾಯವಾಗಲಿ…..
ಶಾಲೆಯಲಿ ಹುದುಗಿಟ್ಟ
ಹುರುಪಿನ ಬಯಕೆಗಳು
ಹುಸಿಯಾಗದೆ ನನಸಾಗಲಿ….
ವಿದ್ಯೆಯೆಂಬ ಸ್ವಾತಿಮುತ್ತಿನ
ಎರಕದಿ ಭವಿತದ ಬೆಳಕಿನ
ಸೊಡರು ಬೆಳಗಲಿ…..
✍️ ತುಳಸಿ ಕೈರಂಗಳ್





