ವಿಟ್ಲ: ರಾಜ್ಯದಲ್ಲಿರುವ ಸಾರ್ವಜನಿಕ ಆಸ್ಪತ್ರೆಗಳು ಆಳುವ ಸರಕಾರಗಳ ನಿರ್ಲಕ್ಷದಿಂದಾಗಿ ಅಗತ್ಯ ಡಾಕ್ಟರ್, ಸಿಬ್ಬಂದಿ ಕೊರತೆ, ಔಷದ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ಬಳಲುತ್ತಿದೆ. ಇದರಿಂದಾಗಿ ಸಾಮಾನ್ಯ ಜನತೆಗೆ ಉತ್ತಮ ಆರೋಗ್ಯ ಲಭಿಸದೇ ಖಾಸಗೀ ಆಸ್ಪತ್ರೆಗಳ ಧನದಾಹಿಕೋರತನಕ್ಕೆ ಬಲಿಯಾಗುತ್ತಿರುವ ಈ ಸ್ಥಿತಿಯಲ್ಲಿ ಕೋವಿಡ್ 19 ರೋಗ ಸಾಮಾನ್ಯ ಜನರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಸಾಮಾನ್ಯ ರೋಗಿಗಳು ಈಗ ಆಸ್ಪತ್ರೆಗಳಿಗೆ ಹೋಗಲಾರದ ಪರಿಸ್ಥಿತಿ ನಿರ್ಮಾಣವಾಗಿದೆ.


ರಾಜ್ಯ ಸರಕಾರ ಇಂತಹ ಗಂಬೀರ ಪರಿಸ್ಥಿತಿಯಲ್ಲಿ ಕೊವಿಡ್ 19 ಸೋಂಕಿತ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡಲು ಸಾರ್ವಜನಿಕ ಆಸ್ಪತ್ರೆಗಳನ್ನು ಡಾಕ್ಟರ್ ಸಿಬ್ಬಂದಿ ಔಷಧ ಸೇರಿದಂತೆ ಎಲ್ಲಾ ರೀತಿಯಲ್ಲಿಯೂ ಸಜ್ಜುಗೊಳಿಸಬೇಕು. ಅಗತ್ಯ ಬಿದ್ದರೆ ಖಾಸಗಿ ಆಸ್ಪತ್ರೆಗಳನ್ನು ವಶಕ್ಕೆ ಪಡೆದು ಎಲ್ಲರಿಗೂ ಉಚಿತ ಚಿಕಿತ್ಸೆ ನೀಡಬೇಕು. ಆದೆ ಕರ್ನಾಟಕ ರಾಜ್ಯ ಸರಕಾರದ (ಉಪಮುಖ್ಯ ಮಂತ್ರಿ,ಗೃಹ ಸಚಿವ,ಆರೋಗ್ಯ ಸಚಿವರನ್ನೊಳಗೊಂಡ) ಕಾರ್ಯಪಡೆಯು ಕೊರೋನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದರ ನಿಗದಿಗೊಳಿಸಿ ಸರಕಾರಕ್ಕೆ ವರದಿ ನೀಡಿದೆ. ಈ ವರದಿಗೆ ಸಚಿವ ಸಂಪುಟದ ಒಪ್ಪಿಗೆಯಷ್ಟೇ ಬಾಕಿ ಇದೆ. ಕಾರ್ಯಪಡೆಯು ಸಿದ್ದಪಡಿಸಿz ವರದಿ ಪ್ರಕಾರ ಸಾಮಾನ್ಯ ರೋಗಿಗೆ ಸಾಮಾನ್ಯ ವಾರ್ಡ್‍ನಲ್ಲಿ ರೂ 10,000/-ಆಮ್ಲ ಜನಕ ಸಹಿತ ವಾರ್ಡ್‍ನಲ್ಲಿ ರೂ 12,000/- ಐಸಿಯು ಹಾಸಿಗೆ ರೂ 15,000/- ವೆಂಟಿಲೇಟರ್ ಸಹಿತ ಐಸಿಯುವಿಗೆ ರೂ 25,000/- ನಿಗದಿಗೊಳಿಸಿದೆ. ಇದಕ್ಕೆ ಆಯುಷ್ಮಾನ್ ಭಾರತ್ –ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಬಿ.ಪಿ.ಎಲ್ ಕುಟುಂಬದ ರೋಗಿಗಳಿಗೆ ಕ್ರಮವಾಗಿ ಸಾಮಾನ್ಯ ವಾರ್ಡ್ ಗೆ 5,200/- ಆಮ್ಲಜನಕ ಸಹಿತ ವಾರ್ಡ್ ಗೆ ರೂ. 7,000/- ತೀವೃ ನಿಘಾ ಘಟಕಕ್ಕೆ ರೂ 8500/- ಹಾಗೂ ವೆಂಟಿಲೇಟರ್ ಸಹಿತ ಐಸಿಯು ವಿಗೆ 10,000/- ನಿಗದಿಗೊಳಿಸಿ ವರದಿ ಸಿದ್ದಪಡಿಸಿದೆ. ಆದರೆ ಗ್ರಾಮಿಣ ನಗರ ಪ್ರದೇಶದ ಬಹುತೇಕರು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿಲ್ಲವೆಂಬುದು ವಾಸ್ತವ.
ಈ ಹಂತದಲ್ಲಿ ರಾಜ್ಯ ಸರಕಾರಕ್ಕೆ ಸಲ್ಲಿಕೆಯಾಗಿರುವ ಈ ವರದಿಯು ಜನಸಾಮಾನ್ಯರಿಗೆ ಗಂಭೀರ ಹೊರೆಯಾಗಿ ಪರಿಣಮಿಸಲಿದೆ. ಈಗಾಗಲೇ ಕರೋನಾ ಲಾಕ್ ಡೌನ್ ನಿಂದಾಗಿ ಉದ್ಯೋಗವಿಲ್ಲದೆ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಈ ಚಿಕಿತ್ಸೆಯ ದರ ನಿಗದಿಯು ಗಾಯದ ಮೇಲೆ ಬರೆ ಎಳೆದಂತಾಗುವುದು ಇದನ್ನು ಸಹಿಸಲಾಗದು.
ಉದಾಹರಣೆಗೆ ಕೊರೋನಾ ಸೋಂಕಿತ ರೋಗಿ ಕನಿಷ್ಟ ಹತ್ತು ದಿನಗಳ ವರೆಗೆ ಸಾಮನ್ಯ ವಾರ್ಡ್ ನಲ್ಲಿ ಚಿಕಿತ್ಸೆ ಪಡೆದರೂ ದಿನಕ್ಕೆ 10,000/-ದಂತೆ ಹತ್ತು ದಿನಕ್ಕೆ ಒಂದು ಲಕ್ಷ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಮತ್ತೆ ಕೋವಿಡ್ ಅಂಟು ರೋಗವಾದ್ದರಿಂದ ಮನೆಯಲ್ಲಿ ಕುಟುಂಬದ ಸದಸ್ಯರಿಗೆ ಹರಡಿದರೆ ಲಕ್ಷಾಂತರ ರೂ ಭರಿಸಬೇಕಾಗುತ್ತದೆ.ಸರಕಾರವೇ ಮುಂದೆ ನಿಂತು ಖಾಸಗಿಯವರಿಗೆ ಸುಲಿಗೆಗೆ ಅವಕಾಶ ಮಾಡಿಕೊಡುವ ರೀತಿಯ ಈ ನಡೆ ನ್ಯಾಯಯುತವಾದುದಲ್ಲ . ಈ ವರದಿಯನ್ನು ಕೂಡಲೇ ರದ್ದುಗೊಳಿಸಿ ಕೊರೋನಾ ಸೋಂಕಿತರಿಗೆಲ್ಲರಿಗೂ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲು ಬೇಕಾದ ಸಕಲ ವ್ಯವಸ್ಥೆ ಮಾಡಿಕೊಳ್ಳುವುದು ಹಾಗೂ ಅಗತ್ಯಬಿದ್ದರೆ ಖಾಸಗಿ ಆಸ್ಪತ್ರೆಗಳನ್ನು ವಶಕ್ಕೆ ಪಡೆದು ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲು ರಾಜ್ಯ ಸರಕಾರ ಮುಂದಾಗಬೇಕೆಂದು ಒತ್ತಾಯಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿ.ವೈ.ಎಫ್.ಐ) ವಿಟ್ಲ ವಲಯ ಸಮಿತಿ ಸರಕಾರವನ್ನು ವತಿಯಿಂದ ವಿಟ್ಲ ಉಪ ತಹಶೀಲ್ದಾರರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು ಈ ಸಂದರ್ಭ ಡಿ.ವೈ.ಎಫ್.ಐ ವಿಟ್ಲ ವಲಯ ಆಧ್ಯಕ್ಷರಾದ ನುಜುಂ ಅಳಿಕೆ, ಕಾರ್ಯದರ್ಶಿ ಜಮೀಲ್.ಎಂ, ಕಾರ್ಮಿಕ ಮುಖಂಡರಾದ ರಾಮಣ್ಣ ವಿಟ್ಲ, ಡಿ.ವೈ.ಎಫ್.ಐ ಬಂಟ್ವಾಳ ತಾಲೂಕು ಕಾರ್ಯದರ್ಶಿ ನ್ಯಾಯವಾದಿ ತುಳಸೀದಾಸ್ ವಿಟ್ಲ, ಮುಖಂಡರಾದ ಆರೀಫ್.ಬಿ.ಕೆ, ತಮೀಮ್, ಇರ್ಫಾನ್ ಒಕ್ಕೆತ್ತೂರು ಮುಂತಾದವರು ನಿಯೋಗದಲ್ಲಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here