Wednesday, October 18, 2023

ನೆಲಮುಚ್ಚಿಗೆ ಮತ್ತು ಸ್ವಾವಲಂಬನೆ

Must read

ನಮ್ಮ ಹಳ್ಳಿಗಳಲ್ಲೆಲ್ಲ ಮನೆಯಂಗಳವನ್ನು ಕಾಂಕ್ರೀಟ್, ಬ್ಲಾಕ್ಸ್ ಇತ್ಯಾದಿಗಳಿಂದ ಮುಚ್ಚುವ ಕಲ್ಪನೆಯೇ ನಮಗಿರಲಿಲ್ಲ. ಹೆಚ್ಚಿನಂಶ ಈ ಎರಡು ಹೆಸರುಗಳೇ ಆಗಿನ ಕಾಲದಲ್ಲಿ ಚಲಾವಣೆಯಲ್ಲಿ ಇರಲಿಲ್ಲ. ಇನ್ನೂ ಹೇಳಬೇಕೆಂದರೆ ಆ ವಸ್ತುಗಳೇ ಇರಲಿಲ್ಲವೋ ಅಥವಾ ಹಳ್ಳಿಗಳಿಗೆ ಅವುಗಳ ಧಾಳಿಯೇ ಆಗಿರಲಿಲ್ಲವೋ ಏನೊ. ಆಗ ಹೇಗಂದ್ರೆ ಪೂರ್ಣವಾಗಿ ಮಣ್ಣಿನದ್ದೇ ಅಂಗಳ. ಬೇಸಿಗೆ ಕಾಲ ಬಂದರೆ ಸಾಕು, ಪಿಕಾಸಿಯಲ್ಲಿ ಅಂಗಳವನ್ನು ಚೆನ್ನಾಗಿ ಅಗೆದುಹಾಕಿ, ಮಣ್ಣನ್ನು ಕಲಸಿ ಅದು ಒಣಗಿಕೊಂಡು ಬರುವಾಗ ಹೊಡಿಮಣೆಯಲ್ಲಿ ಚೆನ್ನಾಗಿ ಹೊಡೆದು ಸಮತಟ್ಟುಗೊಳಿಸುವುದು. ಒಂದು ವಾರದಲ್ಲಿ ಸೆಗಣಿ ಮತ್ತು ಮಸಿ ಬೆರಸಿ ಸಾರಿಸಿ ಸಮತಟ್ಟಾದ ಹಿಡಿಕಲ್ಲಿನಲ್ಲಿ ತಿಕ್ಕುವುದು. ಮುಂದಿನ ದಿನಗಳಲ್ಲಿ ನೀರು ಎಳೆದುಕೊಳ್ಳದ ಹಾಗೆ ಗೇರುಬೀಜದ ಎಣ್ಣೆಯ ಲೇಪನ ಮಾಡಿಬಿಟ್ಟರೆ ಈಗಿನ ಸಿಮೆಂಟಿನ ಹಾಗಲ್ಲದಿದ್ದರೂ ತಾತ್ಕಾಲಿಕವಾಗಿಯಾದರೂ ಘಟ್ಟಿಯಾಗಿರುತ್ತಿತ್ತು. ಬತ್ತ, ಅಡಕೆ, ತೆಂಗಿನಕಾಯಿ ಇತ್ಯಾದಿಗಳನ್ನು ಒಣಗಿಸಲು ಹಾಗೂ ಇತರೇ ಕೃಷಿ ಮತ್ತು ಬೇಸಾಯ ಸಂಬಂಧಿ ಕೆಲಸಕಾರ್ಯಗಳಿಗೆ ಇದು ಅನಿವಾರ್ಯವಾಗಿತ್ತು.


ನಾನು ಹೇಳಹೊರಟಿರುವುದು ಅಂದಿನ ಜನ ಎಷ್ಟರಮಟ್ಟಿಗೆ ಸ್ವಾವಲಂಬಿಗಳಾಗಿದ್ದರು ಅನ್ನುವುದನ್ನು. ಮಳೆಗಾಲ ಬಂದರೆ ಸಾಕು, ಅಂಗಳ ತುಂಬ ಅಡಕೆ ಮರದ ಸೋಗೆ, ತರಗೆಲೆ, ಬೈಹುಲ್ಲು ಹಾಗೂ ಇತರೇ ಕಸಕಡ್ಡಿಗಳನ್ನು ದಪ್ಪವಾಗಿ ಹರಡಿಬಿಡುವುದು. ಇದನ್ನು ‘ನೆಲಮುಚ್ಚಿಗೆ’ ಎಂದು ಕರೆಯುತ್ತಾರೆ. ಅದು ಮಳೆಗೆ ಕೊಳೆಯುವಷ್ಟರಲ್ಲಿ ಉದ್ದು, ಹೆಸರು, ಅವರೆ ಇತ್ಯಾದಿಗಳನ್ನು ಅದರ ಮೇಲೆ ಹಾರಿಸಿಬಿಡುವುದು. ನಿಗದಿತ ಅವಧಿಗನುಗುಣವಾಗಿ ಸುಡುಮಣ್ಣು, ಬೂದಿ, ಸೆಗಣಿಪುಡಿ ಇತ್ಯಾದಿಗಳನ್ನು ಅದರ ಮೇಲೆ ಪ್ರಸರಿಸಿಬಿಟ್ಟರೆ ಅಲ್ಲಿಗೆ ಅದರ ಲಾಲನೆ ಪಾಲನೆ ಮುಗಿಯಿತು. ಮಳೆಗಾಲ ಕೊನೆಗೊಳ್ಳುತ್ತಿದ್ದಂತೆ ಕೊಯಿಲಿಗೆ ಬರುವ ಈ ಧಾನ್ಯಗಳು ಅವರ ವಾರ್ಷಿಕ ಖರ್ಚಿಗೆ ಸಾಕಾಗುತ್ತಿತ್ತು. ಇದು ಸ್ವಾವಲಂಬನೆಯೂ ಹೌದು ಜತೆಯಲ್ಲಿ ಅಂಗಳವೂ ಸುಸ್ಥಿಯಲ್ಲಿರುತ್ತದೆ. ಆಶ್ಚರ್ಯವೆಂದರೆ, ಇದೊಂದು ನೀರಿಂಗಿಸುವ ವಿಧಾನವೂ ಹೌದೆಂಬುದನ್ನು ಗಮನಿಸಬೇಕು. ಕೃಷಿಕನೊಬ್ಬ ತನಗೆ ಅರಿವಿಲ್ಲದೆಯೇ ಈ ನೆಲಮುಚ್ಚಿಗೆಯ ಮೂಲಕ ಓಡಿಹೋಗುವ ಮಳೆನೀರನ್ನು ತೆವಳುವಂತೆ, ತೆವಳಿಹೋಗುವ ನೀರನ್ನು ನಿಲ್ಲುವಂತೆ ಮಾಡಿ ನೀರು ಇಂಗಿಸುವ ಪ್ರಕ್ರಿಯೆಯಲ್ಲಿ ತನ್ನನ್ನು ತಾನು ಪರೋಕ್ಷವಾಗಿ ತೊಡಗಿಸಿಕೊಳ್ಳುತ್ತಾನೆ. ಇದರಿಂದಾಗಿ ಸುತ್ತುಮುತ್ತಲ ಕೆರೆ ಬಾವಿಗಳಲ್ಲಿ ನೀರಿನ ಒಸರು ಅಧಿಕಗೊಂಡು ನೀರಿಗಾಗಿ ಬೇರೆಯವರಿಗೆ ಅಂಗಲಾಚುವ ಸ್ಥಿತಿ ಆತನಿಗಿರುವುದಿಲ್ಲ. ಇದೂ ಕೂಡಾ ಒಂದು ರೀತಿಯಲ್ಲಿ ಸ್ವಾವಲಂಬನೆಯೇ. ಈವತ್ತಿನ ಆಧುನಿಕ ಯುಗದಲ್ಲಂತೂ ಇವೆಲ್ಲವೂ ಕೇವಲ ಕನಸು. ಬಾಯಾರಿದ ನೆಲಕ್ಕೆ ವಂಚಿಸುತ್ತಿರುವ ನಾವು ಎಲ್ಲಿಯೂ ನೀರನ್ನು ನಿಲ್ಲಲು ಬಿಡದೆ ನೇರವಾಗಿ ಸಮುದ್ರವನ್ನೇ ಸೇರುವಂತಹ ಸ್ಥಿತಿಯನ್ನು ಕಲ್ಪಿಸಿದ್ದೇವೆ. ನೀರುಹೋಗುವ ಕಣಿವೆಗಳು, ಮದಕಗಳು, ಹುಲ್ಲುಗಾವಲುಗಳು, ಗೋಚರಗಳು, ಶೋಲಾ ಕಾಡುಗಳು ಇವೆಲ್ಲವನ್ನೂ ಹಾಳುಗೆಡಹಿದ್ದೇವೆ. ಭೂಮಿಗೆ ಇನ್ನೆಲ್ಲಿಯ ನೀರು ಸೇರಬೇಕು? ಜಲಮಟ್ಟ ಮಟ್ಟ ಏರುವುದಾದರೂ ಹೇಗೆ ಸಾಧ್ಯ?

✍️ರಾಜಮಣಿ ರಾಮಕುಂಜ

More articles

Latest article