Tuesday, October 17, 2023

ನಮ್ಮ ಉಸಿರು ನಮ್ಮದೇ ಆಗಿರಲಿ….. ಆತ್ಮ ನಿರ್ಭರವಾಗುತ್ತದೆ

Must read

ನಿಮಗನಿಸಬಹುದು, ಇವರು ಎಷ್ಟೊಂದು ಆತ್ಮನಿರ್ಭರದ ಕುರಿತು ಬರೆಯುತ್ತಿದ್ದಾರೆ ಎಂಬುದಾಗಿ. ಹೌದು, ನಾನು ಇದೇ ಮಣ್ಣಿನ ಧಾತುವನ್ನು ಹೀರಿ ಬೆಳೆದವ, ನನಗೆ ಈ ಮಣ್ಣಿನ ಶ್ರೀಮಂತಿಕೆಯ ಬಗ್ಗೆ ಅಭಿಮಾನವಿದೆ, ನಂಬಿಕೆಯಿದೆ; ಹಾಗೆ ಆತ್ಮ ನಿರ್ಭರ ಅಂದಾಗಲೆಲ್ಲಾ ಅದು ನನ್ನನ್ನು ಮತ್ತೆ ಮತ್ತೆ ಕಾಡುತ್ತಾ ಆಳಕ್ಕೆ ಕೊಂಡುಹೋಗುತ್ತದೆ, ಬೇರೆ ಬೇರೆ ವಿಚಾರಗಳಿಗೆ ತೆರೆದುಕೊಳ್ಳುವಂತೆ, ಮಾತನಾಡುವಂತೆ ಮಾಡುತ್ತದೆ.
ಅದೆಷ್ಟೋ ಸಂದರ್ಭಗಳಲ್ಲಿ ನಮ್ಮ ತಲೆಯಲ್ಲಿದ್ದದ್ದನ್ನು ಬಿಟ್ಟು ಇನ್ನೊಬ್ಬರ ತಲೆಯ ಮೂಲಕ ಮಾತನಾಡುತ್ತೇವೆ ನೋಡಿ! ಅದೂ ಕೂಡ ಆ ಬುದ್ಧಿ ಜೀವಿಗಳ ಹಣೆಪಟ್ಟಿ ಕಟ್ಟಿ ಕೊಂಡವರಂತೂ ಇಲ್ಲಿನದ್ದನ್ನೆಲ್ಲಾ ಅಡಗಿಸಿಟ್ಟು ಪಾಶ್ಚಿಮಾತ್ಯ ದೇಶಗಳನ್ನು ಬಗಲಿಗೆ ಕಟ್ಟಿಕೊಂಡು ಅಲ್ಲಿಗೇ ಧ್ವನಿಯಾಗುವ ಈ ಪರಿ ಇದೆಯಲ್ಲ? ಇದು ಅವರನ್ನು ಮಾತ್ರವಲ್ಲ ನಮ್ಮ ಇರವಿನ ಕುರಿತೂ ಕೂಡ ನಮ್ಮನ್ನು ಮರೆವಿನ ಅಂಚಿಗೆ ತಳ್ಳುವ ವಿಧಾನ.

ನೀವು ಯಾವುದೇ ಒಂದು ಸಾಹಿತ್ಯ ಪ್ರಕಾರವನ್ನು ತಗೊಳ್ಳಿ, ಅದರ ಕುರಿತಾಗಿನ ನಮ್ಮ ಚಿಂತನೆಗಳು ಹೊರಡುವುದು ಪಾಶ್ಚಾತ್ಯ ಕಾವ್ಯಮೀಮಾಂಸೆಯ ನೆಲೆಯಿಂದ ಅಥವಾ ಅಲ್ಲಿನ ವಿಮರ್ಶಾತ್ಮಕ ದೃಷ್ಟಿಕೋನದಿಂದ. ಯಾಕೆ ಭಾರತೀಯ ಕಾವ್ಯ ಮೀಮಾಂಸೆಯನ್ನೇ ಮಾನದಂಡವಾಗಿ ಇಟ್ಟುಕೊಳ್ಳಬಾರದು? ಇಲ್ಲಿ ಬಲಪಂಥೀಯರು ಎಡಪಂಥೀಯರೆನ್ನದೆ ಎಲ್ಲರ ದೃಷ್ಟಿಕೋನಗಳಿಗೂ ಪರಿಹಾರವಿದೆ. ಅದು ತೀನಂಶ್ರೀಯವರ ಭಾರತೀಯ ಕಾವ್ಯಮೀಮಾಂಸೆಯೇ ಆಗಬೇಕು ಅನ್ನುವ ಹಠವಲ್ಲ, ಒಟ್ಟು ಭಾರತೀಯ ಮನಸ್ಸುಗಳಿಗೆ ಅನುಗುಣವಾದ ಕನ್ನಡದ್ದೇ ಕಾವ್ಯಮೀಮಾಂಸೆ ಬೇಕಾದರೂ ರಚಗೊಳ್ಳಲಿ. ಸಹಜವಾಗಿಯೇ ಇಲ್ಲಿನ ಮೂಲಧಾತುವನ್ನು ಗರ್ಭೀಕರಿಸಿಕೊಂಡಿರುವ ಒಟ್ಟು ಸಾಹಿತ್ಯ ಶ್ರೇಣಿಯಲ್ಲಿ ಭಾರತೀಯ ಚಿಂತನೆಯೇ ಹೂರಣವಾಗಿರುವಾಗ ಪಾಶ್ಚಾತ್ಯ ಶ್ವಾಸವನ್ನು ಇಲ್ಲಿಗೆ ಯಾಕೆ ತುಂಬಬೇಕು? ಆಕ್ಷೇಪ ಅಲ್ಲ, ಬಿ.ಎಂ.ಶ್ರೀ ಅವರು ಹೇಳುವಂತೆ ಅವಳ ತೊಡುಗೆ ಇವಳಿಗೆ ಇವಳ ತೊಡುಗೆ ಅವಳಿಗೆ ಇಟ್ಟು ನೋಡಲಿ, ಆದರೆ ಆತ್ಮ ಇಲ್ಲಿನದ್ದೇ ಇರಲಿ, ಯಾಕಂದ್ರೆ ಅದು ವಿಕಾಸ ಹೊಂದಿದ್ದು ಇಲ್ಲಿನ ಗಾಳಿ, ನೀರು, ಮಣ್ಣು ಹಾಗೂ ಸಂಸ್ಕೃತಿಯ ಸಾರದಿಂದ; ಇದರ ಅರ್ಥ ಹೊರಗಿನದು ಬೇಡವೆಂದಲ್ಲ, ಹೊಸ ಚಿಗುರು ಹಳೆ ಬೇರು ಎನ್ನುವಂತೆ, ಅಲ್ಲಿನ ಗೆಲ್ಲನ್ನು ತಂದು ಇಲ್ಲಿನ ಕಾಂಡಕ್ಕೆ ಕಸಿಮಾಡುವ, ಬೇರು ಇಲ್ಲಿನದ್ದೇ ಆದಾಗ ಹಳೆಯದನ್ನು ಉಳಿಸಿಕೊಂಡು ಹೊಸತೊಂದರ ಅನ್ವೇಷಣೆ ಮಾಡಿದ ಹಾಗೂ ಆಗುತ್ತದೆ. ಅದಕ್ಕೆ ಪ್ರಯತ್ನಗಳು ನಡೆಯಲಿ, ಆವಾಗ ಅದು ಆತ್ಮ ನಿರ್ಭರವೂ ಆಗುತ್ತದೆ.

✍️ರಾಜಮಣಿ ರಾಮಕುಂಜ

More articles

Latest article