



ಬಂಟ್ವಾಳ: ಸಾಂಕ್ರಾಮಿಕ ರೋಗಗಳ ತಡೆಗೆ ಜಾಗ್ರತಿಯೊಂದೇ ಪ್ರಬಲವಾದ ಮದ್ದು ಎಂದು ವೈದ್ಯಾಧಿಕಾರಿ ಡಾ| ಸತೀಶ್ ಎಂ.ಸಿ. ಅವರು ಹೇಳಿದರು. ಪುಂಜಾಲಕಟ್ಟೆ ದ.ಕ. ಜಿ.ಪಂ. ಪ್ರಾ.ಆ. ಕೇಂದ್ರ ಹಾಗೂ ಪಿಲಾತಬೆಟ್ಟು ಗ್ರಾ.ಪಂ.ನ ಆಶ್ರಯದಲ್ಲಿ ಪಿಲಾತಬೆಟ್ಟು ಗ್ರಾ.ಪಂ. ಬಳಿ ಮಲೇರಿಯಾ ಮಾಸಾಚರಣೆಯ ಜಾಗ್ರತಿ ಜಾಥಾ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು. ಮಳೆಗಾಲದಲ್ಲಿ ಸೊಳ್ಳೆಯಿಂದಾಗಿ ಮಲೇರಿಯಾ ಹಾಗೂ ಡೆಂಗ್ಯೂ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಶುಚಿಯಾಗಿಡುವ ಮೂಲಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದಾಗಿದೆ ಎಂದರು. ಸಾಂಕ್ರಾಮಿಕ ರೋಗಗಳ ವಿರುದ್ಧ ಸ್ವಚ್ಛತೆಯೊಂದಿಗೆ ಹೋರಾಡಬೇಕು. ಸಣ್ಣ-ಪುಟ್ಟ ಜ್ವರ ಬಂದಾಗ ನಿರ್ಲಕ್ಶ್ಯ ಮಾಡದೇ ಪ್ರಾ.ಆ. ಕೇಂದ್ರದಲ್ಲಿ ರಕ್ತ ಪರೀಕ್ಷೆ ಮಾಡಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮ ಸಂಯೋಜಿಸಿದ್ದ ಪ್ರಾ.ಆ. ಕೇಂದ್ರದ ಕಿರಿಯ ಆರೋಗ್ಯ ಸಹಾಯಕ ಅನ್ವರ್ ಹುಸೇನ್ ಮಾತನಾಡಿ, ಆರೋಗ್ಯ ಇಲಾಖೆಯ ಪ್ರತಿಯೊಂದು ಸೂಚನೆಗಳನ್ನು ಪಾಲಿಸುವುದರೊಂದಿಗೆ ಪ್ರತಿಯೊಬ್ಬರು ಸ್ವಯಂ ಜಾಗೃತಿ ಇರಬೇಕು ಎಂದು ಹೇಳಿದರು.
ಪಿಲಾತಬೆಟ್ಟು ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಪಿ.ಡಿ.ಓ. ರಾಜಶೇಖರ ರೈ, ಸದಸ್ಯರು ಹಾಗೂ ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ, ಪ್ರಭಾರ ಹಿರಿಯ ಆರೋಗ್ಯ ಸಹಾಯಕಿ ಭವಿತಾ ಹಾಗೂ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಉಪಸ್ಥಿತರಿದ್ದರು.
ಜಾಥಾದಲ್ಲಿ ಭಾಗವಹಿಸಿದ್ದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಮನೆ ಭೇಟಿ ನಡೆಸುವ ಮೂಲಕ ಮಲೇರಿಯಾ ಕರ ಪತ್ರವನ್ನು ಸಾರ್ವಜನಿಕರಿಗೆ ನೀಡುವ ಮೂಲಕ ಮಾಹಿತಿಯೊಂದಿಗೆ ಜಾಗೃತಿ ಮೂಡಿಸಲಾಯಿತು.





