ಕೋವಿಡ್ ಸೋಕಿತ ಎಂದೊಡನೇ ನಾಗಾಲೋಟ ತೆಗೆಯುವವರೇ ಅಧಿಕ. ಸರದಿ ಸಾಲಿನಲ್ಲಿ ಕೋವಿಡ್ ಸೋಂಕಿತನೊಬ್ಬನಿದ್ದರೆ ಆ ಸಾಲು ಅತ್ಯಂತ ಬೇಗ ಕರಗಿಹೋಗುತ್ತದೆ, ಕಾರಣ ಭಯ.
ಇತ್ತೀಚೆಗೆ ಗೆಳೆಯರೊಬ್ಬರು ಘಟನೆಯೊಂದನ್ನು ಕಳುಹಿಸಿದ್ದರು. ಅವರ ನೆರೆ ಮನೆಯ ಸುಮಾರು 30-35ರ ವಯೋಮಾನದ ತರುಣ ಮಿತ್ರ ಅವರ ಮನೆಗೆ ಬಂದು ಬೈಕ್‍ನ್ನು ಎರವಲು ಕೇಳಿದರಂತೆ. ತನ್ನ ಸುಖ ಪ್ರಯಾಣ ಮುಗಿಸಿ ಬೈಕ್ ಮರಳಿಸಲು ಬಂದ ಆ ತರುಣ ನಾನು ಹೇಳುವ ಗೆಳೆಯನನ್ನು ಧನ್ಯವಾದ ಹೇಳುತ್ತಾ ಗಟ್ಟಿಯಾಗಿ ತಬ್ಬಿ ಹಿಡಿದು ಹೊರಟರಂತೆ. ಪಕ್ಕದಲ್ಲೇ ಇದ್ದ ಮನೆಗೆ ತರುಣ ತಲುಪುತ್ತಿದ್ದಂತೆ ತನ್ನ ತಾಯಿಯನ್ನು ಕರೆದು, ಅಮ್ಮಾ, ಸ್ವಲ್ಪ ಜಾಗರೂಕತೆ ವಹಿಸಿ, ರಿಪೋರ್ಟು ಪೊಸಿಟಿವ್ ಬಂತು.” ಎಂದನಂತೆ. ಇದನ್ನು ಕೇಳಿಸಿಕೊಂಡ ನನ್ನ ಮುಗ್ಧ ಗೆಳೆಯನ ಜಂಘಾಬಲವೇ ಉಡುಗಿ ಹೋಯಿತು. ನೇರಾ ಸ್ನಾನದ ಕೋಣೆಗೆ ಹೋಗಿ ಬಾಯಿ ಸೇರಿದಂತೆ ದೇಹದ ಸಾಧ್ಯವಿರುವ ಪ್ರತೀ ಭಾಗಕ್ಕೂ ಡೆಟ್ಟಾಲ್ ಸವರಿ, ಡೆಟ್ಟಾಲ್ ಸೋಪು ಹಚ್ಚಿ ಸರಿಯಾದ ಬಿಸಿ ನೀರಿನಿಂದ ಸ್ನಾನ ಮಾಡಿದರು. ಬಟ್ಟೆಗಳಿಗೆ ಡೆಟ್ಟಾಲ್ ಹಚ್ಚಿ ಬಿಸಿ ನೀರಿನೀಂದಲೇ ತೊಳೆದರು. ಬೈಕ್ ನೀಡಿದ ನೆರವಿಗೆ “ಮಗ” ಪ್ರತ್ಯುಪಕಾರದ ಬದಲು ಪ್ರತೀಕಾರ ಮಾಡಿದನಲ್ಲಾ ಎಂದು ಕೊರಗಿದರು. ತನಗೆಲ್ಲಾದರೂ ಈ ಸೋಂಕು ಬಂದರೆ, ಬದುಕುಳಿಯದಿದ್ದರೆ ಮನೆ, ಮಡದಿ ಮತ್ತು ಮಕ್ಕಳ ಬಗ್ಗೆ ಚಿಂತೆ ಮಾಡ ತೊಡಗಿದರು. ಕೇವಲ ಅರ್ಧ ಘಂಟೆಯೊಳಗೆ ಬಹಳ ಹಗುರವಾಗಿ ಹೋದರು. ಆತ ಮತ್ತೆ ಕಾಣ ಸಿಕ್ಕಿದಾಗ ದೂರ ದೂರ ಸರಿದರು. ಇವರ ವರ್ತನೆಗೆ ಅ ತರುಣ ದಿಗಿಲಾದ. ಅವರ ವರ್ತನಾ ವ್ಯತ್ಯಾಸದ ಕಾರಣಗಳನ್ನು ಕೇಳಿದಾಗ, “ನಿನಗೆ ಪೊಸಿಟಿವ್ ಇದ್ದಾಗ ನನ್ನನ್ನು ತಬ್ಬಿ ನನ್ನ ಕುಟುಂಬ ನಾಶ ಮಾಡಿ ಬಿಟ್ಟೆಯಲ್ಲಾ”, ಎಂದು ಆತನನ್ನು ಗದರಿಸಿ ಮಾತನಾಡಿದರು. ತಕ್ಷಣವೇ ತರುಣನಿಗೆ ವಿಷಯ ಅರ್ಥವಾಗಿ ಜೋರಾಗಿ ನಗುತ್ತಾ ವಿವರಿಸಿದ, “ ನಿನ್ನೆ ನನ್ನ ಹೆಂಡತಿಯನ್ನು ಠಿಡಿegಟಿಚಿಟಿಛಿಥಿ ಖಿesಣ ಮಾಡಿಸಿದ್ದೆ. ಅವಳ ಟೆಸ್ಟ್ ರಿಪೋರ್ಟ್ “ಪೊಸಿಟಿವ್” ಎಂದು ಅಮ್ಮನಿಗೆ ಹೇಳಿದೆ. ಅವಳೀಗ ಗರ್ಭಿಣಿ.” ಎಂದು ಹೇಳಿದಾಗ ನಗಬೇಕಾದ ಸರದಿ ಗೆಳೆಯನದ್ದು. ಇಂತಹ ಘಟನೆಗಳು ಅನೇಕರಿಗಾಗಿರಬಹುದು.
ಕೋವಿಡ್‍ನಿಂದ ಪಾರಾಗಲು ನಮಗೆ ಸುರಕ್ಷಾ ಕವಚವಿದೆ. ಚಿಪ್ಪುಗಳಿರುವ ಸಮುದ್ರ ಜೀವಿಗಳ ಸುದೀರ್ಘವಾದ ಬದುಕಿನಲ್ಲಿ ಅವುಗಳ ಸುರಕ್ಷಾ ಕವಚಗಳ ಪಾತ್ರ ಬಹಳ ಪ್ರಮುಖವಾದುದು. ಉದಾಹರಣೆಗೆ ಆಮೆಯೊಂದು ನೂರಕ್ಕೂ ಅಧಿಕ ವರ್ಷಗಳ ಕಾಲ ಬದುಕಲು ಅವು ತಮ್ಮ ಗಟ್ಟಿಯಾದ ಚಿಪ್ಪುಗಳನ್ನು ಅಗತ್ಯಕಾಲದಲ್ಲಿ ಯೋಗ್ಯರೀತಿಯಲ್ಲಿ ಬಳಸುವುದೇ ಆಗಿದೆ. ಕೋವಿಡ್‍ನಿಂದ ಪಾರಾಗಲು ನಮಗೆ ಸುರಕ್ಷಾ ಕವಚವಾಗಿ ಮುಖಗೌಸುಗಳಿವೆ. ನಮ್ಮ ರಕ್ಷಣೆ ನಮ್ಮ ಜವಾಬ್ದಾರಿಯಾದುದರಿಂದ ಮನೆಯಿಂದ ಹೊರಗಡೆ ಕಾಲಿರಿಸುವುದಕ್ಕೆ ಮೊದಲು ಮಾಸ್ಕ್ ರೆಡಿಯಾಗಿರಬೇಕು. ಸರಕಾರದ ದಂಡಗಳಿಂದ ಪಾರಾಗುವ ಉದ್ದೇಶಕ್ಕೆ ಮುಖಗೌಸು ಹಿಡಿದುಕೊಂಡಿದ್ದರೆ ಸಾಲದು. ಅದನ್ನು ಅಗತ್ಯಕ್ಕೆ ತಕ್ಕಂತೆ ಧರಿಸಲೇಬೇಕು. ಬೈಕ್ ಸವಾರರಿಗೆ ಹೆಲ್ಮೆಟ್ ಇದ್ದೂ ಅಪಘಾತದಲ್ಲಿ ತಲೆಗೆ ಗಾಯವಾಗಿದೆಯೆಂದಾದರೆ ಅವರು ಹೆಲ್ಮೆಟ್ ಹಿಡಿದುಕೊಂಡಿದ್ದರು, ಆದರೆ ತಲೆಗೆ ಧರಿಸಿರಲಿಲ್ಲವೆಂದೇ ಆರ್ಥ ತಾನೇ?
ಅತೀ ಪ್ರಮುಖವಾದ ಇನ್ನೊಂದು ಸುರಕ್ಷಾ ಕವಚ ದೈಹಿಕ ಅಂತರ- ಆಲಿಂಗಸದಿರುವುದು, ಕೈಕುಲುಕದಿರುವುದು- ಗರಿಷ್ಟ ದೂರವಿರುವುದು. ಎಲ್ಲಿ ಜನರು ಸೇರಿರುತ್ತಾರೋ ಅಲ್ಲಿಗೆ ನಾವು ಹೋಗಲೇ ಬಾರದು. ವಾಹನಗಳಲ್ಲಿ, ಅಂಗಡಿಗಳಲ್ಲಿ ಹೋಟೆಲುಗಳಲ್ಲಿ ಅಥವಾ ನಾವು ಎಲ್ಲಿಗೆ ಹೋಗುವುದಿದ್ದರೂ ಅಲ್ಲಿ ಅನಗತ್ಯವಾಗಿ ಏನನ್ನೂ ಮುಟ್ಟದಿರುವುದು, ಒಂದೊಮ್ಮೆ ಮುಟ್ಟಿದರೂ ಸೋಪಿನಿಂದ ಕೈತೊಳೆಯುವುದು. ಕೈಗಳನ್ನು ಕಣ್ಣು, ಮೂಗು ಮತ್ತು ಬಾಯಿಗಳಿಗೆ ತಾಗಿಸದೇ ಇರುವ ಅಭ್ಯಾಸ ಮಾಡಿಕೊಂಡರೆ ಅದೂ ಒಂದು ಸುರಕ್ಷಾ ಕವಚವಾಗುತ್ತದೆ. ಸಂತೆ, ಜಾತ್ರೆ, ಪಬ್, ಕ್ಲಬ್, ಮಾಲ್, ಮನರಂಜನಾ ಕಾರ್ಯಕ್ರಮ ಇತ್ಯಾದಿಗಳಿಗೆ ಯಾವುದೇ ಕಾರಣಕ್ಕೂ ಹೋಗದೇ ಇರುವುದು ಸುರಕ್ಷೆ. ಗಂಭೀರ ಪರಿಸ್ಥಿತಿಯಲ್ಲವೆಂದಾದರೆ ನಾವು ಆಸ್ಪತ್ರೆಗಳನ್ನೂ ದೂರವಿರಿಸಲೇ ಬೇಕು. ನೆಂಟರು, ಬೀಗರು, ಸ್ನೇಹಿತರು ಎಂದು ಅವರ ಮನೆಗಳಿಗೆ ನಾವು ಹೋಗುವುದು, ಅವರನ್ನು ನಮ್ಮ ಮನೆಗೆ ಕರೆಯುವುದು ಕೋವಿಡಾಯಣದಲ್ಲಿ ಸಾಧುವಲ್ಲ. ದೂರದಿಂದಲೇ ನೆಂಟತನವನ್ನು ಹಿಡಿದಿಟ್ಟುಕೊಳ್ಳುವುದು ಭದ್ರವಾದ ಸುರಕ್ಷಾ ಕವಚವಾಗಿದೆ. ಮನೆಯಲ್ಲಾಗಬೇಕಾದ ಎಲ್ಲ ಕಾರ್ಯಕ್ರಮಗಳನ್ನೂ ಸಾಧ್ಯವಾದಷ್ಟು ಮುಂದುಡುವುದೂ ನಮಗೆ ಕೋವಿಡ್‍ನಿಂದ ರಕ್ಷಣೆ ಪಡೆಯಲು ಯೋಗ್ಯ ಮಾರ್ಗವಾಗಿದೆ. ನಮ್ಮೆಲ್ಲ ಪ್ರವಾಸಗಳನ್ನು ಮೊಟಕುಮಾಡಿದರೆ ಕೋವಿಡ್ ಸೋಂಕಿನ ಅಪಾಯ ಕಡಿಮೆ. ಆರಾಧನಾಲಯಗಳಿಂದ ಮತ್ತು ವಿವಿಧ ಕಛೇರಿಗಳಿಂದ ದೂರವಿರುವುದು ಅತೀ ಅಗತ್ಯವಾಗಿದೆ. ಸೋಂಕಿತನ ಸೋಂಕು ದೃಢಗೊಳ್ಳುವಷ್ಟರಲ್ಲಿ ಆತ/ ಆಕೆ ಹಲವರಿಗೆ ಸೋಂಕನ್ನು ವಿತರಿಸಿಯಾಗಿರುತ್ತದೆ ಎಂಬ ಅರಿವು ನಮಗÀಗತ್ಯ. ಹಾಗೆಂದು ಯಾರನ್ನೂ ದೂರವಿರಿಸದಿರೋಣ. ಕಾಯಿಲೆಗೊಳಗಾದವರೂ ನಮ್ಮವರೇ ಎಂದು ಅರ್ಥೈಸೋಣ, ಅವರ ಬಗ್ಗೆ ನಮ್ಮ ಗೌರವ ಸ್ಥಿರವಾಗಿರಲಿ. ಅತ ನಮಗೆ ವಿರೋಧಿಯಲ್ಲ. ಆತನಲ್ಲಿರುವ ಸೋಂಕು ಮಾತ್ರವೇ ನಮಗೆ ವೈರಿ ಎಂದು ತಿಳಿದುಕೊಳ್ಳೋಣ. ಸೋಂಕಿತನಿದ್ದಾನೆಂದು ನಾಗಾಲೋಟ ಬೇಡ. ಭಯಬೇಡ- ಜಾಗರೂಕತೆಯಷ್ಟೇ ಇರಲಿ
—ಮುಂದುವರಿಯುತ್ತದೆ.

✍️ ರಮೇಶ ಎಂ ಬಾಯಾರು ಎಂ.ಎ, ಬಿಎಡ್,
ನಿವೃತ್ತ ರಾಜ್ಯಪ್ರಶಸ್ತಿ ಪುರಸ್ಕøತ ಶಿಕ್ಷಕರು
‘ನಂದನ’ ಕೇಪು- 574243; ಮೊ-9448626093

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here