


ಪುಂಜಾಲಕಟ್ಟೆ: ಅವಿವಾಹಿತ ಅಣ್ಣ- ತಂಗಿ ಇಬ್ಬರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಗೈದ ಘಟನೆ ಸೋಮವಾರ ರಾತ್ರಿ ಬಂಟ್ವಾಳ ತಾಲೂಕಿನ ಸಂಗಬೆಟ್ಟುವಿನಲ್ಲಿ ಸಂಭವಿಸಿದೆ.
ಇಲ್ಲಿನ ನಿವಾಸಿಗಳಾದ ನೀಲಯ್ಯ ಶೆಟ್ಟಿ ಗಾರ್(42) , ಕೇಸರಿ ( 39) ಮೃತಪಟ್ಟ ದುರ್ದೈವಿಗಳು.
ಇಬ್ಬರೂ ಅನಾರೋಗ್ಯ ದಿಂದ ಬಳಲುತ್ತಿದ್ದು, ರಾತ್ರಿ ಸುಮಾರು 11 ಗಂಟೆಯ ಬಳಿಕ ತಮ್ಮ ಮನೆಯ ಕೊಠಡಿಯಲ್ಲಿ ಕೃತ್ಯ ಗೈದಿದ್ದಾರೆ. ಮನೆಯಲ್ಲಿ ನೀಲಯ್ಯ ಅವರ ಸಹೋದರ ಮತ್ತು ಅವರ ಪತ್ನಿ, ಮಗ ವಾಸವಿದ್ದು, ಮತ್ತೊಂದು ಕೊಠಡಿಯಲ್ಲಿ ಮಲಗಿದ್ದರು. ನರಳಾಟದ ಶಬ್ದ ಕೇಳಿ ಬಂದಾಗ ಘಟನೆ ತಿಳಿದು ಬಂದಿತ್ತು. ಬಳಿಕ ಸ್ಥಳೀಯರು ಸೇರಿ ಗಂಭೀರ ಗಾಯಗೊಂಡ ಇಬ್ಬರನ್ನೂ ಬಂಟ್ವಾಳ ಸರಕಾರಿ ಆಸ್ಪತ್ರೆ ಗೆ ಸಾಗಿಸಿದರಾದರೂ ಅದಾಗಲೇ ಇಬ್ಬರೂ ಮೃತಪಟ್ಟಿದ್ದರು.
ಮಾಹಿತಿ ತಿಳಿದ ಬಂಟ್ವಾಳ ಗ್ರಾಮಾಂತರ ಎಸ್.ಐ. ಪ್ರಸನ್ನ ಮತ್ತು ಸಿಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ನೀಲಯ್ಯ ಅವರು ಈ ಹಿಂದೆ ಕೈ ಮಗ್ಗ ನಡೆಸುತ್ತಿದ್ದು, ಅನಾರೋಗ್ಯ ದಿಂದ ನಿಲ್ಲಿಸಿದ್ದರು. ಕೆಲವರ್ಷಗಳಿಂದ ಇವರು ಕೆಲಸ ಮಾಡದೆ ಮನೆಯಲ್ಲಿಯೇ ಇದ್ದರು.
ಮನೆಯಿಂದ ಹೊರಗೆ ಬರುತ್ತಿರಲಿಲ್ಲ ಆದರೆ ಆದಿತ್ಯವಾರ ಮನೆಯಿಂದ ಹೊರಬಂದು ಪೇಟೆಯ ಕಡೆಗೆ ನಡೆದುಕೊಂಡು ಹೋಗಿದ್ದರು ಎಂದು ಸ್ಥಳೀಯ ರು ತಿಳಿಸಿದ್ದಾರೆ.ಮನೆಯಿಂದ ಹೊರಗಡೆ ಬಂದವರು ಔಷಧಿ ಹಾಗೂ ಪೆಟ್ರೋಲ್ ತಂದು ದಾಸ್ತಾನು ಇರಿಸಿ ಸೋಮವಾರ ತಡರಾತ್ರಿ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೇಸರಿ ಅವರು ಸುಮಾರು 30 ವರ್ಷಗಳಿಂದ ಮಾನಸಿಕ ವಾಗಿ ಖಿನ್ನತೆಗೊಳಗಾಗಿದ್ದರು ಎಂದು ಹೇಳಲಾಗಿದೆ.
ಕೆಲ ತಿಂಗಳ ಹಿಂದೆ ಇವರ ತಂದೆ ಹಾಗೂ ತಾಯಿ ಅನಾರೋಗ್ಯದಿಂದ ತೀರಿಕೊಂಡಿದ್ದರು.ಅದಾದ ಬಳಿಕ ನೀಲಯ್ಯ ಅವರು ಮಾನಸಿಕವಾಗಿ ತುಂಬಾ ನೊಂದಿದ್ದು, ಆತ್ಮಹತ್ಯೆ ಯ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತಿದೆ.
ತಂದೆತಾಯಿ ಕಳೆದುಕೊಂಡ ಬಳಿಕ ಇನ್ನು ನಮಗೆ ಯಾರು ಇದ್ದಾರೆ, ನಮ್ಮನ್ನು ಯಾರು ನೋಡಿಕೊಳ್ಳುತ್ತಾರೆ ಎಂದು ಅವರು ಹೇಳಿಕೊಂಡಿದ್ದರು ಎಂದು ಸ್ಥಳೀಯ ರು ತಿಳಿಸಿದ್ದಾರೆ.





