ಕೋವಿಡ್ ಎಲ್ಲರನ್ನು ಭಯಭೀತಗೊಳಿಸಿದೆ ಮತ್ತು ದಿಙ್ಮೂಢಗೊಳಿಸಿದೆ. ಬಹುತೇಕ ಹಿರಿಯರು ಮತ್ತು ಬಾಲಕರು ಅನ್‍ಲೋಕ್‍ಡೌನ್-1 ಜಾರಿಯಾದರೂ ಕೋವಿಡ್ ವ್ರತದಲ್ಲಿದ್ದಾರೆ. ಸರಕಾರದ ನಿರ್ದೇಶನದಂತೆ ನಿಯಮ ಪಾಲನೆಗಾಗಿ ಮನೆಯಿಂದ ಹೊರಗಡೆಗೆ ಹೋಗುವುದಿಲ್ಲ ಎನ್ನುವುದಕ್ಕಿಂತ ತಮ್ಮಿಂದಾಗಿ ಇತರರಿಗೆ ಕಾಯಲೆ ಹರಡಿದರೆ….. ಉಂಟಾಗಬಹುದಾದ ಪಾಪದ ಕಲೆ ಅಥವಾ ಕೊಳೆ ತಟ್ಟದಂತೆ ಮುನ್ನೆಚ್ಚರಿಕೆಯಾಗಿ ಈ ವ್ರತ. ಮನೆಯೇ ಮಂತ್ರಾಲಯ ಎಂಬ ದೀಕ್ಷೆಯೊಂದಿಗೆ ಪದೇ ಪದೇ ಹಸ್ತ ಶುದ್ಧಿ ಮಾಡುತ್ತಾ, ಕೋವಿಡಾಯಣ ವಿವರಿಸುತ್ತಾ, ಸಾಧ್ಯವಾದರೆ ಇ-ಪೇಪರ್‍ಗಳನ್ನು ಓದುತ್ತಾ, ಬಿಸಿ ಬಿಸಿಯಾದುದನ್ನೇ ಸೇವಿಸುತ್ತಾ ಅತ್ಯಂತ ಜಾಗೃತಿಯೊಂದಿಗೆ, ಆರೋಗ್ಯದ ಮುನ್ನೆಚ್ಚರಿಕೆಗಳೊಂದಿಗೆ ಹಾಯಾಗಿರುವುದೇ ಕೋವಿಡ್ ವ್ರತದ ದೀಕ್ಷಾ ವಿಧಾನ.
ಕೋವಿಡ್19ನ್ನು ಕೋವಿದ ಎಂದು ವ್ಯಾಖ್ಯಾನಿಸಬಹುದೇ? ಕೋವಿದ ಎಂದರೆ ಪಂಡಿತ, ವಿದ್ವಾಂಸ, ಜ್ಞಾನಿ ಅಥವಾ ಜಾಣ ಎಂದೆಲ್ಲ ಅರ್ಥೈಸಬಹುದು. ಕೋವಿಡ್ ಬಂದ ಮೇಲೆ ಆಸ್ಪತ್ರೆಗಳಿಗೆ ಹೋಗುವವರ ಸಂಖ್ಯೆಯನ್ನು ಗಮನಿಸಿದರೆ ಭಾರೀ ಇಳಿಮುಖವಿದೆ, ಹಾಗಾದರೆ ರೋಗಗಳನ್ನು ಸ್ವಯಂ ಗುಣಪಡಿಸ ಬಲ್ಲ ಜಾಣರಾಗಿ ನಾವು ಪರಿವರ್ತನೆ ಆಗಿಬಿಟ್ಟೆವೋ? ದೇವರು ದಿಂಡರು ಎಂದು ದುಂಬಾಲು ಬೀಳುತ್ತಿದ್ದ ನಾವು ಪ್ರಾರ್ಥನೆಗಾಗಿ ಮಠ ಮಂದಿರಗಳಿಗೆ ಹೋಗುವುದನ್ನು ಕಡಿಮೆ ಮಾಡಿದ್ದೇವೆ. ದೇವರನ್ನು ಕಾಣಲು ದೇವಾಲಯಗಳೇಕೆ ಎಂಬ ಜ್ಞಾನೋದಯವಾದ ಜ್ಞಾನಿಗಳಾಗಿಹೋದೆವೋ ನಾವು? ಜಾತಕ ಪಠಣ, ಅಷ್ಟಮಂಗಳ- ಸ್ವರ್ಣ ಪ್ರಶ್ನೆ, ಭವಿಷ್ಯದ ಬಗ್ಗೆ ಜ್ಯೋತಿಷ್ಯ ಚಿಂತನೆ ಯಾವುದೂ ನಮಗಿಂದು ಅಗತ್ಯವೇ ಇಲ್ಲ. ಇವೆಲ್ಲವನ್ನೂ ಮೀರಿದ್ದೇ ಜೀವನ ಎಂಬ ಪಾಂಡಿತ್ಯವನ್ನು ನಮಗೊದಗಿಸಿತೇ ಕೋವಿಡ್? ರಸ್ತೆ ಅಪಘಾತಗಳು ಅಪರೂಪವಾಗಿವೆಯೆಂದಾದರೆ ಕೋವಿಡ್ ನಮ್ಮನ್ನು ಜಾಗೃತ ಕೋವಿದರನ್ನಾಗಿ ಪರಿವರ್ತಿಸಿತೇ? ಎಲ್ಲವೂ ಬೇಕು ಬೇಕು ಎನ್ನುತ್ತಿದ್ದ ನಮಗೆ ಇಂದು ಬೇಡ ಎಂಬ ಭಾವನೆ ಒದಗಿಸಿದ್ದು ಯಾರು? ನಮ್ಮ ಕೊಳ್ಳು ಬಾಕತನ ನಮ್ಮಿಂದ ಹೇಗೆ ದೂರ ಹೋಯಿತು? ಬ್ಯೂಟಿ ಪಾರ್ಲರುಗಳು, ಹೊಟೆಲು, ಮಾಲ್, ಟಾಕೀಸ್, ಜವಳಿ ಅಂಗಡಿ, ಪಾದರಕ್ಷೆ ಅಂಗಡಿ, ಸ್ವೀಟ್ ಸ್ಟಾಲ್, ಐಸ್ ಕ್ರೀಂ ಪಾರ್ಲರ್, ಸಂಚಾರ ವ್ಯವಸ್ಥೆಗಳು ಇತ್ಯಾದುವುಗಳಿಲ್ಲದ ಜೀವನ ಬರಡಲ್ಲ ಎಂಬ ಜ್ಞಾನವನ್ನು ಕೋವಿಡ್19 ನೀಡಿದೆ ಎಂದಾದರೆ ಕೋವಿಡ್‍ನ್ನು ಕೋವಿದ ಎಂದು ಒಪ್ಪಿಕೊಳ್ಳ ಬಹುದೇ?
ಕೋವಿಡ್ ನಮಗೆ ಕಲಿಸಿದ ಪಾಠಗಳು ಅಸಂಖ್ಯ. ಮೊದಲನೆಯದಾಗಿ ಸರಳ ಬದುಕು. ಅನೇಕ ಇಲ್ಲಗಳ ನಡುವೆ ಸಂತಸದ ಜೀವನವೊಂದಿದೆ ಎಂಬ ಪಾಠವನ್ನು ಕೋವಿಡ್ ಕಲಿಸಿಕೊಟ್ಟಿದೆ. ಮನೆಯ ಕೈತೋಟದ ಉತ್ಪನ್ನಗಳೂ ಆಹಾರಕ್ಕೆ ಅತ್ಯಂತ ಪ್ರಶಸ್ತ ಎಂಬ ಪಾಠ ಕಲಿಸಿದ ಕೋವಿಡ್ ಕೈತೋಟದಲ್ಲಿ ಕೊಳೆತು ನಾರುತ್ತಿದ್ದ ನುಗ್ಗೆ, ಬಸಳೆ, ದೊಡ್ಡಪತ್ರೆ, ಹಲಸು, ಪಪ್ಪಾಯಿ, ಅನಾನಸು, ಮಾವು, ಹರಿವೆ, ಬೆಂಡೆ, ತೊಂಡೆ, ಬಾಳೆ ಹೂ ಮತ್ತು ದಿಂಡುಗಳಂತಹ ಹಣ್ಣು ಮತ್ತು ತರಕಾರಿಗಳೆಲ್ಲವೂ ಅಡುಗೆ ಮನೆಗೆ ಬರತೊಡಗಿದುವು. ಇಷ್ಟರವರೆಗೆ ನಮ್ಮ ಅಡುಗೆ ಮನೆಯು ಮಾರುಕಟ್ಟೆಗಳ ಗ್ರಾಹಕನಾಗಿದ್ದರೆ ಇಂದು ಕೈತೋಟಗಳ ಗ್ರಾಹಕನಾಗಿ ಬದಲಾವಣೆಗಳಿಗೊಳಗಾಗಿದ್ದರೆ ಅದು ಕೋವಿಡ್ ಕಲಿಸಿದ ಪಾಠ. ಕೈತೋಟಕ್ಕೆ ಹೋಗುವಷ್ಟೂ ಪುರುಸೊತ್ತಿಲ್ಲದೆ busಥಿ ಆಗಿದ್ದ ನಮಗೆ ಸಮಯವನ್ನು ಸರಿದೂಗಿಸುವ ಪಾಠವನ್ನು ಕೋವಿಡ್ ಹೇಳಿಕೊಟ್ಟಿದೆ. ಅಡುಗೆ ಮನೆಯಲ್ಲಿ ತಿಂಡಿಯೊಂದರ ತಯಾರಿಗೆ ವಸ್ತುವೊಂದು ಇಲ್ಲದೇ ಇರುವುದನ್ನು ಗಮನಿಸಿದಾಗ ಖರೀದಿಗೆ ಓಡುತ್ತಿದ್ದ ನಾವು ಆ ವಸ್ತುವಿಲ್ಲದೆಯೂ ಅದೇ ತಿಂಡಿಯನ್ನು ರುಚಿಕರವಾಗಿ ತಯಾರಿ ಮಾಡುವ ಹೊಂದಾಣ ಕೆಯನ್ನು ನಾವು ಅರ್ಥ ಮಾಡಿಕೊಂಡಿದ್ದರೆ ಅದಕ್ಕೆ ಕಾರಣ ಕೋವಿಡ್19.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡಾಯಣ ಪಠಣವಾರಂಭವಾದ ಮೇಲೆ ಒಂದೇ ಒಂದು ಕೊಲೆ ನಡೆದ ವರದಿಯು ನೆನಪಿಗೆ ಬರುವುದಿಲ್ಲ. ಯಾವುದೇ ಕೋಮು ಸಂಘರ್ಷದ ಅಶಾಂತತೆಯಿಲ್ಲ. ಪರಸ್ಪರರನ್ನು ಪ್ರೀತಿಸುವ, ಸಹಕರಿಸುವ ಉದಾರ ಹೃದಯವಂತರಾಗಿ ಕಾಣ ಸಿಕೊಂಡಿದ್ದರೆ ಕೋವಿಡ್ ಕಾರಣವಲ್ಲವೇ?

—ಮುಂದುವರಿಯುತ್ತದೆ.

ಲೇ: ರಮೇಶ ಎಂ ಬಾಯಾರು ಎಂ.ಎ, ಬಿಎಡ್,

ನಿವೃತ್ತ ರಾಜ್ಯಪ್ರಶಸ್ತಿ ಪುರಸ್ಕøತ ಶಿಕ್ಷಕರು

‘ನಂದನ’ ಕೇಪು- 574243

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here