ಬಂಟ್ವಾಳ : ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಸರ್ಕಾರದ ಸೂಚನೆಯಂತೆ ಬಂದ್ ಆಗಿದ್ದ ಚರ್ಚ್ ಗಳಲ್ಲಿ ನಡೆಯುವ ಪೂಜೆ, ಸಾಮೂಹಿಕ ಪ್ರಾರ್ಥನೆಗಳು ಇದೀಗ ಕೆಲವು ಚರ್ಚ್ ಗಳಲ್ಲಿ ಮರು ಆರಂಭಗೊಂಡಿದೆ.

ಸೂರಿಕುಮೇರುನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಸರಕಾರದ ಹಾಗೂ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ  ವಂದನೀಯ ಡಾಕ್ಟರ್ ಪೀಟರ್ ಪಾವ್ಲ್ ಸಲ್ಡಾನ್ಹಾರವರ ಆದೇಶದಂತೆ ಬಹಳ ವ್ಯವಸ್ಥಿತ ಹಾಗೂ ಶಿಸ್ತಿನಿಂದ ಮೊದಲ ಬಾರಿಗೆ ಜೂ.14 ರ ಭಾನುವಾರದಿಂದ ಬೆಳಗ್ಗೆ 8 ಗಂಟೆ, 10 ಗಂಟೆ ಮತ್ತು ಸಂಜೆ 4 ಗಂಟೆಗೆ ವಿಂಗಡಿಸಿ ದಿವ್ಯ ಬಲಿಪೂಜೆಗಳು ಪುನರಾರಂಭಗೊಂಡವು.

ಆರೋಗ್ಯ ಇಲಾಖೆಯ ಸೂಚನೆಯಂತೆ 10 ವರ್ಷದ ಕೆಳಗಿನವರಿಗೆ ಮತ್ತು 65 ವರ್ಷದ ಮೇಲ್ಪಟ್ಟವರಿಗೆ ಪೂಜೆಯಲ್ಲಿ ಭಾಗವಹಿಸಲು ಅವಕಾಶವಿರಲಿಲ್ಲ. ಮಾಸ್ಕ್ ಧರಿಸದೇ ಬಂದವರಿಗೆ ಚರ್ಚ್ ಪಾಲನಾ ಸಮಿತಿಯವರಿಂದ ಉಚಿತವಾಗಿ ಮಾಸ್ಕನ್ನು ವಿತರಿಸಲಾಯಿತು. ಸಾಮಾಜಿಕ ಅಂತರವನ್ನು ಚರ್ಚ್ ನ ಒಳಗೆ ಹಾಗೂ ಚರ್ಚ್ ಆವರಣದಲ್ಲಿ ಕಡ್ಡಾಯವಾಗಿ ಪಾಲಿಸಬೇಕಿತ್ತು. ಸೂರಿಕುಮೇರು ಬೊರಿಮಾರ್ ಸೈಂಟ್ ಜೋಸೆಫ್ ಚರ್ಚ್ ನ ಧರ್ಮಗುರುಗಳಾದ ವಂದನೀಯ ಫಾದರ್ ಗ್ರೆಗರಿ ಪಿರೇರಾರವರು ಪ್ರಾರ್ಥನೆಯಲ್ಲಿ ಭಾಗವಹಿಸಲು ಭಕ್ತರಿಗೆ ನಿಯಮಗಳ ಮಾಹಿತಿಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಚರ್ಚ್ ನ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಜರ್ ಅನ್ನು ಅಳವಡಿಸಿದ್ದು, ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಪಿರೇರಾ ಮತ್ತು ಕಾರ್ಯದರ್ಶಿ ಮೇರಿ ಡಿಸೋಜರವರು ಸ್ವತಃ ಭಕ್ತರನ್ನು ಸ್ಕ್ರೀನಿಂಗ್ ಯಂತ್ರದ ಮೂಲಕ ಪರೀಕ್ಷಿಸಿ ಚರ್ಚ್ ಪ್ರವೇಶಿಸಲು ಅನುಮತಿಯನ್ನು ನೀಡಿದರು. ಕ್ರೈಸ್ತ ಭಕ್ತಾದಿಗಳು ಕೂಡ ಧರ್ಮಗುರುಗಳು ನೇಮಿಸಿದ ಸ್ವಯಂ ಸೇವಕರಿಗೆ ಸಂಪೂರ್ಣ ಸಹಕಾರವನ್ನು ನೀಡುತ್ತಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here