


ಮಂಗಳೂರು : ಮುಂಬೈನಿಂದ ಆಗಮಿಸಿದ್ದ ಕೊರೊನಾ ಸೋಂಕು ತಗುಲಿದ್ದ ಗರ್ಭಿಣಿಗೆ ನಗರದ ಜಿಲ್ಲಾ ಕೊರೊನಾ ವೆನ್ಲಾಕ್ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
ಮಂಗಳೂರು ಸಮೀಪದ ಹಳ್ಳಿಯೊಂದರ ಮಹಿಳೆ ಸೋಮವಾರವಷ್ಟೇ ಮುಂಬೈನಿಂದ ಮಂಗಳೂರಿಗೆ ಆಗಮಿಸಿದ್ದರು. ನಿಶ್ಶಕ್ತಿಯಿಂದ ಬಳಲುತ್ತಿದ್ದ ಹಿನ್ನೆಲೆ ಆಕೆ ಮಂಗಳವಾರ ನಗರದ ಲೇಡಿಗೋಶನ್ ಆಸ್ಪತ್ರೆಗೆ ಬಂದಿದ್ದರು. ಅವರನ್ನು ತಪಾಸಣೆ ಮಾಡಿದ ಸಂದರ್ಭ ಅವರು ಮುಂಬೈನಿಂದ ಬಂದಿದ್ದಾರೆ ಎಂದು ತಿಳಿದ ವೈದ್ಯರು ಅವರನ್ನು ಆಸ್ಪತ್ರೆಯಲ್ಲೇ ಕ್ವಾರಂಟೈನ್ಗೆ ಒಳಪಡಿಸಿದ್ದರು.
ಬುಧವಾರ ಅವರ ಗಂಟಲ ದ್ರವದ ಮಾದರಿ ವರದಿಯು ಪಾಸಿಟಿವ್ ಬಂದಿದ್ದು, ಪ್ರತ್ಯೇಕ ವಾರ್ಡ್ಗೆ ಸ್ಥಳಾಂತರ ಮಾಡಲಾಗಿತ್ತು. ಗುರುವಾರ ಬೆಳಗ್ಗೆ ಹೆರಿಗೆ ನೋವು ಕಂಡು ಬಂದ ಹಿನ್ನೆಲೆ ನುರಿತ ತಜ್ಞರ ತಂಡ ಸಿಸೇರಿಯನ್ ಮೂಲಕ ಸುಸೂತ್ರ ಹೆರಿಗೆ ಮಾಡಿಸಿದ್ದಾರೆ ಎಂದು ಕೊರೊನಾ ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ತಿಳಿಸಿದ್ದಾರೆ.
ಮಗು ಆರೋಗ್ಯವಾಗಿದೆ. ತಾಯಿಗೆ ಬಿಪಿ, ದೇಹದಲ್ಲಿ ನೀರು ಕಡಿಮೆ ಇದ್ದ ಕಾರಣ ಸಿಸೇರಿಯನ್ ಹೆರಿಗೆ ಮಾಡಿಸಲಾಗಿದೆ. ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





