ಬಂಟ್ವಾಳ : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬಂಟ್ವಾಳದ ವಿದ್ಯಾಗಿರಿಯಲ್ಲಿರುವ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯ ಶಿಕ್ಷಕರು ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿದರು. ಶಾಲೆಯ ಆವರಣದಲ್ಲಿ ಐವತ್ತಕ್ಕೂ ಹೆಚ್ಚು ಔಷಧೀಯ ಸಸ್ಯಗಳನ್ನು ಬೆಳೆಸಲಾಗಿದ್ದು, ಶಿಕ್ಷಕರು ಪ್ರತೀ ಸಸ್ಯಗಳ ಮಾಹಿತಿಯನ್ನು ಪಡೆದು ಅವುಗಳಲ್ಲಿರುವ ಔಷಧೀಯ ಗುಣಗಳನ್ನು ಇತರರೊಂದಿಗೆ ಹಂಚಿಕೊಂಡರು. ನಿಸ್ವಾರ್ಥಿಯಾಗಿ ಪರಿಸರ ಸಂರಕ್ಷಣೆಗೆ ತಮ್ಮನ್ನು ಮುಡಿಪಾಗಿ ಇಡುವುದಾಗಿ ಎಲ್ಲ ಶಿಕ್ಷಕರು ಶಾಲಾ ಪ್ರಾಂಶುಪಾಲರ ನೇತೃತ್ವದಲ್ಲಿ ಪ್ರತಿಜ್ಞೆ ಕೈಗೊಂಡರು. ಗೈಡ್ಸ್ ಶಿಕ್ಷಕಿ ಕೇಶವತಿ ಪ್ರತಿಜ್ಞಾವಿಧಿ ನೆರವೇರಿಸಿದರು.

ಸಭಾ ಕಾರ್ಯಕ್ರಮದಲ್ಲಿ ಚಿತ್ರಕಲಾ ಶಿಕ್ಷಕ ಹರೀಶ್ ಹಾಗೂ ಯೋಗಿನಿ ತುಳಸಿ, ನೆಲ್ಲಿ, ನೆಗ್ಗಿನ ಗಿಡ, ತುಂಬೆ, ಕಹಿಬೇವು, ಆಡುಸೋಗೆ, ಪುನರ್ಪುಳಿ, ಅಮೃತಬಳ್ಳಿ, ಉತ್ತರಾಣಿ, ಮುಟ್ಟಿದರೆಮುನಿ ಮುಂತಾದ ಸಸ್ಯಗಳನ್ನು ಔಷಧೀಯವಾಗಿ ಬಳಸುವ ರೀತಿಯನ್ನು ವಿವರಿಸಿದರು. ಪರಿಸರದ ಕುರಿತಾದ ಲೇಖನ, ಘೋಷವಾಕ್ಯ, ಪರಿಸರಗೀತೆ, ಪ್ರಹಸನ, ನೃತ್ಯ ಹಾಗೂ ಸ್ವರಚಿತ ಕವನ ವಾಚನಗಳನ್ನು ಶಿಕ್ಷಕರು ಪ್ರಸ್ತುತಪಡಿಸಿದರು.

ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಶಾಲಾ ಪ್ರಾಂಶುಪಾಲೆ ರಮಾಶಂಕರ್, ಪರಿಸರದ ಸಮತೋಲನವನ್ನು ಕಾಪಾಡಲು ಜೈವಿಕ ವೈವಿಧ್ಯತೆಯು ಅಗತ್ಯವಾಗಿದೆ. ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವಿಯನ್ನು ಪ್ರೀತಿಸಿ, ಪೋಷಿಸಲು ಕಲಿಯಬೇಕು. ಬಸವಣ್ಣನವರ ಸಂದೇಶದಂತೆ ಎಲ್ಲರಲ್ಲೂ ದಯೆ ತೋರಬೇಕಾಗಿದೆ. ಸ್ವಾರ್ಥವನ್ನು ತ್ಯಜಿಸಿ ಪರಿಸರ ಉಳಿಸಿ ಎಂದು ಹೇಳಿದರು.

ಶಿಕ್ಷಕ–ರಕ್ಷಕ ಸಂಘದ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ ಮಾತನಾಡಿ, ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಕಾರ್ಯಕ್ರಮದುದ್ದಕ್ಕೂ ಎಲ್ಲರೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡರು. ಅಕ್ಷಿತಾ ಹಾಗೂ ಶ್ರುತಿಕಾ ನಿರೂಪಿಸಿದರು. ಜೂಲಿಯಾನಾ ಡಿ’ಸೋಜ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here