ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಬುದ್ಧಿವಂತರ, ಸಹೃದಯಿ, ಕಷ್ಟಕ್ಕೆ ಸ್ಪಂದಿಸುವ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಪ್ರಸಿದ್ಧಿ ಪಡೆದಿರುವ ಜಿಲ್ಲೆ. ಕಳೆದ 3 ತಿಂಗಳಿಂದ ನಮ್ಮ ಜನರು ದೇಶ-ವಿದೇಶಗಳಲ್ಲಿ ಸಿಲುಕಿ ತೊಂದರೆಗೆ ಒಳಗಾಗಿದ್ದಾರೆ. ಕೆಲವು ಜನ ಕೆಲಸ ಕಳೆದುಕೊಂಡು, ಇನ್ನು ಕೆಲವರು ಕೊರೋನ ವ್ಯಾಪಿಸುತ್ತಿರುವಾಗ ನಮ್ಮ ಊರಲ್ಲಿ ಹೆಚ್ಚಿನ ರಕ್ಷಣೆ ಸಿಗಬಹುದೆಂಬ ಆಶಯದಿಂದ ತಮ್ಮ ಮನೆಗೆ (ತವರು ಮನೆಗೆ) ಮರಳಿದ್ದಾರೆ. ಇನ್ನಷ್ಟು ಜನರು ಬರಲು ತಯಾರಿ ನಡೆಸುತ್ತಿದ್ದಾರೆ. ಕಳೆದ 3 ತಿಂಗಳಿಂದ ಕೆಲಸವಿಲ್ಲದೆ ಕೈಯಲ್ಲಿ ಇದ್ದ ಹಣವನ್ನು ಕಳೆದುಕೊಂಡು ಸಮಸ್ಯೆಯಲ್ಲಿದ್ದಾರೆ.

ಮುಂಬೈಯಲ್ಲಿನ ವ್ಯವಸ್ಥೆ ಮತ್ತೆ ಸಹಜತೆಗೆ ಮರಳಲು ತುಂಬಾ ಸಮಯ ಹಿಡಿಯಬಹುದು. ಈ ಸಂದರ್ಭದಲ್ಲಿ ಅವರ ಮನಸ್ಥಿತಿ  ಹೇಗಿರಬಹುದು? ನಾವು ಅರ್ಥ ಮಾಡಿಕೊಂಡಿದ್ದೇವೆಯೇ ! ಊರಿಗೆ ಬರುತ್ತಿರುವ ಆ ನಮ್ಮ ಬಂಧುಗಳನ್ನು ಬರುವುದು ಬೇಡ ಅನ್ನುವುದು ಸರಿಯೇ? ನಮಗೆ ಆ ಹಕ್ಕು ಇದೆಯೇ ? ಅವರು ಬರುತ್ತಿರುವುದು ಅವರ ಮನೆಗೆ. ಇಂದಲ್ಲ ನಾಳೆ ಬರಲೇಬೇಕಾದೆಡೆಗೆ!  ಆ ನಮ್ಮ ಸಹೋದರ – ಸಹೋದರಿಯರನ್ನು ಅಸ್ಪೃಶ್ಯ ಮನೋಭಾವದಿಂದ ನೋಡುವುದು ಸರಿಯಲ್ಲ. ಅವರು ಸರಕಾರದ ಸೂಚನೆಗಳನ್ನು ಪಾಲಿಸಿಕೊಂಡೇ ಬರುತ್ತಾರೆ. ಇಲ್ಲೂ ಅದೇ ರೀತಿ ಪಾಲಿಸುವಂತೆ ನೋಡಿಕೊಳ್ಳಬೇಕಾಗಿದೆ ಅಷ್ಟೇ..

ನಿಮಗೆಲ್ಲಾ ತಿಳಿದಿದೆ ಇಲ್ಲಿಯ ಜನ ಮುಂಬೈಗೆ ಹೋಗಿ ಅಲ್ಲಿ ಆ ಮಹಾವಾಣಿಜ್ಯ ನಗರದಲ್ಲಿ ಅಥವಾ ಇಡೀ ಮಹಾರಾಷ್ಟ್ರದಲ್ಲಿ ಸಾಮಾಜಿಕ, ಧಾರ್ಮಿಕ, ರಾಜಕೀಯ, ಶೈಕ್ಷಣಿಕ, ವೈದ್ಯಕೀಯ, ಚಲನಚಿತ್ರ ರಂಗದಲ್ಲಿ ಅವರು ರಾರಾಜಿಸಿ ನಮ್ಮ ಜಿಲ್ಲೆಗೂ ಗೌರವ ತಂದಿತ್ತಿದ್ದಾರೆ. ಇಲ್ಲಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ನಮ್ಮ ಉಭಯ ಜಿಲ್ಲೆಗಳ ಎಲ್ಲಾ ಕ್ಷೇತ್ರಗಳ ಚಟುವಟಿಕೆಗೆ ಎಲ್ಲಾ ರೀತಿಯ ಬೆಂಬಲವನ್ನು ನೀಡಿದವರು ಅವರೇ. ಒಂದು ಅಂದಾಜಿನಂತೆ ಜಿಲ್ಲೆಯಲ್ಲಿ ನಡೆಯುವ ಬ್ರಹ್ಮಕಲಶ, ಜೀರ್ಣೋದ್ಧಾರ, ಗುಡಿ, ಗೋಪುರಗಳ ಕಾರ್ಯಗಳಿಗಾಗಿ ಪ್ರತಿ ವರ್ಷ ನೂರಾರು ಕೋಟಿ ಅವರು ದುಡಿದ ಹಣವನ್ನು ನೀಡಿದ್ದಾರೆ.  ಇದರಿಂದ ಇಲ್ಲಿಯ ನಮ್ಮ ಎಲ್ಲ ರೀತಿಯ ಜನಜೀವನ ಚೆನ್ನಾಗಿ ನಡೆದುಕೊಂಡು ಬಂದಿದೆ. ಬಹಳಷ್ಟು ಉದ್ಯೋಗ ಸೃಷ್ಟಿಯಾಗಿದೆ ಇದರಿಂದ ನಮ್ಮ ಕುಟುಂಬಗಳೂ ಸಶಕ್ತವಾಗಿದೆ.

ಆದರೆ ಈ ಬಾರಿ ನಾವು ನಮ್ಮ ಮನುಷ್ಯತ್ವವನ್ನು ಕಳೆದುಕೊಂಡಿದ್ದೇವೇಯೇ..? ಉತ್ತರ ಪ್ರದೇಶಕ್ಕೆ ಎಲ್ಲ ರಾಜ್ಯಗಳಿಂದಲೂ ಜನ ಪ್ರವಾಹದೋಪಾದಿಯಂತೆ ಬರುತ್ತಿದ್ದಾರೆ. ಈ ಲಕ್ಷಾಂತರ ಜನ (ಮಹಾರಾಷ್ಟ್ರವೂ ಸೇರಿ) ಬಂದಾಗಲೆಲ್ಲಾ ಆ ಯೋಗಿ ಸಂತೋಷದಿಂದ ತನ್ನೆರಡೂ ಕೈಗಳಿಂದ ಅವರನ್ನು ಸ್ವಾಗತಿಸುತ್ತಿದ್ದರೆ, ನಾವು ಕೇವಲ ಭೋಗಿಗಳಂತೆ ಇದ್ದೇವೆ ಎಂದು ಅನಿಸುತ್ತಿಲ್ಲವೇ?  ದಯಮಾಡಿ ನೋವು ದುಃಖದಲ್ಲಿರುವ ನಮ್ಮವರೇ ಆಗಿರುವ ಆ ಬಂಧುಗಳ ಬಗ್ಗೆ ಕೆಟ್ಟದಾಗಿ ಮಾತನಾಡದಿರೋಣ. ಅವರ ಜೊತೆ ಕೀಳಾಗಿ ವರ್ತಿಸದಿರೋಣ.

ಈ ಜಿಲ್ಲೆಯ ಜನರು ಸಹೃದಯಿಗಳು, ಕಷ್ಟಕ್ಕೆ ಸ್ಪಂದಿಸುವವರು, ಬುದ್ಧಿವಂತರು ಎಂಬುದನ್ನು ತೋರಿಸಲು ದೇವರೇ ಕೊಟ್ಟ ಅವಕಾಶವೆಂದು ಭಾವಿಸೋಣ ಎಂದು ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here