ಮಂಗಳೂರು: ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಜೂ. 10 ರಿಂದ ಸಾರ್ವಜನಿಕ ವೀಕ್ಷಣೆಗೆ ಲಭ್ಯ ಎಂದು ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆ ಹೊರಡಿಸಿದ್ದಾರೆ.

ಕೋವಿಡ್-19 ನಿಯಂತ್ರಣದ ಹಿನ್ನೆಲೆ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಎಲ್ಲಾ ವಿಭಾಗಗಳನ್ನು ಕಳೆದ ಮೂರು ತಿಂಗಳಿಂದ ಮುಚ್ಚಲಾಗಿದ್ದು, ಈಗ ಸರ್ಕಾರದ ಆದೇಶ ಅನುಸರಿಸಿ ಕೋವಿಡ್-19 ನಿಯಂತ್ರಣ ಮಾರ್ಗಸೂಚಿಯ ಎಲ್ಲಾ ಸೂಚನೆಗಳನ್ನು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಾಲಕಾಲಕ್ಕೆ ನೀಡುವ ಮಾರ್ಗಸೂಚಿ, ಎಸ್‍ಒಪಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತುಗೊಳಪಟ್ಟು ಜೂನ್ 10 ರಿಂದ ಬೆಳಿಗ್ಗೆ 9.30 ರಿಂದ ಸಂಜೆ 5 ಗಂಟೆಯವರೆಗೆ ಜೈವಿಕ ಉದ್ಯಾನ, ಲೇಕ್ ಗಾರ್ಡನ್, ಸಂಸ್ಕೃತಿ ಗ್ರಾಮ, ಆರ್ಬೋರೇಟಮ್ ಮತ್ತು ಗುತ್ತು ಮನೆಯ ಆಕರ್ಷಣೆಗಳನ್ನು ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರಾದೇಶಿಕ ವಿ.ಜ್ಞಾನ ಕೇಂದ್ರ ಮತ್ತು ತಾರಾಲಯವನ್ನು ಈಗ ತೆರೆಯದೆ ಮುಂದಿನ ದಿನಗಳಲ್ಲಿ ಸರ್ಕಾರದ ಆದೇಶವನ್ನು ಅನುಸರಿಸಿ ತೆರೆಯಲಾಗುತ್ತದೆ. ಪ್ರತೀ ಸೋಮವಾರ ವಾರದ ರಜೆ ಇರುತ್ತದೆ.
ಸಾರ್ವಜನಿಕರು ಪಿಲಿಕುಳ ನಿಸರ್ಗಧಾಮದ ಆಕರ್ಷಣೆಗಳನ್ನು ವೀಕ್ಷಿಸಲು ಭೇಟಿ ನೀಡುವ ಸಮಯದಲ್ಲಿ ಈ ಪಾಲಿಸಬೇಕಾದ ಸೂಚನೆಗಳು ಇಂತಿವೆ:-

ಎಲ್ಲಾ ಸಂದರ್ಭಗಳಲ್ಲಿ ಕನಿಷ್ಠ 6 ಅಡಿ ಭೌತಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಸಂದರ್ಶಕರು ಮುಖಗವಸನ್ನು (ಮಾಸ್ಕ್) ಧರಿಸಲೇಬೇಕು. ಧರಿಸದಿದ್ದವರಿಗೆ ಪ್ರವೇಶವಿರುವುದಿಲ್ಲ. ಎಲ್ಲಾ ಸಂದರ್ಶಕರನ್ನು ಥರ್ಮಲ್ ಸ್ಕ್ಯಾನಿಂಗ್ ಮೂಲಕ ತಪಾಸಣೆ ಮಾಡಲಾಗುತ್ತದೆ. ಸಂದರ್ಶಕರ ದೇಹದ ಉಷ್ಣತೆಯು ಮಿತಿಗಿಂತ ಹೆಚ್ಚಿದ್ದರೆ ಅಂತಹ ವ್ಯಕ್ತಿಗಳಿಗೆ ಪ್ರವೇಶವನ್ನು ನಿರಾಕರಿಸಲಾಗುತ್ತದೆ. ಯಾವುದೇ ಸಂದರ್ಶಕರಿಗೆ ಜ್ವರ, ಕೆಮ್ಮು, ಶೀತ, ಗಂಟಲುನೋವು ಅಥವಾ ಉಸಿರಾಟದ ತೊಂದರೆ ಇದ್ದರೆ ಅಂತಹ ವ್ಯಕ್ತಿಗಳಿಗೆ ಪ್ರವೇಶವನ್ನು ನಿರಾಕರಿಸಲಾಗುತ್ತದೆ. ಲೇಕ್‍ನಲ್ಲಿ ಮಕ್ಕಳ ಆಟಕ್ಕೆ ಅವಕಾಶವಿರುವುದಿಲ್ಲ ಎಂದು ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here