


ಬೆಂಗಳೂರು: ಖಾಸಗಿ ಆಸ್ಪತ್ರೆಗಳು ಕೊರೊನಾ ಹೆಸರಿನಲ್ಲಿ ದಂಧೆ ಮಾಡುವುದಕ್ಕೆ ಸರ್ಕಾರ ಯಾವತ್ತೂ ಬಿಡಲ್ಲಾ. ಖಾಸಗಿ ಅಸ್ಪತ್ರೆಯ ವಿರುದ್ದ ಒಂದು ಸಣ್ಣ ದೂರು ಬಂದರೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಎಚ್ಚರಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ ದರದಲ್ಲೇ ಚಿಕಿತ್ಸೆ ನೀಡಬೇಕು. ಒಂದು ವೇಳೆ ಹೆಚ್ಚು ಹಣ ವಸೂಲಿ ಮಾಡುವುದು ಕಂಡುಬಂದರೆ ಅಂತಹ ಖಾಸಗಿ ಆಸ್ಪತ್ರೆಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕೊರೊನಾಕ್ಕಾಗಿ ನಿಗದಿಪಡಿಸಲಾದ ಸರ್ಕಾರಿ ಆಸ್ಪತ್ರೆಗಳು ಇನ್ನೂ ಖಾಲಿ ಇವೆ, ಒಂದು ವೇಳೆ ಅವು ತುಂಬಿ ಹೋದರೂ ವೈದ್ಯಕೀಯ ಆಸ್ಪತ್ರೆಗಳು ಇವೆ, ಇವುಗಳ ಜೊತೆಗೆ ಫೀಲ್ಡ್ ಆಸ್ಪತ್ರೆ ವ್ಯವಸ್ಥೆ ಸಹ ಮಾಡಲಾಗಿದೆ. ಹೀಗಿದ್ದರೂ ಕೆಲವರು ಮಾಹಿತಿ ಕೊರತೆಯಿಂದಲೋ ಅಥವಾ ಗೊತ್ತಾಗಬಾರದೆಂದು ಉದ್ದೇಶಪೂರ್ವಕವಾಗಿ ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದಾರೆ. ಅವರಿಂದ ಖಾಸಗಿಯವರು ಹೆಚ್ಚು ಶುಲ್ಕವನ್ನು ಕೇಳುತ್ತಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ ಎಂದರು.
ಸರ್ಕಾರ ನಿಗಧಿಪಡಿಸಿದ್ದ ಶುಲ್ಕದಷ್ಟು ಮಾತ್ರ ಆಸ್ಪತ್ರೆಗಳು ತೆಗೆದುಕೊಳ್ಳಬೇಕು. ಅದಕ್ಕಿಂತ ಹೆಚ್ಚು ಶುಲ್ಕ ತೆಗೆದುಕೊಂಡರೆ ಕ್ರಮ ಕೈಗೊಳ್ಳತ್ತೇವೆ ಎಂದರು. ಕೋವಿಡ್ ಸಂಕಷ್ಟದ ಸಮಯದಲ್ಲಿ ಸರ್ಕಾರಿ ಹಾಗೂ ಖಾಸಗಿ ಅಸ್ಪತ್ರೆ ಸಮವಾಗಿ ಸೇವೆ ಮಾಡಬೇಕಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು.





