Tuesday, October 17, 2023

ಸಂಕಷ್ಟದಲ್ಲಿದ್ದ ಕೇರಳದ ವಿದ್ಯಾರ್ಥಿನಿಯರಿಗೆ ತಮ್ಮ ಮನೆಯನ್ನೇ ಬಿಟ್ಟುಕೊಟ್ಟ ಬದ್ರುದ್ದೀನ್ : ತಡವಾಗಿ ಬೆಳಕಿಗೆ ಬಂದ ಲಾಕ್ ಡೌನ್ ಸಂದರ್ಭದ ಅಪರೂಪದ ಸೇವೆ

Must read

ಬಂಟ್ವಾಳ: ಕೋವಿಡ್ – 19 ವೈರಸ್ ಹರಡುವುದನ್ನು ನಿಯಂತ್ರಿಸಲು ಲಾಕ್ ಡೌನ್ ಜಾರಿಯಲ್ಲಿದ್ದ ಸಂದರ್ಭ ಮಂಗಳೂರಿನಲ್ಲಿ ತೀವ್ರ ಸಂಕಷ್ಟಕ್ಕೆ ಒಳಗಾದ ಕೇರಳದ ಮೂವರು ವಿದ್ಯಾರ್ಥಿನಿಯರ ವಾಸಕ್ಕೆ ತನ್ನ ಮನೆಯನ್ನೇ ಬಿಟ್ಟುಕೊಟ್ಟ ಬದ್ರುದ್ದೀನ್ ಎಂಬವರ ಅಪರೂಪದ ಮಾನವೀಯ ಸೇವೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

ಕೇರಳದ ಆದಿರಾ, ನಿಲೋಫರ್, ಸೋನಿಯಾ ಎಂಬವರೇ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದ ಮೂವರು ವಿದ್ಯಾರ್ಥಿನಿಯರು. ಈ ವಿದ್ಯಾರ್ಥಿನಿಯರಿಗೆ ತನ್ನ ಮನೆಯನ್ನೇ ಬಿಟ್ಟುಕೊಟ್ಟವರು ಬಂಟ್ವಾಳ ತಾಲೂಕಿನ ಕಲಾಯಿ ನಿವಾಸಿ ಬದ್ರುದ್ದೀನ್ ಎಂಬವರು.

ಕೇರಳದ ತ್ರಿಶೂರ್, ಪಾಲಕ್ಕಾಡ್, ಕೋಯಿಕ್ಕೋಡ್ ಜಿಲ್ಲೆಯ ನಿವಾಸಿಗಳಾದ ಈ ವಿದ್ಯಾರ್ಥಿನಿಯರು ಮಂಗಳೂರಿನ ಬಲ್ಲಾಳ್ ಬಾಗ್ ನ ಖಾಸಗಿ ಕಾಲೇಜು ಒಂದರಲ್ಲಿ ಫಿಝಿಯೊಥೆರಪಿ ವ್ಯಾಸಾಂಗ ಮಾಡುತ್ತಿದ್ದರು. ಕಾಲೇಜು ಸಮೀಪದ ಎಂಪೈರ್ ಮಾಲ್ ಹಿಂಬದಿಯ ಪಿ.ಜಿ. ಒಂದರಲ್ಲಿ ತಂಗಿದ್ದ ಇವರಿಗೆ ಲಾಕ್ ಡೌನ್ ಸಂದರ್ಭದಲ್ಲಿ ಊಟ, ತಿಂಡಿಯ ಸಮಸ್ಯೆಯೊಂದಿಗೆ ಪಿ.ಜಿ.ಯನ್ನೂ ಖಾಲಿ ಮಾಡಬೇಕಾದ ಪರಿಸ್ಥಿತಿ ಬಂದಿತ್ತು.

ಈ ಮೂವರು ವಿದ್ಯಾರ್ಥಿನಿಯರು ತಮ್ಮ ಸಂಕಷ್ಟವನ್ನು ಮನೆಯವರಿಗೆ ತಿಳಿಸಿದ್ದರು. ಆ ಪೈಕಿ ಓರ್ವ ವಿದ್ಯಾರ್ಥಿನಿಯ ತಂದೆ ತ್ರಿಶೂರು ಎಸ್.ಡಿ.ಪಿ.ಐ.‌ ನಾಯಕರ ಮೂಲಕ ಮಂಗಳೂರು ಎಸ್.ಡಿ.ಪಿ.ಐ. ನಾಯಕರನ್ನು ಸಂಪರ್ಕಿಸಿ ವಿದ್ಯಾರ್ಥಿನಿಯರ ಸಮಸ್ಯೆಯನ್ನು ತಿಳಿಸಿದ್ದರು. ಮಂಗಳೂರು ಎಸ್.ಡಿ.ಪಿ.ಐ.‌ ನಾಯಕರ ಸೂಚನೆಯಂತೆ ಎಸ್.ಡಿ.ಪಿ.ಐ. ಕಾರ್ಯಕರ್ತ ಬದ್ರುದ್ದೀನ್ ಅವರು ವಿದ್ಯಾರ್ಥಿನಿಯರನ್ನು ಸಂಪರ್ಕಿಸಿ ನೆರವಿನ ಹಸ್ತ ಚಾಚಿದರು.

ಮ‌ೂಲತಃ ಕಲಾಯಿ ನಿವಾಸಿಯಾದ ಬದ್ರುದ್ದೀನ್ ಪ್ರಸಕ್ತ ಮಂಗಳೂರು ಕುದ್ರೋಳಿಯ ಜಾಮಾ ಮಸೀದಿ (ಜೋಡು ಪಳ್ಳಿ) ಬಳಿ ಬಾಡಿಗೆ ಮನೆಯೊಂದರಲ್ಲಿ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯೊಂದಿಗೆ ವಾಸವಿದ್ದಾರೆ.‌ ಈ ಮನೆಯನ್ನು ವಿದ್ಯಾರ್ಥಿನಿಯರಿಗೆ ಬಿಟ್ಟುಕೊಟ್ಟ ಬದ್ರುದ್ದೀನ್ ಅವರು, ತಾನು, ತನ್ನ ಪತ್ನಿ, ಮಕ್ಕಳು ಕುದ್ರೋಳಿ ಅಳಕೆಯಲ್ಲಿರುವ ಅತ್ತೆ ಮನೆಗೆ ಹೋಗಿ ಲಾಕ್ ಡೌನ್ ಮುಗಿಯುವ ವರೆಗೆ ಅಲ್ಲಿಯೇ ತಂಗಿದ್ದರು.

ಮೂರನೇ ಹಂತದ ಲಾಕ್ ಡೌನ್ ಮುಕ್ತಾಯದ ಬಳಿಕ ಆನ್ ಲೈನ್ ನಲ್ಲಿ ಪಾಸ್ ಪಡೆದು ವಿದ್ಯಾರ್ಥಿನಿಯರನ್ನು ಕೇರಳಕ್ಕೆ ಕಳುಹಿಸುವ ಎಲ್ಲಾ ವ್ಯವಸ್ಥೆಯನ್ನು ಬದ್ರುದ್ದೀನ್ ಮಾಡಿದ್ದರು.‌ ವಿದ್ಯಾರ್ಥಿನಿಯರನ್ನು ಕೇರಳ – ಕರ್ನಾಟಕ ಗಡಿಯಾದ ತಲಪಾಡಿಗೆ ಖುದ್ದು ಕರೆದುಕೊಂಡು ಹೋಗಿ ಬೀಳ್ಕೊಡುವ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ತೆಗೆದ ಪೋಟೊವನ್ನು ಬದ್ರುದ್ದೀನ್ ಅವರು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದು ಬದ್ರುದ್ದೀನ್ ಅವರ ಅಪರೂಪದ ಸೇವೆಗೆ ಪ್ರಶಂಸೆ ವ್ಯಕ್ತವಾಗಿದೆ.

More articles

Latest article