Wednesday, October 18, 2023

ಕಾಯಕಲ್ಪಕ್ಕೆ ಕಾಯುತ್ತಿದೆ ಶಿರ್ಲಾಲ್ ನ ದೈವನಿರ್ಮಿತ ದೇವಸ್ಥಾನ: 400 ವರ್ಷಕ್ಕೂ ಪುರಾತನ ಈ ಮಹಾಲಿಂಗೇಶ್ವರ ದೇವಸ್ಥಾನ

Must read

ಬೆಳ್ತಂಗಡಿ: ಮಾನವನಿಂದಲೇ ರೂಪುಗೊಂಡಿರುವ ಅನೇಕ ದೇವಾಲಯಗಳ‌ ನಡುವೆ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಹುರುಂಬಿದೊಟ್ಟು ಎಂಬಲ್ಲಿ‌ ಸ್ವತಃ ಕಲ್ಕುಡ ದೈವ ಸೃಷ್ಟಿಯದು ಎನ್ನಲಾದ 400 ವರ್ಷಕ್ಕೂ ಹಳೆಯ ದೇವಸ್ಥಾನವು ಕಾಯಕಲ್ಪಕ್ಕಾಗಿ ಕಾಯುತ್ತಿದೆ.

ಶ್ರೀ ಮಹಾಲಿಂಗೇಶ್ವರ ದೇವರು ನೆಲೆಸಿರುವ ಈ ದೇವಾಲಯದಲ್ಲಿ ದೇವರ ಆರಾಧನೆಯ ಜೊತೆಗೆ ಸಿರಿಗಳ‌ ಆರಾಧನೆಯು ನಡೆಯುತ್ತದೆ. ಕ್ಷೇಮಕಲ್ಲ ಪಂಜುರ್ಲಿ, ಕಲ್ಕುಡ,ಕೊಡಮಣಿತ್ತಾಯ, ರಕ್ತೇಶ್ವರಿ, ಮೈಸಂದಾಯ,ಸಿರಿ, ಸಿರಿಕುಮಾರ, ಹಾಗೂ ಹೊರದೈವಗಳಾದ ಕಲ್ಲುರ್ಟಿ, ಗುಳಿಗ ಈ ಎಲ್ಲಾ ದೈವಗಳು ಪೂಜಿಸಲ್ಪಡುತ್ತಿರುವುದು ವಿಶೇಷವೆನ್ನಿಸಿದೆ.

ಪ್ರಮಾಣದ ಕಲ್ಲು ಇಲ್ಲಿತ್ತು..!

ಪುರಾತನ ದೇವಾಲಯಗಳಲ್ಲಿ ಮನದ ಹರಕೆಗಳು ನೆರವೇರುತ್ತವೆ ಎಂಬ ನಂಬಿಕೆಯ ಜೊತೆಗೆ ನ್ಯಾಯ ಸಂಧಾನದ ಕ್ಷೇತ್ರದ ಪರಿಕಲ್ಪನೆಯೂ ಇತ್ತು. ಈ ದೇವಸ್ಥಾನದಲ್ಲೂ ಹಿಂದೆ ಪ್ರಮಾಣದ ಕಲ್ಲು ಇತ್ತು ಎಂಬ ನಂಬಿಕೆ ಇದೆ. ಆ ಕಲ್ಲಿನ ಬಳಿ‌ ಸುಳ್ಳು ಹೇಳುವಂತಿರಲಿಲ್ಲ ಹಾಗಾಗಿ ಎಲ್ಲರೂ ಸತ್ಯವನ್ನು ನುಡಿಯುತಿದ್ದರು. ಇದು ಆ ಊರಿನ‌ ನ್ಯಾಯ ತೀರ್ಮಾನಕ್ಕೂ ಆಸರೆಯಾಗಿತ್ತು. ಕಾಲಕ್ರಮೇಣದ ಆಧುನಿಕ ಬೆಳವಣಿಗೆಯಲ್ಲಿ‌ ಆ ಪ್ರಮಾಣದ ಕಲ್ಲು ಅದೃಶ್ಯವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇಲ್ಲಿನ ಬಂಡೆ‌ ಕಲ್ಲಿನ ಮಧ್ಯದಲ್ಲಿ 15 ಅಡಿ ಬಾವಿ ಇದ್ದು ಯಾವತ್ತೂ ನೀರು ಬತ್ತುತ್ತಿರಲಿಲ್ಲ‌, ಅದರೆ ಬೋರ್ ವೆಲ್ ಗಳಿಂದ ಅದಕ್ಕೂ ಅಡ್ಡಿಯಾಗಿದೆ ಎನ್ನುವುದು ಇಲ್ಲಿನವರ ವಿಷಾಧದ ನುಡಿ.

ಇಲ್ಲಿನ ಕಟ್ಟೆಯೊಂದು ಅಬ್ಬಗದಾರಗ ಚೆನ್ನೆಮಣೆ ಆಡುವಂತಹ ಜಾಗವೆಂದು ಹೇಳಲಾಗಿದೆ. ಇಲ್ಲಿ ಮೊದಲು ಚೆನ್ನೆಮಣೆ ಆಟ ಚಾಲ್ತಿಯಲ್ಲಿರಲಿಲ್ಲವಂತೆ, ಅಬ್ಬಗದಾರರು ಊರಿನ ಇಬ್ಬರು ಮಹಿಳೆಯರ ಮೈಯಲ್ಲಿ ಬಂದು ಚೆನ್ನೆಮಣೆ ಆಟ ಆಡಿಸಬೇಕು ಎಂದು ನುಡಿದಿದ್ದ ಕಾರಣ ಪ್ರತಿವರ್ಷ ಈ ಕಟ್ಟೆಯಲ್ಲಿ ಚೆನ್ನೆಮಣೆ ಆಟವನ್ನು ಆಡಿಸಲಾಗುತ್ತದೆ. ಚಾವಣಿ ಮೇಲೆ ಹಾಸಿರುವ ಹಂಚು ಹಾಗು ಎದುರು ಹಾಸಿರುವ ಶೀಟುಗಳನ್ನು ಬಿಟ್ಟರೆ ಮೂರ್ತಿಗಳು ದೇವಾಲಯಗಳು ಕಲ್ಕುಡನ ಸೃಷ್ಟಿಯಾಗಿದೆ ಎಂಬುದು ಹಿರಿಯರು ಹೇಳಿದ ಮಾತು.

ತಿಂಗಳಲ್ಲಿ ಮೂರು ಪೂಜೆ, ವಾರ್ಷಿಕ ಜಾತ್ರೆ..

ಪ್ರಸ್ತುತ ದೇವಾಲಯದಲ್ಲಿ ಅರ್ಚಕರಾಗಿ ಸೂರ್ಯನಾರಾಯಣ ರಾವ್ ಸೇವೆಸಲ್ಲಿಸುತಿದ್ದು. ಪ್ರತೀ ತಿಂಗಳ ಅಮವಾಸ್ಯೆ, ಸಂಕ್ರಮಣ ಹಾಗೂ ಹುಣ್ಣಿಮೆಯ ದಿನದಂದು ವಿಶೇಷ ಪೂಜೆ ನಡೆಯುತ್ತಿದೆ. ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಹರ್ಷ ಆರ್. ಜೈನ್ ರವರು ಯಥಾಶಕ್ತಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಮುಂದಾಳುತ್ವದಲ್ಲಿ ಪ್ರತಿವರ್ಷ ಮಾಯಿದ ಪುಣ್ಣಮೆ ಅಂದರೆ ಮಾರ್ಚ್ ತಿಂಗಳಂದು ವರ್ಷಾವಧಿ ಜಾತ್ರೆಯು ಬಹಳ ಸಡಗರದೊಂದಿಗೆ ನಡೆಯುತ್ತಿದ್ದು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಹುರುಂಬಿದೊಟ್ಟು, ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ, ಶ್ರೀ ಮಹೇಶ್ವರಿ ಮಹಿಳಾಕೇಂದ್ರಾ ಶಿರ್ಲಾಲು, ಬೆಳ್ತಂಗಡಿ ತಾಲೂಕು ರವರು ಸಾಥ್ ನೀಡುತ್ತಿದ್ದಾರೆ.

ಕಾಯಕಲ್ಪಕ್ಕೆ ಕಾಯುತ್ತಿದೆ..

ಇಷ್ಟೆಲ್ಲಾ ಇತಿಹಾಸವನ್ನು ಹೊಂದಿದ್ದರೂ, ಈ ದೈವ‌ನಿರ್ಮಿತ ಮಹಾಲಿಂಗೇಶ್ವರ ದೇವಸ್ಥಾನ ಈ‌ವರೆಗೆ ಒಮ್ಮೆಯೂ ಜೀರ್ಣೋಧ್ದಾರ ಗೊಳ್ಳದೇ ಇರುವುದು ಇಲ್ಲಿನ ಭಕ್ತರಲ್ಲಿ ಬೇಸರ ಮೂಡಿಸಿದೆ, ಸರ್ಕಾರ ಜನಪ್ರತಿ‌ನಿಧಿಗಳು, ಧಾರ್ಮಿಕ ದತ್ತಿ ಇಲಾಖೆ ಗ್ರಾಮೀಣ ಪ್ರದೇಶಗಳ ಇಂತಹಾ ಶಕ್ತಿದೇವಸ್ಥಾನಗಳ ಅಭಿವೃದ್ಧಿಗೆ ಯೋಜನೆ ರೂಪಿಸಬೇಕಾಗಿದೆ. ಗ್ರಾಮದ ಜನರೂ ಈ ಕುರಿತಾಗಿ ಒಗ್ಗಟ್ಟಿನಿಂದ ಒಮ್ಮನಸ್ಸಿನ ಹೆಜ್ಜೆ‌ಇಡಬೇಕಾಗಿದೆ.

More articles

Latest article