ಮಂಗಳೂರು : ಕೊರೊನಾ ತಡೆಗಟ್ಟುವ ಹಿನ್ನೆಲೆ ಲಾಕ್‌ಡೌನ್‌ ನಿಂದಾಗಿ ನಿರ್ಬಂಧಿಸಲಾಗಿದ್ದ ಕೇರಳ ಕರ್ನಾಟಕ ಅಂತರ್‌ ರಾಜ್ಯ ಸಂಚಾರವನ್ನು ಈಗ ನಿರ್ಬಂಧವನ್ನು ಸಡಿಲಿಕರಿಸಿದ್ದು, ಕಾಸರಗೋಡು ಜಿಲ್ಲೆಗೆ ದ.ಕ. ಜಿಲ್ಲೆಯಿಂದ ಪ್ರವೇಶಿಸಲು ಇಚ್ಛಿಸುವವರಿಗೆ ಪಾಸ್‌ ಪಡೆದು ಬರಬಹುದು ಎಂದು ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ. ಸಜಿತ್‌ ಬಾಬು ಆದೇಶಿಸಿದ್ದಾರೆ.
ಈ ಬಗ್ಗೆ ಆದೇಶ ಹೊರಡಿಸಿರುವ ಅವರು, ಜೂ. 3 ರ ಬುಧವಾರದಿಂದ ಜಾರಿಗೆ ಬರುವಂತೆ ದ.ಕ. ಜಿಲ್ಲೆಯಿಂದ ಕಾಸರಗೋಡು ಜಿಲ್ಲೆಗೆ ಪ್ರವೇಶಿಸಲು ಬಯಸುವ ವ್ಯಕ್ತಿಗಳು ಕೋವಿಡ್-19 ಜಾಗೃತಾ ಪೋರ್ಟಲ್ ನಲ್ಲಿ ತುರ್ತು ಪಾಸ್‌ಗಾಗಿ ನೋಂದಾವಣೆ ಮಾಡಿ ದೈನಂದಿನ ಅಂತರ ರಾಜ್ಯ ಪ್ರಯಾಣ ಎಂಬ ಕಾರಣವನ್ನು ನಮೂದಿಸಬೇಕು. ಈ ಆನ್‌ಲೈನ್‌ ಅರ್ಜಿ ಲಭಿಸಿದ ಒಂದು ಗಂಟೆಯೊಳಗಾಗಿ ಕಾಸರಗೋಡಿನ ಹೆಚ್ಚುವರಿ ಜಿಲ್ಲಾಧಿಕಾರಿ ಅಥವಾ ಕಾಞಂಗಾಡ್‌ನ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಪಾಸ್‌ಗಳನ್ನು ವಿತರಿಸಲು ಆದೇಶ ನೀಡುತ್ತಾರೆ. ಹಾಗೆಯೇ ಈ ಪಾಸ್‌ಗಳಿಗೆ 28 ದಿವಸಗಳ ಅವಧಿ ಇರುತ್ತವೆ ಎಂದು ತಿಳಿಸಿದ್ದಾರೆ. ಈ ಪಾಸ್ ಒದಗಿಸಿದ ಬಳಿಕ, ಪಾಸ್ ನ ಸಮಗ್ರ ಮಾಹಿತಿಗಳನ್ನು ಚೆಕ್ ಪೋಸ್ಟ್ ಸಮೀಪ ಕ್ಯಾಂಪ್ ನಡೆಸುತ್ತಿರುವ ಮಂಜೇಶ್ವರ ತಹಶೀಲ್ದಾರ್‌ರವರ ಸಮಕ್ಷಮ ನೀಡಿ ವ್ಯಕ್ತಿಯ ಹೆಸರು, ವಿಳಾಸ, ಫೋನ್ ನಂಬರ್, ಪ್ರವೇಶಿಸುವ ದಿನಾಂಕ, ಮರಳಿ ಹೋಗುವ ದಿನಾಂಕ ಇತ್ಯಾದಿ ಇಲ್ಲಿ ನಮೂದಿಸಬೇಕಿದೆ ಎಂದು ತಿಳಿಸಿದ್ದಾರೆ.
ಹಾಗೆಯೇ ಪಾಸ್ ಲಭಿಸಿದ ಕೂಡಲೇ ನಿತ್ಯ ಪ್ರಯಾಣಿಕರು ತಲಪಾಡಿ ಬಳಿ ಇರುವ ಚೆಕ್ ಪೋಸ್ಟ್ ನಲ್ಲಿ ಹಾಜರಾಗಿ ಅಲ್ಲಿರುವ ವೈದ್ಯಕೀಯ ತಂಡದ ಕೋವಿಡ್19 ಪರಿಶೋಧನೆಗೆ ಒಳಪಡಬೇಕು. ಥರ್ಮಲ್ ಸ್ಕ್ಯಾನರ್ ಮುಂತಾದ ಪರಿಶೋಧನಾ ಉಪಕರಣಗಳ ಮೂಲಕ ಜ್ವರ ಇತ್ಯಾದಿ ಕೋವಿಡ್ ಲಕ್ಷಣಗಳ ಪ್ರಾಥಮಿಕ ಪರೀಕ್ಷೆ ಅಲ್ಲಿ ನಡೆಯಲಿದ್ದು ಈ ಕೌಂಟರ್ ಬಳಿ ಇರುವ ಇನ್ನೊಂದು ಕೌಂಟರ್ ನಲ್ಲಿ ಪ್ರಯಾಣಿಕರು ಪ್ರವೇಶಿಸುವಾಗ ಮತ್ತು ಮರಳುವಾಗ ದಿನಾಂಕ ನಮೂದಿಸಿ ‌ಸಹಿ ಹಾಕಬೇಕು. ಇವೆಲ್ಲವನ್ನು ಕಾಸರಗೋಡು ಜಿಲ್ಲೆಗೆ ಪ್ರವೇಶಿಸುವಾಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಸಂಚರಿಸುವಾಗ ಕಡ್ಡಾಯವಾಗಿ ಪಾಲಿಸಬೇಕು ಎಂದು ಆದೇಶಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here