ಮಂಗಳೂರು : ಕಳೆದ ಹಲವು ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು ಸಂಸ್ಥೆಯು, ಇದೀಗ ಎದುರಾಗಿರುವ ಕೊರೋನಾ ಕಷ್ಟಕಾಲದಲ್ಲೂ ಪ್ರಜ್ಞಾವಂತಿಕೆ ಮೆರೆದಿದ್ದು, 600 ಕ್ಕೂ ಅಧಿಕ ಬಡಕುಟುಂಬಗಳಿಗೆ ನೆರವಿನ ಹಸ್ತ ಚಾಚಿದೆ.
ಮಂಗಳೂರಿನ ಕಂಕನಾಡಿಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿ, ಗ್ರಾಮ ಪಂಚಾಯತ್ ಮಟ್ಟದಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮಗಳ ಜೊತೆಯಲ್ಲಿ ವಿಶೇಷವಾಗಿ ಕೌಟುಂಬಿಕ ದೌರ್ಜನ್ಯ ಹಾಗೂ ಸಮಾಜದಲ್ಲಿ ನಿರಂತರ ಕಿರುಕುಳಗಳಿಗೆ ತುತ್ತಾಗುತ್ತಿರುವ ಮಹಿಳೆಯರಿಗೆ ಸಾಂತ್ವನ ನೀಡುವ, ಸಮಸ್ಯೆಗೆ ಪರಿಹಾರ, ನ್ಯಾಯ ದೊರಕಿಸಿಕೊಡುವ ಕಾರ್ಯವನ್ನು ನಡೆಸುತ್ತಿದೆ. ಸರಕಾರದ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಸಮಾಜಮುಖಿಯಾಗಿ ಮುನ್ನಡೆಯುತ್ತಿದೆ.


ಪ್ರಸ್ತುತ ಸಂಸ್ಥೆಯು ಹೆಣ್ಣುಮಕ್ಕಳ ಹಾಗೂ ಮಹಿಳಾ ಹಕ್ಕುಗಳ ಸಬಲೀಕರಣ ಮತ್ತು ಪ್ರವರ್ತನ ಯೋಜನೆಯಡಿಯಲ್ಲಿ ಕಿನ್ನಿಗೋಳಿ ವ್ಯಾಪ್ತಿಯನ್ನು ಕೇಂದ್ರವಾಗಿರಿಸಿಕೊಂಡು ಸುಮಾರು ಎರಡು ವರ್ಷಗಳಿಂದ 12 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತ್ತು ಮಹಿಳೆಯರ ಸುರಕ್ಷತೆ ಮತ್ತು ಅಭಿವೃದ್ಧಿಯನ್ನು ಧ್ಯೇಯವಾಗಿರಿಸಿಕೊಂಡು ಅನೇಕ ಜಾಗೃತಿ ಹಾಗೂ ಮಾಹಿತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಸ್ಥಳೀಯ ಗ್ರಾಮ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ಸಂಯೋಜನೆಯೊಂದಿಗೆ ಹತ್ತು ಹಲವು ಜಾಗೃತಿ ಆಧಾರಿತ ಕಾರ್ಯಕ್ರಮಗಳನ್ನು ನಿರ್ವಹಿಸುವುದರೊಂದಿಗೆ, ಇದೀಗ ಕೋವಿಡ್-19 ಲಾಕ್ಡೌನ್ ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಸಮುದಾಯಗಳ ಬಡ ಮತ್ತು ಅರ್ಹ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆಯೊಂದಿಗೆ ಮಾಸ್ಕ್ ಧರಿಸುವ ಅವಶ್ಯಕತೆಯ ಬಗ್ಗೆ ಜಾಗೃತಿ ಮೂಡಿಸುವಂತಹ ಪ್ರಕ್ರಿಯೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಸಂಸ್ಥೆಯು ಸುಮಾರು 12 ಗ್ರಾಮಪಂಚಾಯತ್ ವ್ಯಾಪ್ತಿಯ ಸುಮಾರು 600 ಅರ್ಹ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆಯೊಂದಿಗೆ ಮಾಸ್ಕ್ ನೀಡುವ ಗುರಿಯನ್ನು ಹೊಂದಿದೆ.

ಫಲಾನುಭವಿಗಳ ಆಯ್ಕೆಯಲ್ಲೂ ಪ್ರಜ್ಞಾವಂತಿಕೆ

ಕಷ್ಟಕಾಲದಲ್ಲಿ ನೀಡುವ ಆಹಾರಕ್ಕೆ ದುರುಪಯೋಗವಾಗಬಾರದು ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎನ್ನುವ ಕಾಳಜಿಯಿಂದ ಪ್ರಜ್ಞಾ ಸಲಹಾ ಕೇಂದ್ರ ಅರ್ಹ ಫಲಾನುಭವಿಗಳ ಆಯ್ಕೆಗೆ ಆಯ್ದುಕೊಂಡ ರೀತಿ ವಿಭಿನ್ನವಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ ಅದರಲ್ಲೂ ತಳಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವ್ಯಾಪ್ತಿಯ ಗ್ರಾಮೀಣ ಮಟ್ಟದಲ್ಲಿ ಮನೆ ಭೇಟಿ ನಡೆಸುತ್ತಿರುವ ಆಶಾಕಾರ್ಯಕರ್ತೆಯರ ಮೂಲಕ ಫಲಾನುಭವಿಗಳ ಆಯ್ಕೆ ಕಾರ್ಯವನ್ನು ನಡೆಸಿದೆ. ಆ ಮೂಲಕ ಸಂಕಷ್ಟದಲ್ಲಿರುವ ಫಲಾನುಭವಿಗಳನ್ನು ತಲುಪಿ, ಅವರ ಕಣ್ಣೊರೆಸುವ ಕಾರ್ಯ ಮಾಡುತ್ತಿದೆ, ಜೊತೆಗೆ ಕಿಟ್ ವಿತರಣೆಯ ಸಂದರ್ಭ ಸಾಮಾಜಿಕ ಅಂತರ, ಮಾಸ್ಕ್ ಬಳಕೆ, ಸ್ಯಾನಿಟೈಸರ್ ಬಳಕೆ ಯ ಅಗತ್ಯತೆಗಳ ಬಗ್ಗೆಯೂ ಜಾಗೃತಿ ಮೂಡಿಸುತ್ತಿರುವುದು ಇಲ್ಲಿ ಗಮನೀಯ ವಿಚಾರ.
ಹೆಣ್ಣುಮಕ್ಕಳ ಹಾಗೂ ಮಹಿಳಾ ಹಕ್ಕುಗಳ ಸಬಲೀಕರಣ ಮತ್ತು ಪ್ರವರ್ತನ ಯೋಜನೆಯ ಸಂಯೋಜನಾಧಿಕಾರಿ ವಿಲಿಯಂ ಸ್ಯಾಮುವೆಲ್ ಅವರ ಮುತುವರ್ಜಿಯಲ್ಲಿ, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರ ಉಪಸ್ಥಿತಿಯಲ್ಲಿ ಆಹಾರ ಕಿಟ್ ಹಾಗೂ ಮಾಸ್ಕ್ ಗಳನ್ನು ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ನಡೆಸಲಾಗುತ್ತಿದೆ. ಪ್ರಜ್ಞಾ ಸಂಸ್ಥೆಯ ಕಾರ್ಯ ಕ್ಷೇತ್ರಗಳನ್ನು ಹೊಂದಿರುವ ಕಿನ್ನಿಗೋಳಿ, ಮೆನ್ನಬೆಟ್ಟು, ಐಕಳ, ಕಲ್ಲಮುಂಡ್ಕೂರು ತೆಂಕಮಿಜಾರು, ಎಕ್ಕಾರ್, ಕೆಮ್ರಾಲ್, ಪಡುಪಣಂಬೂರು, ಬಲ್ಕುಜೆ, ಅತಿಕಾರಿಬೆಟ್ಟು, ಕಿಲ್ಪಾಡಿ, ಮುಚ್ಚೂರು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳ್ಳುತ್ತಿದೆ.
…………………….
ಕೊರೋನ ವೈರಸ್ ನ ಅಪಾಯದಿಂದಾಗಿ ಇಡೀ ಲೋಕಕ್ಕೆ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಪ್ರಜ್ಞಾ ಸಲಹಾ ಕೇಂದ್ರ , ಸಂಕಷ್ಟದಲ್ಲಿರುವವರಿಗೆ ಅಗತ್ಯ ನೀಡುವ ಪ್ರಯತ್ನ ಮಾಡಿದೆ,ಮಾಡುತ್ತಿದೆ.
-ಹಿಲ್ಡಾ ರಾಯಪ್ಪನ್
ಆಡಳಿತ ವ್ಯವಸ್ಥಾಪಕರು
ಪ್ರಜ್ಞಾ ಸಲಹಾ ಕೇಂದ್ರ
ಕಂಕನಾಡಿ ಮಂಗಳೂರು
………………….

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here