ಬಂಟ್ವಾಳ: ಮಳೆಯ ಮುಂಜಾಗ್ರತೆ ಹಾಗೂ ಪರಿಹಾರ ಕಾರ್ಯಗಳಿಗಾಗಿ ಪ್ರತಿ ಗ್ರಾ.ಪಂ.ಮಟ್ಟದಲ್ಲಿ ಈಗಾಗಲೇ ಅಸ್ತಿತ್ವದಲ್ಲಿ ಟಾಸ್ಕ್ಪೋರ್ಸ್ ಸಮಿತಿಯನ್ನು ಮತ್ತಷ್ಟು ಚುರುಕುಗೊಳಿಸಿ, ಈ ಸಮಿತಿಯು ವಾರದೊಳಗೆ ಸಭೆ ನಡೆಸಿ ತಾ.ಪಂ.ಇಒಗೆ ವರದಿ ಸಲ್ಲಿಸುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಪಿಡಿಒಗಳಿಗೆ ಸೂಚನೆ ನೀಡಿದರು.

ಬಿ.ಸಿ.ರೋಡಿನಲ್ಲಿರುವ ತಾ.ಪಂ.ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ಅವರು ಸೋಮವಾರ ಮಳೆಗಾಲದ ಮುಂಜಾಗ್ರತೆಗಳ ಕುರಿತು ಅಧಿಕಾರಿಗಳ ಸಭೆ ನಡೆಸಿದರು. ಪ್ರತಿ ಗ್ರಾ.ಪಂ.ಗಳಲ್ಲೂ ಈಗಾಗಲೇ ಕೋವಿಡ್-೧೯ ಟಾರ್ಸ್ಪೋರ್ಸ್ಗಳಿದ್ದು, ಅದನ್ನೇ ಹೆಚ್ಚು ಕ್ರೀಯಾಶೀಲಗೊಳಿಸಿ ಅರಣ್ಯ, ಮೆಸ್ಕಾಂ ಅಧಿಕಾರಿಗಳನ್ನು ಸೇರಿಸಿಕೊಂಡು ಸಮಿತಿ ಕೆಲಸ ಮಾಡಬೇಕಿದೆ. ನಿಮ್ಮ ಸಭೆಯ ವರದಿಯ ಆಧಾರದಲ್ಲಿ ನಾವು ಅವುಗಳಿಗೆ ಬೇಕಾದ ಪರಿಹಾರ ಕ್ರಮಗಳನ್ನು ಕಲ್ಪಿಸಲಿದ್ದೇವೆ ಎಂದರು.
ತಹಶೀಲ್ದಾರ್ ರಶ್ಮಿ ಎಸ್.ಆರ್. ಅವರು, ತಾಲೂಕಿನಲ್ಲಿ ಅಂಗಡಿಗಳ ಮುಂದೆ ಕುಡಿದು ಬಿಸಾಡಿದ ಸೀಯಾಳ ಹಾಗೂ ಬಾಟಲ್‌ಗಳಲ್ಲಿ ನೀರು ನಿಲ್ಲದಂತೆ ಅಂಗಡಿಯವರಿಗೆ ಸೂಚನೆ ನೀಡುವಂತೆ ಸಭೆಯಲ್ಲಿ ತಿಳಿಸಿದರು. ಈ ಕುರಿತು ನೋಟಿಸ್ ನೀಡುವಂತೆ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಪಿಡಿಒಗಳಿಗೆ ಸೂಚಿಸಿದರು.
ಮುಂದಿನ ದಿನಗಳಲ್ಲಿ ಕೋವಿಡ್-೧೯ ಹಾಗೂ ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರಿಕೆಯಿಂದ ಕೆಲಸ ಮಾಡುವ ಸವಾಲು ಎಲ್ಲರ ಮೇಲಿದೆ ಎಂದು ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ ಸಭೆಗೆ ತಿಳಿಸಿದರು.
ಮಳೆಗಾಲದ ಹಿನ್ನೆಲೆಯಲ್ಲಿ ಈಗಾಗಲೇ ತಾಲೂಕು ಕಚೇರಿಯಲ್ಲಿ ಕಂಟ್ರೋಲ್ ರೂಂ ತೆರೆಯ ಲಾಗಿದ್ದು,ಮುನ್ನಚ್ಚರಿಕೆಯಾಗಿ ಎರಡು ಬೋಟ್ ಗಳನ್ನು ಕಾದಿರಿಸಲಾಗಿದೆ. ಇನ್ನು ಹೆಚ್ಚುವರಿ ೪ ಬೋಟ್‌ಗಾಗಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ತಹಶೀಲ್ದಾರ್ ಶಾಸಕರ ಗಮನಕ್ಕೆ ತಂದರು. ಕೂಡಲೇ ಚರಂಡಿಗಳ ಹೂಳೆತ್ತುವುದು, ಅಪಾಯಕಾರಿ ಮರಗಳನ್ನು ತೆರವುಗೊಳಿಸುವುದು ಹಾಗೂ ಜೋತು ಬಿದ್ದ, ಹಳೆ ವಿದ್ಯುತ್ ತಂತಿಗಳನ್ನು ತೆರವುಗೊಳಿಸುವಂತೆ ಶಾಸಕರು ಸಂಬಂಧಪಟ್ಟ ಇಲಾಖಾಽಕಾರಿಗಳಿಗೆ ಸೂಚಿಸಿದರು. ಮಳೆಯಿಂದ ಹಾನಿಯಾದ ಸ್ಥಳಗಳಿಗೆ ಗ್ರಾಮಕರಣಿಕರು ತತ್‌ಕ್ಷಣ ಭೇಟಿ ನೀಡಿ, ಹಾನಿಗೊಳಗಾದ ಮನೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಶಾಸಕರು ಸೂಚಿಸಿದರು.
ಕೋವಿಡ್-೧೯ನಿಂದಾಗಿ ಎಸೆಸೆಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಿಭಾಯಿಸುವ ಸವಾಲು ನಮ್ಮೆಲ್ಲರ ಮೇಲಿದ್ದು, ಇದು ಶಿಕ್ಷಣ ಇಲಾಖೆಯ ಕಾರ್ಯ ಎಂದು ಯಾರೂ ಕೂಡ ಜವಾಬ್ದಾರಿಯಿಂದ ನುಣುಚಿಕೊಳ್ಳದೆ ಕೆಲಸ ಮಾಡಬೇಕಿದೆ. ಜತೆಗೆ ಕನ್ಯಾನ, ಕರೋಪಾಡಿಯಂತಹ ಗಡಿ ಪ್ರದೇಶಗಳಲ್ಲಿ ಕೇರಳದ ವಿದ್ಯಾರ್ಥಿಗಳನ್ನು ಕೂಡ ಕರೆದುಕೊಂಡು ಬಂದು ಪರೀಕ್ಷೆ ಬರೆಸಬೇಕಿದೆ. ಹೀಗಾಗಿ ನಾವು ಎಲ್ಲರೂ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಿ ಪರೀಕ್ಷೆಯನ್ನು ಯಶಸ್ವಿಗೊಳಿಸಬೇಕಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬಂಟ್ವಾಳ ಕ್ಷೇತ್ರದಲ್ಲಿ ೨೫ ಎಕರೆ ಜಾಗವಿದ್ದರೆ ಸರಕಾರದಿಂದ ವಸತಿ ಶಾಲೆ ಮಂಜೂರಾಗಲಿದ್ದು, ಸ್ಥಳ ಗುರುತಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಜತೆಗೆ ಜಾಗ ಗುರುತಿಸಿದರೆ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಮಾರುಕಟ್ಟೆ, ವರ್ಕಿಂಗ್ ವಿಮೆನ್ಸ್ ಹಾಸ್ಟೆಲ್ ಕೂಡ ಮಂಜೂರಾಗಲಿದೆ ಎಂದು ಶಾಸಕರು ಸಭೆಗೆ ತಿಳಿಸಿದರು.

ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಬಂಟ್ವಾಳ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಟಿ.ಡಿ.ನಾಗರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here