ಬಂಟ್ವಾಳ: ಕೆಪಿಸಿಸಿ ಅಧ್ಯಕ್ಷರಾಗಿ ಜೂನ್ 7ರಂದು ಡಿ.ಕೆ‌.ಶಿವಕುಮಾರ್ ಅಧಿಕೃತವಾಗಿ ಅಧಿಕಾರ ಸ್ವೀಕರಿಸುವ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತಾ ಸಭೆ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆಯಿತು.

ಕೊರೋನ ಹಿನ್ನೆಲೆಯಲ್ಲಿ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಕಾರ್ಯಕರ್ತರು ಪಾಲ್ಗೊಳ್ಳುವುದಕ್ಕೆ ನಿರ್ಬಂಧ ಇರುವುದರಿಂದ ಕಾರ್ಯಕ್ರಮದ ನೇರ ಪ್ರಸಾರವನ್ನು ಪ್ರತೀ ಬೂತ್ ಮಟ್ಟದಲ್ಲಿ ಹಾಗೂ ಬಂಟ್ವಾಳ ಪುರಸಭೆ ವ್ಯಾಪ್ತಿಯ ಮೂರು ಕಡೆ ಪ್ರದರ್ಶಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಪಕ್ಷದ ವತಿಯಿಂದ ಸಿದ್ಧಪಡಿಸಲಾಗಿರುವ ಮೊಬೈಲ್ ಆ್ಯಪ್ ಹಾಗೂ ಟಿ.ವಿ.ಚಾನಲ್ ಗಳಲ್ಲಿ ಅಧಿಕಾರ ಸ್ವೀಕಾರ ಕಾರ್ಯಕ್ರಮದ ನೇರ ಪ್ರಸಾರ ಇರಲಿದೆ. ಆ ದಿನ ಗ್ರಾಮೀಣ ಭಾಗದಲ್ಲಿ ಆ್ಯಪ್ ಮೂಲಕ ನೇರ ಪ್ರಸಾರ ವೀಕ್ಷಿಸುವ ವ್ಯವಸ್ಥೆಯನ್ನು ಮಾಡುವಂತೆ ಸಭೆಯಲ್ಲಿ ಚರ್ಚುಸಲಾಯಿತು.

ಬಂಟ್ವಾಳ ಪುರಸಭಾ ವ್ಯಾಪ್ತಿಯ ಕಾರ್ಯಕರ್ತರಿಗೆ ಪಾಣೆಮಂಗಳೂರು, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಹಾಗೂ ಬಿರ್ವ ಸಭಾಂಗಣದಲ್ಲಿ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಇತ್ತೀಚಿಗೆ ಪಾಣೆಮಂಗಳೂರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿದ ಯುವಕನ ರಕ್ಷಣೆಗೆ ಪ್ರಯತ್ನಿಸಿದ ಆರು ಮಂದಿ ಯುವಕರನ್ನು ಸನ್ಮಾನಿಸಲಾಯಿತು.

ಮಾಜಿ ಸಚಿವ ಬಿ.ರಮಾನಾಥ ರೈ, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ರೈ, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಮಂಜುಳಾ ಮಾವೆ, ಕೆಪಿಸಿಸಿ ಬಂಟ್ವಾಳ ಉಸ್ತುವಾರಿ ಸವಿತಾ ರಮೇಶ್ ಮೊದಲಾದವರು ಮೊದಲಾದವರು ಉಪಸ್ಥಿತರಿದ್ದರು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here