


ಉಪ್ಪಿನಂಗಡಿ: ಉಡುಪಿ ಮೂಲದ ವ್ಯಕ್ತಿಯೋರ್ವರು ಉಪ್ಪಿನಂಗಡಿಯಲ್ಲಿ ಹೊಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಪ್ರಸ್ತುತ ಲಾಕ್ಡೌನ್ ಹಿನ್ನೆಲೆಯಲ್ಲಿ ನೆಕ್ಕಿಲಾಡಿ ಎಂಬಲ್ಲಿ ವಾಸವಾಗಿದ್ದರು.
ಮೇ.27 ರಂದು ಇವರು ಕುಸಿದು ಬಿದ್ದು ಮೃತಪಟ್ಟಿದ್ದು, ಸದರಿ ವ್ಯಕ್ತಿ ಜ್ವರದಿಂದ ಬಳಲುತ್ತಿದ್ದರು ಎಂದು ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಕೊರೋನಾ ವೈರಸ್ ಭಯದಿಂದ ಯಾರೂ ನೆರವಿಗೆ ಬಾರದ್ದರಿಂದ ಶವ ಸಂಸ್ಕಾರ ಮಾಡಲೂ ಆಗದೆ, ಶವವನ್ನು ಊರಿಗೆ ಸಾಗಿಸಲೂ ಆಗದೆ ಮನೆಯವರು ಅಸಹಾಯಕರಾಗಿ ಪೊಲೀಸ್ ಠಾಣೆಯ ಬಾಗಿಲಲ್ಲಿ ಕಾಯುವ ಸ್ಥಿತಿ ಎದುರಾಯಿತು. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ನೆರವಿಗೆ ಆಗಮಿಸಿದ ಉಪ್ಪಿನಂಗಡಿ ಪೋಲಿಸ್ ಠಾಣಾಧಿಕಾರಿ ಡಿ.ಎನ್ ಈರಯ್ಯರವರು ಖಾಸಗಿ ಆ್ಯಂಬುಲೆನ್ಸ್ ಚಾಲಕರೋರ್ವರ ಮನವೊಲಿಸಿ ಆತನಿಗೆ ಪಿಪಿಇ ಉಡುಪನ್ನು ಒದಗಿಸಿ ಶವವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸುವಲ್ಲಿ ಯಶಸ್ವಿಯಾದರು. ತಮ್ಮ ಬಿಡುವುರಹಿತ ಕರ್ತವ್ಯದ ಹೊರತಾಗಿಯೂ ಸದಾ ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸುವ ಉಪ್ಪಿನಂಗಡಿ ಪೊಲೀಸ್ ಠಾಣಾಧಿಕಾರಿ ಮತ್ತು ಸಿಬ್ಬಂದಿಗಳು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.





